ಕಾರು ಮಾಲೀಕತ್ವದ ಹೊಸ ಬಗೆಯ ಅನುಭೂತಿ ನೀಡಲು ಒರಿಕ್ಸ್ ಆಟೊ ಇನ್ಫಾಸ್ಟ್ರಕ್ಚರ್ ಸರ್ವೀಸ್ ಜತೆಗೂಡಿ ಕಿಯಾ ಇಂಡಿಯಾ ಹೊಸ ಯೋಜನೆಯೊಂದನ್ನು ರೂಪಿಸಿದೆ.
ಈ ಕುರಿತಂತೆ ಕಿಯಾ ಲೀಸ್ ಹಾಗೂ ಒರಿಕ್ಸ್ ನಡುವೆ ಒಡಂಬಡಿಕೆ ನಡೆದಿದೆ.
‘ಈ ಯೋಜನೆ ಮೂಲಕ ಹೆಚ್ಚು ಜನರಿಗೆ ಕಿಯಾ ಬ್ರಾಂಡ್ ತಲುಪಲಿದೆ. ಜತೆಗೆ ಕಿಯಾ ಬಯಸುವ ಗ್ರಾಹಕರಿಗೆ ಮಾಲೀಕತ್ವದ ಜವಾಬ್ದಾರಿ ಇಲ್ಲದೆ, ವಿಮೆ ಪಾವತಿಸದೇ, ರಿಸೇಲ್ ಗೋಜು ಇಲ್ಲದೆ ಕಾರನ್ನು ಹೊಂದಬಹುದಾಗಿದೆ’ ಎಂದು ಕಿಯಾ ಹೇಳಿದೆ.
ಈ ಯೋಜನೆಯು ಆರಂಭದಲ್ಲಿ ಬೆಂಗಳೂರು ಒಳಗೊಂಡಂತೆ ದೆಹಲಿ ಎನ್‌ಸಿಆರ್, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಪುಣೆಯಲ್ಲಿ ಜಾರಿಗೆ ಬರಲಿದೆ.
‘ಲೀಸ್ ಮಾದರಿಯು ಜಾಗತಿಕ ಮಟ್ಟದಲ್ಲಿ ಸದ್ಯ ಟ್ರೆಂಡ್‌ನಲ್ಲಿದೆ. ಭಾರತದಲ್ಲಿ ಈಗ ಇದು ಬಳಕೆಗೆ ಬರುತ್ತಿದೆ. ಅದರಲ್ಲೂ ಹೊಸ ತಲೆಮಾರಿನ ಗ್ರಾಹಕರಿಗೆ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಸುಲಭಗೊಳಿಸುವ ಕ್ರಮ ಇದಾಗಿದೆ’ ಎಂದು ಕಿಯಾ ಇಂಡಿಯಾದ ಮಾರುಕಟ್ಟೆ ವಿಭಾಗದ ಮ್ಯುಂಗ್ ಸಿಕ್ ಸೋನ್ ತಿಳಿಸಿದ್ದಾರೆ.
‘ಮುಂದಿನ 4ರಿಂದ 5 ವರ್ಷಗಳಲ್ಲಿ ಈ ಯೋಜನೆ ಶೇ 100ರಷ್ಟು ಬೆಳವಣಿಗೆ ಕಾಣಲಿದೆ. ಉತ್ತಮ ಉತ್ಪನ್ನ ಹಾಗೂ ಸೇವಾ ಸೌಕರ್ಯಗಳನ್ನು ಆಧರಿಸಿದ ಕೈಗಾರಿಕೆಯ ಬೆಳವಣಿಗೆಗೆ ತಕ್ಕಂತೆ ಕಂಪನಿಯು ತನ್ನ ಲೀಸಿಂಗ್ ಸೌಲಭ್ಯವನ್ನು ವಿಸ್ತರಿಸುವ ಯೋಜನೆ ಹೊಂದಿದೆ’ ಎಂದಿದ್ದಾರೆ.