ಭಾರತದಲ್ಲಿ ಭರವಸೆ ಮೂಡಿಸಿರುವ ಮೋರಿಸ್ ಗ್ಯಾರೇಜ್ (MG)ನ ಅತ್ಯಂತ ಭರವಸೆಯ ಆಸ್ಟರ್ ಕಾರಿಗೆ ಕಂಪನಿ ಹೊಸ ರೂಪ ನೀಡಿದೆ.
ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಅಲ್ಲಲ್ಲಿ ಹರಿದಾಡುತ್ತಿವೆ. ಪ್ರೀಮಿಯಮ್ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿದ್ದ ಆಸ್ಟರ್ ಈಗ SUV ಸ್ವರೂಪದಲ್ಲಿ ಭಾರತದಲ್ಲಿ ಪರಿಚಯಗೊಳ್ಳಲಿದೆಯೇ…? ಇದಕ್ಕೆ ಕಂಪನಿಯೇ ಉತ್ತರ ನೀಡಬೇಕಿದೆ. ಅದೂ ಶೀಘ್ರದಲ್ಲೇ ಆಗಲಿದೆ ಎಂಬ ಮಾಹಿತಿ ವಾಹನ ಲೋಕದಿಂದ ಲಭ್ಯವಾಗಿದೆ.
ಹೀಗಾಗಿ ಹೊಸ ರೂಪದಲ್ಲಿ ಬರುತ್ತಿರುವ ಎಂಜಿ ಆ್ಯಸ್ಟರ್ ಈ ಬಾರಿ ಎಸ್‌ಯುವಿಯಾಗಿ ಬದಲಾಗಿದೆ. ಮುಂಭಾಗದಲ್ಲಿ ಡೈಮಂಡ್ ಮೆಶ್ ಗ್ರಿಲ್‌ನ ಬಂಪರ್ ಇದೆ. ಹೆಡ್‌ಲ್ಯಾಂಪ್ ಕೂಡಾ ಹೊಸ ಸ್ವರೂಪ ಪಡೆದಿದೆ. ಮುಂಭಾಗದಲ್ಲಿ ನೀಲಿ ಬಣ್ಣದ ಪಟ್ಟಿಯೊಂದು ಕಾರಿಗೆ ಹೊಸ ಕಳೆ ನೀಡಿದೆ.
ಹಿಂಬದಿಯಿಂದ ಆ್ಯಸ್ಟರ್ ಹಿಂದಿನಂತೆಯೇ ಕಾಣುತ್ತಿದೆ. ಆದರೆ ಹಿಂಬದಿ ಟೇಲ್ ಲೈಟ್ ಈ ಬಾರಿ ಬದಲಾಗಿದೆ. ಒಳಭಾಗಕ್ಕೆ ಸಂಪೂರ್ಣ ಹೊಸ ಕಳೆ ಬಂದಿದೆ. ಬಂಪರ್‌ನ ನೋಟವು ಎಸ್‌ಯುವಿಯಂತೆ ಕಾಣುವಂತೆ ಮಾಡಿದೆ. ರೂಫ್ ಸ್ಪಾಯ್ಲರ್ ಹಾಗೂ ಅದರೊಳಗೆ ಸ್ಟಾಪ್ ಲ್ಯಾಂಪ್, ಹಿಂಬದಿಯ ವೈಪರ್ ಮತ್ತು ಹೊಸ ಮಾದರಿಯ ಡುಯಲ್ ಟೋನ್ ಅಲಾಯ್ ವೀಲ್ ಆ್ಯಸ್ಟರ್‌ನ ಸ್ವರೂಪವನ್ನೇ ಬದಲಿಸಿದೆ.
ಟೆಸ್ಟ್ ಡ್ರೈವ್‌ನಲ್ಲಿರುವ ಎಂಜಿ ಕಂಪನಿಯ ಹೊಸ ಆ್ಯಸ್ಟರ್‌ನ ಒಳಭಾಗವೂ ಅಸ್ಪಷ್ಟವಾಗಿ ಗೋಚರಿಸಿದೆ. ಕ್ಯಾಬಿನ್ ಬಣ್ಣ ಸಂಪೂರ್ಣ ಕಪ್ಪಾಗಿದೆ. ಡುಯಲ್ ಸ್ಕ್ರೀನ್ ಹೊಂದಿದೆ. 3 ಸ್ಪೋಕ್‌ನ ವೀಲ್ ಇದೆ. ಮಧ್ಯದಲ್ಲಿರುವ ಕನ್ಸೋಲ್ ಅಪ್‌ಡೇಟ್ ಆಗಿದೆ. ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗೂ ಗೇರ್ ಲಿವರ್ ಹೊಸ ಸ್ವರೂಪ ಪಡೆದಿದೆ.
ನೂತನ ಆ್ಯಸ್ಟರ್‌ನ ಎಂಜಿನ್ ಕೋಣೆಯಲ್ಲಿರುವ ಉಪಕರಣ ಹಾಗೂ ಅದರ ಸಾಮರ್ಥ್ಯದ ವಿವರ ಲಭ್ಯವಾಗಿಲ್ಲ. ಆದರೆ ಮೂಲಗಳ ಮಾಹಿತಿಯಿಂದ, ಎರಡು ಮಾದರಿಯ ಎಂಜಿನ್‌ನಲ್ಲಿ ಈ ಕಾರು ಲಭ್ಯ ಎಂದೆನ್ನಲಾಗುತ್ತಿದೆ. ಅದರಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಇದ್ದು, 108 ಅಶ್ವಶಕ್ತಿ ಉತ್ಪಾದಿಸುತ್ತ ಹಾಗೂ 144 ನ್ಯೂಟನ್ ಮೀಟರ್‌ನಷ್ಟು ಟಾರ್ಕ್ ನೀಡಲಿದೆ. ಜತೆಗೆ 5 ಸ್ಪೀಡ್‌ನ ಮ್ಯಾನ್ಯುಯಲ್ ಗೇರ್ ಹಾಗೂ ಸಿವಿಟಿ ಆ್ಯಟೊಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿರಲಿದೆ. ಮತ್ತೊಂದು 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಇದ್ದು, ಇದು 138 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಜತೆಗೆ 220 ನ್ಯೂಟನ್ ಮೀಟರ್‌ನಷ್ಟು ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದರಲ್ಲಿ 6 ಸ್ಪೀಡ್ ಆ್ಯಟೊಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ ಎಂದೆನ್ನಲಾಗಿದೆ.