ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪ್ರಮುಖ ಬ್ರಾಂಡ್ಗಳ ಕಾರುಗಳು ಭಾರತಕ್ಕೆ ಶೀಘ್ರದಲ್ಲಿ ಬರಲಿದೆ. ವಿದೇಶಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದರೂ, ಕೆಲವೊಂದು ಬ್ರಾಂಡ್ಗಳು ಅವುಗಳನ್ನು ಭಾರತಕ್ಕೆ ತರಲು ಹಿಮದೇಟು ಹಾಕುತ್ತಿವೆ. ಇಂಡೋನೇಷ್ಯಾದ ಆಟೊ ಶೋನದಲ್ಲಿ ಪ್ರಮುಖ ಬ್ರಾಂಡ್ಗಳು ಪ್ರದರ್ಶನಗೊಂಡಿವೆ. ಇಲ್ಲಿ ಪ್ರದರ್ಶನಗೊಂಡ ಹಲವು ಕಾರುಗಳು ಭಾರತಕ್ಕೆ ಬರುವ ಸಾಧ್ಯತೆ ನಿಚ್ಚಳವಾಗಿದೆ. ಹಾಗಿದ್ದರೆ ಭಾರತದ ರಸ್ತೆಗೆ ಇಳಿಯಲಿರುವ ಕಾರುಗಳ ಪಟ್ಟಿ ಹೀಗಿದೆ…
ಹೊಂಡಾ ಡಬ್ಲೂಆರ್–ವಿ
ಎಲಿವೇಟ್ ಮೂಲಕ ಜಪಾನ್ನ ಹೊಂಡಾ ತನ್ನ ಕಾರುಗಳಿಗೆ ಹೊಸ ಸ್ವರೂಪ ನೀಡಲಾರಂಭಿಸಿದೆ. ಭಾರತದ ಮಾರುಕಟ್ಟೆಯಲ್ಲಿ ಹೊಂಡಾ ಕಂಪನಿ ಇತ್ತೀಚಗೆ ಬಿಡುಗಡೆ ಮಾಡಿದ ನೈಜ ಎಸ್ಯುವಿ ಇದಾಗಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಎಸ್ಯುವಿ ಮಾದರಿಯ ಕಾರುಗಳನ್ನು ಇನ್ನಷ್ಟು ಉತ್ಪಾದಿಸುವುದವತ್ತ ಗಮನ ಹರಿಸಿದೆ.
ಆದರೆ ಭಾರತದ ಬೆಲೆ ಸಮರ ಮಾರುಕಟ್ಟೆಯಲ್ಲಿ ಹೊಂಡಾ ತನ್ನ ಡಬ್ಲೂಆರ್–ವಿ ಕಾರಿನ ಉದ್ದನವನು 4 ಮೀ. ಒಳಗೆ ತರಬೇಕಿದೆ. ಡಬ್ಲೂಆರ್–ವಿ ಕಾರು 1.2 ಲೀ. ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಲಿದ್ದು, 88ಬಿಎಚ್ಪಿ ಅಶ್ವಶಕ್ತಿ ಮತ್ತು 110ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಮ್ಯಾನ್ಯುಯಲ್ ಹಾಗೂ ಸಿವಿಟಿ ಗೇರ್ಬಾಕ್ಸ್ ಅನ್ನು ಇದು ಹೊಂದಿರಲಿದೆ.
ಹ್ಯುಂಡೈ ಸ್ಟಾರ್ಗೇಜರ್
ಭಾರತದ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದವರ ಕೈಗೆಟಕುವ ಬೆಲೆಗೆ 7 ಆಸನಗಳ ಕಾರುಗಳನ್ನು ಹ್ಯುಂಡೈ ಹೊಂದಿಲ್ಲ. ಆದರೆ ಇಂಡೋನೇಷ್ಯಾದಲ್ಲಿ ಸ್ಟಾರ್ಗೇಜರ್ ಎಂಬ ಬ್ರಾಂಡ್ನ ಕಾರನ್ನು ಕಂಪನಿ ಹೊಂದಿದೆ. ಇದೊಂದು ಅತ್ಯುತ್ತಮ ಎಂಪಿವಿ ಆಗಿದ್ದು, ಮಾರುತಿ ಎರ್ಟಿಗಾ, ಎಕ್ಸ್ಎಲ್6, ಕಿಯಾ ಕಾರೇನ್ಸ್ಗೆ ಪೈಪೋಟಿ ನೀಡಲಿದೆ. ಈ ಕಾರಿನ ಬಹುತೇಕ ಬಿಡಿಭಾಗಗಳು ಕ್ರೇಟಾಗೆ ಬಳಸುವುದೇ ಆಗಿರುವುದರಿಂದ ಭಾರತಕ್ಕೆ ಇದನ್ನು ಕರೆತರುವುದು ಸುಲಭ. 2024ರ ಅಂತ್ಯದೊಳಗೆ ಈ ಕಾರು ಭಾರತದಲ್ಲಿ ಬಿಡಗುಡೆಯಾಗುವ ಸಾಧ್ಯತೆ ಇದೆ.
ಹೊಸ ತಲೆಮಾರಿನ ಕಿಯಾ ಕಾರ್ನಿವಲ್
ಈ ವರ್ಷದ ಆರಂಭದಲ್ಲಿ ಕಿಯಾ ಕಂಪನಿಯು ತನ್ನ ಕಾರ್ನಿವಲ್ ವಿಲಾಸಿ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿದೆ. ಆದರೆ, ಹೊಸ ತಲೆಮಾರಿನ ಕಾರ್ನಿವಲ್ ಭಾರತಕ್ಕೆ ಶೀಘ್ರದಲ್ಲಿ ಬರಲಿದೆ. ಇದು ಹಿಂದಿನ ಕಾರ್ನಿವಲ್ನ ಫೇಸ್ಲಿಫ್ಟ್ ಆಗಿರಲಿದೆ. ಹಿಂದಿನ ಮಾದರಿಯ ಕಿಯಾಗಿಂತ ಇದು ಹೊರ ಭಾಗದಲ್ಲಿ ಹೆಚ್ಚು ತೀಕ್ಷ್ಣವಾದ ಅಂಚುಗಳಿರುವುದು ಕಂಡುಬಂದಿದೆ. 2.2 ಲೀ, ಡೀಸೆಲ್ ಎಂಜಿನ್ ಇದು ಹೊಂದಿರಲಿದೆ. ಫೀಚರ್ ವಿಭಾಗದಲ್ಲಿ 12 ಇಂಚುಗಳ ಇನ್ಫೊಟೈನ್ಮೆಂಟ್ ಸ್ಕ್ರೀನ್ ಇದು ಹೊಂದಿರಲಿದೆ. ವಿಂಗ್ಔಟ್ ಹೆಡ್ರೆಸ್ಟ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರಲಿದೆ. 2024ರ ಜೂನ್ ನಂತರ ಇದು ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ.
ಮಿಟ್ಸುಬಿಷಿ ಎಕ್ಸ್–ಫೋರ್ಸ್
ಭಾರತಕ್ಕೆ ಮಿಟ್ಸುಬಿಷಿ ಮತ್ತೆ ಮರಳುವುದಿಲ್ಲ ಎಂಬ ಭಾವನೆಯೇ ಹಲವರಲ್ಲಿದೆ. ಆದರೆ ಭಾರತದ ಮಾರುಕಟ್ಟೆಗಾಗಿಯೇ ಎಕ್ಸ್–ಫೋರ್ಸ್ ಕಾರು ಸಿದ್ಧಗೊಂಡಿದೆ. ಫ್ರಾನ್ಸ್ನ ಕಾರು ತಯಾರಿಕ ಕಂಪನಿ ರಿನೊ ಹಾಗೂ ಜಪಾನ್ನ ನಿಸ್ಸಾನ್ ಜತೆಗೂಡಿ ಮಿಟ್ಸುಬಿಷಿ ಭಾರತದಲ್ಲಿ ಮತ್ತೆ ಸದ್ದು ಮಾಡಲು ಬರುತ್ತಿದೆ. ರಿನೊ ಮತ್ತು ನಿಸ್ಸಾನ್ ಜತೆಗೂಡಿ ಸಿ–ಎಸ್ಯುವಿ ಎಂಬ ಮಾದರಿಯ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ಸದ್ಯ ಜಾಗತಿಕ ಮಟ್ಟದಲ್ಲಿ ಎಕ್ಸ್–ಫೋರ್ಸ್ ಎಂಬ ಮಾದರಿಯಲ್ಲಿ ಪರಿಚಯಗೊಂಡಿರುವ ಕಾರು, ಭಾರತದಲ್ಲಿ ಡಸ್ಟರ್ ಹೆಸರಿನಲ್ಲೇ ರಸ್ತೆಗಿಳಿಯಲಿದೆ ಎಂದೆನ್ನಲಾಗಿದೆ. ಭಾರತೀಯರ ಅಪೇಕ್ಷೆಗೆ ತಕ್ಕಂತೆ ಇದರ ರೂಪ ಮತ್ತು ಸೌಲಭ್ಯಗಳು ಬದಲಾಗಲಿವೆ. 2025ರ ದೀಪಾವಳಿ ಸಂದರ್ಭದಲ್ಲಿ ಈ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ರಿನೊ ಹೊಂದಿದೆ.
ಕಿಯಾ ಇವಿ9
ಭಾರತದ ಮಾರುಕಟ್ಟೆಗೆ ಬರುತ್ತಿರುವ ಮತ್ತೊಂದು ಜಾಗತಿಕ ಮಟ್ಟದ ಕಾರು ಕಿಯಾ ಇವಿ9. ಕೊರಿಯಾದ ಕಿಯಾ ಕಂಪನಿಯು ಈಗಾಗಲೇ ಇವಿ6 ಕಾರನ್ನು ಪರಿಚಯಿಸಿದೆ. ಇದೀಗ 2024ರಲ್ಲಿ ಇವಿ9 ಮಾದರಿಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇಂಡೊನೇಷ್ಯಾದ ಆಟೊ ಎಕ್ಸ್ಪೋದಲ್ಲಿ ಇದು ಪ್ರದರ್ಶನಗೊಂಡಿದ್ದು, ಹೊಸ ಸೌಲಭ್ಯಗಳೊಂದಿಗೆ ಕಾರು ಹೆಚ್ಚು ಸೆಳೆಯುವಂತಿದೆ. ಬಾಗಿಲ ಒಳಗೆ ಸೇರಿಕೊಳ್ಳುವ ಎನ್ಕ್ಲೋಸ್ಡ್ ಡೋರ್ ಹ್ಯಾಂಡಲ್ಸ್, ದೊಡ್ಡ ಗಾತ್ರದ ಗಾಲಿಗಳು, ಬಾನೆಟ್ ವಿನ್ಯಾಸ, ಹಿಂಬದಿ ಲಂಭವಾದ ದೊಡ್ಡ ಟೈಲ್ ಲ್ಯಾಂಪ್ ಅನ್ನು ಇದು ಹೊಂದಿದೆ. ಇವಿ9 ಕಾರು ಆರ್ಡಬ್ಲೂಡಿ ಮತ್ತು ಎಡಬ್ಲೂಡಿ ಮಾದರಿಯಲ್ಲಿ ಪರಿಚಯಗೊಳ್ಳುವ ಸಾಧ್ಯತೆ ಇದೆ.