ಇತರ ದೇಶಗಳಂತೆ ಭಾರತವು ಎಲೆಕ್ಟ್ರಿಕ್ ಕಾರುಗಳನ್ನು ಹೊಂದುವಲ್ಲಿ ಮುಂಚೂಣಿಗೆ ಬರಬೇಕು. ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವುದು ನಮ್ಮ ಕಂಪನಿಯ ಆದ್ಯತೆಯ ವಿಷಯವಾಗಿದೆ ಎಂದು ಉದ್ಯಮಿ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಭಾರತವು ಈಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಬದಲಾಗುತ್ತಿದೆ. ಅನೇಕ ಮುಂದುವರೆದ ರಾಷ್ಟ್ರಗಳಂತೆ ಭಾರತ ದೇಶವು ಎಲೆಕ್ಟ್ರಿಕ್ ಕಾರುಗಳ ದೇಶವಾಗಿ ಬದಲಾಗಬೇಕು. ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವ ಕೆಲಸ ಸ್ವಾಭಾವಿಕ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಎನ್ಡಿಟಿವಿ ವರದಿ ಮಾಡಿದೆ.
ಭವಿಷ್ಯದಲ್ಲಿ ಎಲ್ಲಾ ವಾಹನಗಳು ಎಲೆಕ್ಟ್ರಿಕ್ ಆಗುತ್ತವೆ ಮತ್ತು ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಅಷ್ಟೇ ಎಂದು ಅವರು ಹೇಳಿದ್ದಾರೆ.
ಟೆಸ್ಲಾ ಕಂಪನಿ ಭಾರತದಲ್ಲಿ ಹೊಸ ಇವಿ ನೀತಿ ಅನುಷ್ಠಾನಗೊಂಡ ನಂತರ ತನ್ನ ಉತ್ಪಾದನಾ ಘಟಕ ಸ್ಥಾಪಿಸಲು ಪ್ರಯತ್ನದಲ್ಲಿದೆ. ಗುಜರಾತ್ ಅಥವಾ ಮಹಾರಾಷ್ಟ್ರದಲ್ಲಿ ರೊಬೊ ಆಧಾರಿತ ಇವಿ ಕಾರುಗಳ ಉತ್ಪಾದನಾ ಘಟಕ ಸ್ಥಾಪಿಸಲು ನೋಡುತ್ತಿದೆ.