ನಮ್ಮ ಮನೆಯ ಕೆಲಸವನ್ನು ನಾವೇ ಮಾಡಿಕೊಳ್ಳುವಂತೆ, ನಮ್ಮ ಕಾರಿನ ನಿರ್ವಹಣೆಯನ್ನೂ ನಾವೇ ಮಾಡಿಕೊಳ್ಳುವುದು ಸುಲಭ. ಆದರೆ ತಾಂತ್ರಿಕವಾಗಿ ಅಷ್ಟೊಂದು ನಿಪುಣರಿಲ್ಲ ಎಂಬ ಹಿಂಜರಿಕೆಯಿಂದ ಹೆಚ್ಚಿನ ಹಣ ನೀಡಿ ಸರ್ವೀಸ್ ಸ್ಟೇಷನ್ ಮೊರೆ ಹೋಗುವುದು ಸಾಮಾನ್ಯ.
ಆದರೆ ಈ ಒಂದು ವೆಬ್‌ಸೈಟ್ ಅನುಸರಿಸಿದರೆ, ನಮ್ಮ ಮನೆಯ ಗ್ಯಾರೇಜ್‌ನಲ್ಲೇ ನಮ್ಮ ಕಾರುಗಳನ್ನು ಸುಲಭವಾಗಿ ಸರ್ವೀಸ್ ಮಾಡಿಕೊಳ್ಳಬಹುದು, ಏನಾದರೂ ಸಮಸ್ಯೆ ಎದುರಾದರೆ, ಅದನ್ನು ಸರಿಪಡಿಸಿಕೊಳ್ಳಬಹುದು. ಅದು ಏರ್‌ಫಿಲ್ಟರ್, ಕೂಲೆಂಟ್ ಬದಲಾವಣೆ, ಕಾರಿನ ಎಂಜಿನ್ ಫ್ಯೂಸ್, ಬ್ಯಾಟರಿ ಸಮಸ್ಯೆ, ಟೈರ್, ಲೈಟ್, ಸೀಟ್ ಏನೇ ಇರಲಿ. ಎಲ್ಲದಕ್ಕೂ ಇಲ್ಲಿ ವಿಡಿಯೊ ಸಹಿತ ಮಾಹಿತಿ ಲಭ್ಯ.
CarCareKiosk ಈ ಒಂದು ವೆಬ್‌ಸೈಟ್‌ನಲ್ಲಿ ಬರೋಬ್ಬರಿ 55 ಕಾರುಗಳಲ್ಲಿ ಸಾಮಾನ್ಯವಾಗಿ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರವಿದೆ. ಇದರ ಬಳಕೆಯೂ ಬಹು ಸುಲಭ.
ನಿಮ್ಮ ಬಳಿ ಇರುವ ಕಾರು ಯಾವುದು ಎಂಬುದನ್ನು ಪರದೆ ಮೇಲಿರುವ ಚಿತ್ರ ಅಥವಾ ಪಕ್ಕದಲ್ಲೇ ಇರುವ ಆಯ್ಕೆ ಗುಂಡಿ ಮೂಲಕ ಸೆಲೆಕ್ಟ್ ಮಾಡಿಕೊಳ್ಳಿ. ಯಾವ ವರ್ಷದಲ್ಲಿ ತಯಾರಾದದ್ದು, ಮಾಡೆಲ್ ಯಾವುದು, ಎಂಜಿನ್ ಯಾವುದು ಎಂಬುದನ್ನು ಡ್ರಾಪ್‌ಡೌನ್ ಬಟ್ಟನ್ ಮೂಲಕ ಆಯ್ಕೆ ಮಾಡಿಕೊಳ್ಳಿ. ನಂತರ ಯಾವ ವಿಷಯವಾಗಿ ಕಾರಿನ ಕೆಲಸ ಮಾಡಬೇಕೆಂದಿದ್ದೀರಿ ಎಂಬುದನ್ನು ಆಯ್ಕೆ ಮಾಡಿ.
ಇದಾದ ತಕ್ಷಣವೇ, ಪರದೆ ಮೇಲೆ ಅದಕ್ಕೆ ಸಂಬಂಧಿಸಿದ ವಿಡಿಯೊ ಮೂಡಲಿದೆ. ಅಲ್ಲಿ ಪ್ರತಿಯೊಂದು ಮಾಹಿತಿಯೂ ಸುಲಭವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸಲಾಗಿದೆ. ಅದನ್ನು ಅನುಸರಿಸುವ ಮೂಲಕ ನಮ್ಮ ಕಾರಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ಔಡಿ, ಬಿಎಂಡಬ್ಲೂ, ಮರ್ಸಿಡಿಸ್, ಫಿಯೆಟ್, ಫೋಕ್ಸ್‌ವ್ಯಾಗನ್, ಹೊಂಡಾ, ಸುಜುಕಿ, ಸ್ಕೊಡಾ ಹೀಗೆ ಜಾಗತಿಕ ಮಟ್ಟದ 55 ಬ್ರಾಂಡ್‌ಗಳ ಕಾರುಗಳ ಮಾಹಿತಿ ಲಭ್ಯ
ಆದರೆ, ಸಮಸ್ಯೆ ಜಟಿಲವಾಗಿದ್ದರೆ ಗೊತ್ತಿರುವ ಮೆಕ್ಯಾನಿಕ್ ಸಲಹೆ ಪಡೆಯುವುದು ಉತ್ತಮ.