ರಾಯಲ್ ಎನ್ಫೀಲ್ಡ್ನ ಹಿಮಾಲಯನ್ 450 ಬೈಕ್ನ ಚಾಸೀಸ್ ಕುರಿತೇ ಕಳೆದ ಕೆಲ ವಾರಗಳಲ್ಲಿ ಅತಿ ಹೆಚ್ಚು ಚರ್ಚೆಗಳು ವಾಹನ ಕ್ಷೇತ್ರದಲ್ಲಿ ನಡೆಯುತ್ತಿದೆ.
ಎರಡು ಹಿಮಾಲಯನ್ ಬೈಕ್ಗಳ ಚಾಸಿಸ್ ವಿಫಲಗೊಂಡಿದ್ದು ಟೂರಿಂಗ್ ಮಾಡುವ ಬೈಕ್ಗಳಲ್ಲಿ ಆತಂಕವನ್ನೇ ಮನೆ ಮಾಡಿದೆ. ಇಂಥದ್ದೊಂದು ಅಪಘಾತ ಎದುರಾದಲ್ಲಿ ಸವಾರರ ಪಾಡೇನು? ಬೆಟ್ಟದ ತಪ್ಪಲಲ್ಲಿ ಹೀಗೊಂದು ಸನ್ನಿವೇಶ ಎದುರಾದರೆ ಏನು ಗತಿ? ಎಂಬುದೇ ಹಿಮಾಲಯನ್ ಬೈಕ್ ಮಾಲೀಕರ ಆತಂಕದ ಮಾತು.
ಈ ಘಟನೆ ಎದುರಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಯಲ್ ಎನ್ಫೀಲ್ಡ್, ಈ ಎರಡು ಬೈಕ್ಗಳಲ್ಲಿ ಆಗಿರುವ ಸಮಸ್ಯೆಯಾದರೂ ಏನು ಎಂಬುದನ್ನು ಪತ್ತೆ ಮಾಡಲು ತಂತ್ರಜ್ಞರ ತಂಡವನ್ನೇ ರಚಿಸಿತ್ತು. ಅದು ನೀಡಿದ ವರದಿ ಆಧರಿಸಿ, ಕಾರಣಗಳ ಪಟ್ಟಿಯನ್ನೇ ನೀಡಿದೆ.
ಈ ಎರಡೂ ಬೈಕ್ಗಳಲ್ಲೂ ಹೆಚ್ಚುವರಿ ಕ್ರಾಶ್ ಗಾರ್ಡ್ಗಳ್ನನು ಅಳವಡಿಸಲಾಗಿತ್ತು. ಹೊಸ ಹಿಮಾಲಯನ್ 450 ಚಾಸೀಸ್ ಎಂದರೆ ಅದೊರಳಗೆ ಎಂಜಿನ್ ಕೂಡಾ ಕೂರಿಸಲಾಗಿರುತ್ತದೆ. ಶೆರ್ಪಾ 450 ಎಂಜಿನ್ ಅನ್ನು ಟ್ಯೂಬ್ಯುಲಾರ್ ಸ್ಟೀಲ್ನ ಮುಖ್ಯ ಫ್ರೇಮ್ ಒಳಗೆ ಕೂರಿಸಲಾಗಿರುತ್ತದೆ.
ಫ್ರೇಮ್ ಒಳಗೆ ಕೂರುವ ಎಂಜಿನ್ಗೆ ವಿಶೇಷವಾದ ಬೋಲ್ಟ್ ಅಳವಡಿಸಲಾಗಿರುತ್ತದೆ. ಜತೆಗೆ ಲೋಡ್ ಬೇರಿಂಗ್ ಯೂನಿಟ್ಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ದೀರ್ಘಕಾಲದವರೆಗೆ ಸರಿಯಾದ ಟಾರ್ಕ್ ಉತ್ಪಾದಿಸುವಂತೆ ವಿನ್ಯಾಸಗೊಳಿಸಲಾಗಿದೆ. ಚಾಸೀಸ್ ಮತ್ತು ಎಂಜಿನ್ ನಡುವೆ ನಿರ್ದಿಷ್ಟವಾದ ಸ್ಪೇಸರ್ ನೀಡಲಾಗಿರುತ್ತದೆ. ಅದು ಟಾರ್ಕ್ ಹೊಂದಿಸಲು ಅನುಕೂಲವಾಗುವಂತೆ ಮುಂಭಾಗದಿಂದ ಬೋಲ್ಟ್ ಅಳವಡಿಸಲಾಗಿರುತ್ತದೆ ಎಂದು ಕಂಪನಿ ವಿವರಿಸಿರುವುದಾಗಿ ಆಟೊಕಾರ್ ಇಂಡಿಯಾ ವರದಿ ಮಾಡಿದೆ.
ಚಾಸಿಸ್ ಸಮಸ್ಯೆ ಎದುರಾದ ಈ ಎರಡೂ ಬೈಕ್ಗಳಲ್ಲಿ ಕಂಪನಿ ಶಿಫಾರಸು ಮಾಡದ ಕ್ರಾಶ್ ಗಾರ್ಡ್ ಅಳವಡಿಸಲಾಗಿತ್ತು. ಅದು ಜೋಡಿಸಲು ಬಳಸಲಾದ ಬೋಲ್ಟ್ ನಿರ್ದಿಷ್ಟ ಗುಣಮಟ್ಟದ್ದಾಗಿರಲಿಲ್ಲ. ಇದರಿಂದ ಟಾರ್ಕ್ ಸೆಟ್ಟಿಂಗ್ ಏರುಪೇರಾಗಿತ್ತು. ಇದನ್ನು ಪತ್ತೆ ಮಾಡುವ ಸಲುವಾಗಿಯೇ ಅಸಮರ್ಪಕ ಟಾರ್ಕ್ನಿಂದ ಆಗುವ ಸಮಸ್ಯೆಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ಅದರ ಪರಿಣಾಮವನ್ನು ಅರಿಯಲಾಯಿತು. ಇದರ ಪರಿಣಾಮವೇ ಚಾಸೀಸ್ ಮೇಲೆ ಅನಗತ್ಯ ಹೊರೆ ಹೆಚ್ಚಳ. ಇದು ದೀರ್ಘಕಾಲದವರೆಗೆ ಮುಂದುವರಿದರೆ, ಅದರ ಪರಿಣಾಮವೇ ಚಾಸೀಸ್ ವೈಫಲ್ಯ ಎಂದಿದೆ.
ಹಿಮಾಲಯ ಬೈಕ್ನ ಮಾಲೀಕರಿಗೆ ನೀಡಲಾಗುವ ಯೂಸರ್ ಮ್ಯಾನುಯಲ್ನಲ್ಲಿ ಈ ರೀತಿಯ ಹೊರಗಿನ ಗಾರ್ಡ್ ಅಳವಡಿಸಿದಲ್ಲಿ ವಾರಂಟಿಗೆ ಅರ್ಹರಲ್ಲ ಎಂದು ನಮೂದಿಸಲಾಗಿದೆ. ಇದರ ಬದಲಾಗಿ ಕಂಪನಿಯೇ ಸಿದ್ಧಪಡಿಸಿದ ಜಿಎಂಎ ಗಾರ್ಡ್ಗಳನ್ನು ಅಳವಡಿಸಲು ಸಲಹೆ ನೀಡಿದೆ. ಏಕೆಂದರೆ ಇವು ಮೋಟಾರ್ಸೈಕಲ್ನ ಇಕ್ಕೆಲಗಳಲ್ಲಿ ಅಳವಡಿಸಲಾಗುತ್ತದೆ. ಹೀಗಾಗಿ ಚಾಸೀಸ್ಗೆ ಯಾವುದೇ ಧಕ್ಕೆಯಾಗದು ಎಂದಿದೆ.
ರಾಯಲ್ ಎನ್ಫೀಲ್ಡ್ನ ಜಿಎಂಎ ಎಂಜಿನ್ ಗಾರ್ಡ್ನ ಬೆಲೆ ₹4,750 ಇದೆ. ಸಂಪ್ ಗಾರ್ಡ್ನೊಂದಿಗೆ ರ್ಯಾಲಿ ಕೇಜ್ನ ಬೆಲೆ ₹9,950 ಇದೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿರುವ ಬಹುತೇಕ ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಹೊರಗಿನಿಂದ ಖರೀದಿಸಿದ ಆಕ್ಸಸರೀಸ್ಗಳನ್ನೇ ಅಳವಡಿಸಲಾಗಿರುತ್ತದೆ. ಇದಕ್ಕೆ ಬಹುಮುಖ್ಯ ಕಾರಣ, ಕಂಪನಿ ಫಿಟ್ಟಿಂಗ್ಗಳಿಗೆ ದುಬಾರಿ ಹಣ. ಅದರಲ್ಲೂ ಹಿಮಾಲಯನ್ ಬೈಕ್ಗಳ ಆಕ್ಸಸರೀಸ್ ಪೂರೈಕೆ ಅಷ್ಟಾಗಿ ಇಲ್ಲದಿರುವುದೂ ಸವಾರರನ್ನು ಹೊರಗಿನ ಮಳಿಗೆಯತ್ತ ಮುಖ ಮಾಡುವಂತೆ ಮಾಡಿದೆ. ಇದು ಆರಂಭಿಕ ಹಣ ಉಳಿಸಿದರೂ, ಅಪಾಯದ ಮಟ್ಟ ಹೆಚ್ಚೇ ಇರುತ್ತದೆ.
ಹಿಮಾಲಯನ್ ಬೈಕ್ನ ಟ್ಯಾಂಕ್ಗೆ ಅಳವಡಿಸುವ ಸ್ಟಾಕ್ ಗಾರ್ಡ್ನಿಂದ ಸಾಕಷ್ಟು ಅನುಕೂಲವಿದೆ. ಹೀಗೆ ಖರೀದಿಸುವ ಅಕ್ಸಸರೀಸ್ಗಳು ಓಇಎಂ ಆಗಿದ್ದಷ್ಟೂ ಕ್ಷೇಮ.