ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು 2023–24ನೇ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹2,754 ಕೋಟಿ ತೆರಿಗೆ ನಂತರದ ನಿವ್ವಳ ಲಾಭ ಗಳಿಸಿದೆ.
ವಾಹನಗಳ ವಿಭಾಗದಲ್ಲಿನ ಉತ್ತಮ ಬೆಳವಣಿಗೆ ಹಾಗೂ ಕೃಷಿ ಉಪಕರಣಗಳ ಮಾರಾಟದ ವಹಿವಾಟು ಹೆಚ್ಚಳದಿಂದಾಗಿ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ.
2022–23ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹2,637 ಕೋಟಿ ತೆರಿಗೆ ನಂತರದ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 4ರಷ್ಟು ಏರಿಕೆಯಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ತಿಳಿಸಿದೆ.ನಾಲ್ಕನೇ ತ್ರೈಮಾಸಿಕದಲ್ಲಿ ವರಮಾನವು ಶೇ 9ರಷ್ಟು ಏರಿಕೆಯಾಗಿದೆ. ಒಟ್ಟು ವರಮಾನವು ₹32,456 ಕೋಟಿಯಿಂದ ₹35,452 ಕೋಟಿಗೆ ತಲುಪಿದೆ.
2022–23ನೇ ಪೂರ್ಣ ಆರ್ಥಿಕ ವರ್ಷದಲ್ಲಿ ಕಂಪನಿಯು ₹9,025 ಕೋಟಿ ನಿವ್ವಳ ಲಾಭಗಳಿಸಿತ್ತು. 2023–24ರಲ್ಲಿ ₹11,269 ಕೋಟಿ ಗಳಿಸಿದೆ. ಒಟ್ಟಾರೆ ಲಾಭದಲ್ಲಿ ಶೇ 25ರಷ್ಟು ಹೆಚ್ಚಳವಾಗಿದೆ. ವರಮಾನವು ₹1.21 ಲಕ್ಷ ಕೋಟಿಯಿಂದ ₹1.39 ಲಕ್ಷ ಕೋಟಿಗೆ (ಶೇ 15ರಷ್ಟು) ಏರಿಕೆಯಾಗಿದೆ.
‘ಈ ಆರ್ಥಿಕ ವರ್ಷದಲ್ಲಿ ಕಂಪನಿಯು ವಹಿವಾಟು ಸದೃಢವಾಗಿದೆ. ವಾಹನಗಳ ಮಾರಾಟವು ಹೆಚ್ಚಿದೆ. ಮಾರುಕಟ್ಟೆಯ ಕಠಿಣ ಪರಿಸ್ಥಿತಿಯ ನಡುವೆಯೂ ಕೃಷಿ ಉಪಕರಣಗಳ ಮಾರಾಟದಲ್ಲಿ ಏರಿಕೆಯಾಗಿದೆ. ಆಸ್ತಿಯ ಗುಣಮಟ್ಟದಲ್ಲಿ ಮಹೀಂದ್ರ ಫೈನಾನ್ಸ್ ಸ್ಥಿರವಾದ ಕಾರ್ಯಕ್ಷಮತೆ ತೋರಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅನಿಶ್ ಶಾ ತಿಳಿಸಿದ್ದಾರೆ.