ಜಪಾನ್‌ನ ಆಟೊ ಟೆಸ್ಟಿಂಗ್‌ನಲ್ಲಿ ಭಾರೀ ಹಗರಣ: ವಾಹನಗಳ ರಫ್ತು ರದ್ದು; ಪ್ರಸಿದ್ಧ ಕಂಪನಿಗಳು ಭಾಗಿ

ಟೊಯೊಟಾ ಅಧ್ಯಕ್ಷ ಅಕಿಯೊ ಟೊಯೊಡಾ ಸುದ್ದಿಗೋಷ್ಠಿಯಲ್ಲಿ ಬಾಗಿ ನಮಿಸಿದರು

ಟೊಕಿಯೊ: ವಾಹನಗಳ ಟೆಸ್ಟಿಂಗ್‌ ಮಾಹಿತಿ ತಿದ್ದಿರುವ ಅಥವಾ ಸಮರ್ಪಕ ಟೆಸ್ಟಿಂಗ್‌ ನಡೆಸದಿರುವ ಆರೋಪವನ್ನು ಟೊಯೊಟಾ, ಹೊಂಡಾ, ಸುಜುಕಿ ಸೇರಿದಂತೆ ಜಪಾನ್‌ನ ಇತರ ನಾಲ್ಕು ವಾಹನ ತಯಾರಿಕಾ ಕಂಪನಿಗಳು ಒಪ್ಪಿಕೊಂಡಿವೆ ಎಂದು ದಿ ಜಪಾನ್‌ ಟೈಮ್ಸ್ ವರದಿ ಮಾಡಿದೆ.

ತಪ್ಪು ಮಾಹಿತಿ ಸಲ್ಲಿಕೆ, ಎಂಜಿನ್ ನಿಯಂತ್ರಕ ತಂತ್ರಾಂಶದ ಮರುಸೃಷ್ಟಿ, ಟೆಸ್ಟಿಂಗ್‌ ವರದಿಯಲ್ಲಿ ತಪ್ಪು ಮಾಹಿತಿ ದಾಖಲು, ಸರಿಯಾಗಿ ಟೆಸ್ಟಿಂಗ್‌ ನಡೆಸದ ಹಾಗೂ ಕ್ರಾಶ್‌ ಟೆಸ್ಟ್‌ಗೆ ಬಳಸಿದ ವಾಹನಗಳಲ್ಲಿ ಅಸಮರ್ಪಕ ಮಾರ್ಪಾಡು ಮಾಡಿರುವ ಲೋಪಗಳು ನಡೆದಿವೆ.

ಈ ಆರೋಪ ಕುರಿತಂತೆ ತನಿಖೆ ನಡೆಯುತ್ತಿದೆ. ಆದರೆ ಹೀಗೆ ನಡೆದಿರಬಹುದಾದ ಲೋಪಗಳ ಲಕ್ಷಣ ಮತ್ತು ಅದರ ಆಳ ಎಷ್ಟು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. 

ಹೀಗೆ ಟೆಸ್ಟಿಂಗ್ ಲೋಪ ನಡೆದಿರುವುದರಲ್ಲಿ 38 ವಾಹನ ಮಾದರಿಗಳು ಸೇರಿವೆ. ಇವುಗಳಲ್ಲಿ ಆರು ಈಗಲೂ ಮಾರುಕಟ್ಟೆಯಲ್ಲಿವೆ. 32 ರದ್ದಾಗಿವೆ. ಸದ್ಯ ಉತ್ಪಾದನೆ ಆಗುತ್ತಿರುವ ವಾಹನಗಳ ರಫ್ತು ರದ್ದಾಗಿದೆ.

ತಮ್ಮ ಸಮೂಹ ಸಂಸ್ಥೆಗಳ ವಂಚನೆಯ ಜಾಲದೊಳಗೆ ಟೊಯೊಟಾ ಈವರೆಗೂ ಮುಳುಗಿತ್ತು. ಆದರೆ, ತನ್ನಲ್ಲೇ ಇಂಥ ನಿಯಮಗಳ ಪಾಲನೆಯಾಗುತ್ತಿಲ್ಲ ಎಂದು ಸ್ವತಃ ಹೇಳಿಕೊಂಡಿದೆ.

ಈ ಕುರಿತು ಹೇಳಿಕೊಂದನ್ನು ನೀಡಿರುವ ಜಪಾನ್‌ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ, ‘ತಾನು ಪರೀಕ್ಷೆಗೆ ಒಳಪಡಿಸಿದ ವಾಹನಗಳ ಪರೀಕ್ಷಾ ಗುಣಮಟ್ಟವು ಸರ್ಕಾರ ನಿಗದಿಪಡಿಸಿದ ಗುಣಮಟ್ಟದ ಮಾದರಿಗೆ ತಕ್ಕಂತಿಲ್ಲ. ಆದರೆ ಅವುಗಳ ಕಾರ್ಯಕ್ಷಮತೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆಯ ಅಥವಾ ನಿಯಂತ್ರಣದ ಸಮಸ್ಯೆ ಎದುರಾಗಿಲ್ಲ’ ಎಂದಿದೆ.

ಈ ಕುರಿತಂತೆ ಸುದ್ದಿಗೋಷ್ಠಿ ಕರೆದಿದ್ದ ಟೊಯೊಟಾ ಅಧ್ಯಕ್ಷ ಅಕಿಯೊ ಟೊಯೊಡಾ ಕ್ಷಮಾಪಣೆ ಕೇಳಿದ್ದಾರೆ.

‘ಪ್ರಮಾಣೀಕರಣ ವ್ಯವಸ್ಥೆಯ ಅಡಿಪಾಯವನ್ನೇ ಇದು ಅಲುಗಾಡಿಸಿದೆ. ಕಾರು ತಯಾರಕರಾಗಿ ನಾವು ಇಂಥವುಗಳಿಂದ ದೂರ ಇರಬೇಕಾಗಿದೆ’ ಎಂದಿದ್ದಾರೆ.

ಸದ್ಯ ಈ ಪ್ರಕರಣ ಕುರಿತು ಜಪಾನ್‌ನ ಸಾರಿಗೆ ಇಲಾಖೆ ತನಿಖೆ ಕೈಗೊಂಡಿದೆ. ಟೊಯೊಟಾ ಮುಖ್ಯ ಕಚೇರಿಯಲ್ಲೂ ಶೋಧ ಹಾಗೂ ತನಿಖೆ ನಡೆಯುತ್ತಿದೆ. ಕಂಪನಿಯ ಕೊರೊಲಾ ಫೀಲ್ಡರ್‌, ಕೊರೊಲಾ ಆಕ್ಸಿಯೊ ಹಾಗೂ ಯೆರಿಸ್‌ ಕ್ರಾಸ್ ಮಾದರಿಗಳ ರಫ್ತು ರದ್ದಾಗಿದೆ ಎಂದು ವರದಿಯಾಗಿದೆ.

ಟೊಯೊಟಾದೊಂದಿಗೆ ಹೊಂಡಾ ಮೊಟಾರ್ಸ್‌, ಮಾಜ್ದಾ, ಯಮಾಹಾ ಮೋಟಾರ್‌ ಹಾಗೂ ಸುಜುಕಿ ಮೊಟಾರ್‌ ಕಂಪನಿಗಳೂ ವಾಹನಗ ಪರೀಕ್ಷೆಯ ಲೋಪವನ್ನು ಒಪ್ಪಿಕೊಂಡಿವೆ.

ಎಂಜಿನ್‌ ಪರೀಕ್ಷೆ ಸಮರ್ಪಕವಾಗಿ ನಡೆದಿಲ್ಲ ಎಂದು ಮಾಜ್ದಾ ಒಪ್ಪಿಕೊಂಡಿದೆ. ಕಂಪನಿಯ ರೋಡ್‌ಸ್ಟರ್ ಆರ್‌ಎಫ್‌ ಹಾಗೂ ಮಾಜ್ದಾದ 2 ಮಾದರಿಯ ರಫ್ತು ಸ್ಥಗಿತಗೊಂಡಿವೆ.

ಉತ್ಪಾದನೆ ರದ್ದುಪಡಿಸಲಾದ ಮೂರು ಮಾದರಿಗಳಾದ ಅತೆಂಝಾ, ಅ್ಯಕ್ಸೆಲಾ ಹಾಗೂ ಮಾಜ್ದಾ 6 ವಾಹನಗಳ ಅಪಘಾತದ ಡಿಕ್ಕಿ ಪರೀಕ್ಷೆಯ ವರದಿಯಲ್ಲಿ ತಪ್ಪು ಮಾಹಿತಿ ಸೇರಿಸಲಾಗಿದೆ ಎಂದು ಕಂಪನಿ ಒಪ್ಪಿಕೊಂಡಿದೆ.

‘ಇಂಥ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಕಂಪನಿ ಎಚ್ಚರವಹಿಸಲಿದೆ. ತನಿಖೆ ಮೂಲಕ ಹೊರಬರುವ ಎಲ್ಲಾ ಸತ್ಯ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ. ಜತೆಗೆ ಎಲ್ಲರ ನಂಬಿಕೆ ಸಂಪಾದಿಸುವತ್ತ ಕಠಿಣ ಪರಿಶ್ರಮ ಹಾಕುತ್ತೇವೆ’ ಎಂದು ಮಾಜ್ದಾ ಸಿಇಒ ಮಸಹಿರೊ ಮೊರೊ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಯಮಹಾ ಕಂಪನಿಯು ತನ್ನ ವೈಝಡ್‌ಎಫ್‌–ಆರ್‌1 ಸ್ಪೋರ್ಟ್ಸ್‌ ಮೊಟಾರ್‌ಸೈಕಲ್‌ನ ಟೆಸ್ಟಿಂಗ್‌ನಲ್ಲಿ ಆಗಿರುವ ಲೋಪಗಳನ್ನು ಒಪ್ಪಿಕೊಂಡಿದೆ. ಹೊಂಡಾ ಕಂಪನಿಯು ತನ್ನ ಹಿಂಪಡೆದ 22 ಮಾದರಿಯ ವಾಹನಗಳ ವರದಿಯಲ್ಲಿ ತಪ್ಪಾಗಿದೆ ಎಂದು ಹೇಳಿದೆ. ಹೊಂಡಾ ಕಂಪನಿಯ ಅಧಿಕಾರಿಗಳು ಕ್ಷಮೆಯಾಚಿಸಿದ್ದು, ವಾಹನಗಳ ಪರೀಕ್ಷೆ ಅಸಮರ್ಪಕವಾಗಿದೆ ಎಂದು ಒಪ್ಪಿಕೊಂಡಿದೆ.

ಸುಜುಕಿ ಕೂಡಾ ಒಂದು ಮಾದರಿಯ ಟೆಸ್ಟಿಂಗ್ ವರದಿಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಒಪ್ಪಿಕೊಂಡಿದೆ.

ಟೊಯೊಟಾ ಕಂಪನಿಯು ತನ್ನ ವಾಹನದ ಹಿಂಬದಿಗೆ ಅಪಘಾತವಾಗುವ ಪರೀಕ್ಷೆಗೆ ಮಾನದಂಡಗಳ ಪ್ರಕಾರ 1,100ಕೆ.ಜಿ. ಗಾಡಿಯನ್ನು ಬಳಸುವ ಬದಲು, 1,800ಕೆ.ಜಿ. ಗಾಡಿಯನ್ನು ಬಳಸಿದೆ.

ಕಳೆದ ಡಿಸೆಂಬರ್‌ನಲ್ಲಿ ಟೊಯೊಟಾ ಕಂಪನಿಯ ಘಟಕದ ಮೇಲೆ ಸರ್ಕಾರದ ಅಧಿಕಾರಿಗಳು ದಾಳಿ ನಡೆಸಿದ್ದರು. 1980ರಲ್ಲಿದ್ದ ಕೊಲಿಷನ್‌ ಟೆಸ್ಟಿಂಗ್‌ ದಾಖಲೆಗಳನ್ನೇ ಅನುಸರಿಸುತ್ತಿದ್ದುದನ್ನು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಇರುವ ಏರ್‌ಬ್ಯಾಗ್‌ ತೆರೆಯುವ ಸಾಧನದ ಪರೀಕ್ಷೆಯೂ ನರೀಕ್ಷೆಯಂತೆ ಇರಲಿಲ್ಲ.

ನಂಬಿಕೆ ಹಾಗೂ ಗುಣಮಟ್ಟಕ್ಕೆ ಜಗತ್‌ಪ್ರಸಿದ್ಧಿಪಡೆದಿದ್ದ ಜಪಾನ್‌ನಲ್ಲಿ ಇಂಥದ್ದೊಂದು ಬೃಹತ್‌ ಹಗರಣ ಈಗ ಬಯಲಿಗೆ ಬಂದಿರುವುದು ಜಪಾನ್ ಮಾತ್ರವಲ್ಲ, ಇಡೀ ಜಗತ್ತನ್ನೇ ಬೆಕ್ಕಸಬೆರಗಾಗಿ ನೋಡುವಂತೆ ಮಾಡಿದೆ. ಸುಮಾರು 85 ವಾಹನ ತಯಾರಿಕಾ ಕಂಪನಿಗಳು ಇಂಥ ಸುಳ್ಳು ಫಲಿತಾಂಶವನ್ನು ದಾಖಲಿಸುವ ಸಾಧ್ಯತೆಗಳಿದ್ದು, ಅವುಗಳಿಗೆ ಅಲ್ಲಿನ ಸರ್ಕಾರ ನೋಟಿಸ್ ಜಾರಿ ಮಾಡಿದೆ.

ಈ ಪ್ರಕರಣದಲ್ಲಿ ಆರೋಪ ಕೇಳಿಬಂದಿರುವ ಕಂಪನಿಗಳು ಕ್ಷಮಾಪಣೆ ಕೇಳಿ ಪ್ರಾಮಾಣಿಕತೆ ಮೆರೆದಿವೆ. ಆದರೆ, ಭವಿಷ್ಯದಲ್ಲಿ ಈ ಕಂಪನಿಗಳ ವಾಹನಗಳ ಮೇಲೆ ಗ್ರಾಹಕರು/ ಪ್ರಯಾಣಿಕರು ಹೇಗೆ ನಂಬಿಕೆ ಇಟ್ಟಾರು ಎಂಬುದು ಯಕ್ಷಪ್ರಶ್ನೆಯಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ