ನವದೆಹಲಿ: ವಂಚಕ ಸುಖೇಶ್ ಚಂದ್ರಶೇಖರ್ನಿಂದ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ 26 ಐಷಾರಾಮಿ ಕಾರುಗಳ ಮಾರಾಟಕ್ಕೆ ದೆಹಲಿ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದೆ.
ಇ.ಡಿ ಕ್ರಮವನ್ನು ಪ್ರಶ್ನಿಸಿ ಸುಖೇಶ್ ಪತ್ನಿ ಲೀನಾ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿ ಆದೇಶಿಸಿದೆ.
ಸುಖೇಶ್ನಿಂದ ವಶಪಡಿಸಿಕೊಂಡಿರುವ ಕಾರುಗಳನ್ನು ಹರಾಜಿನಲ್ಲಿ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ನಿಶ್ಚಿತ ಠೇವಣಿ ಇಡಬೇಕು ಎಂದು ಕಳೆದ ವರ್ಷ ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಲೀನಾ ಮೇಲ್ಮನವಿ ಸಲ್ಲಿಸಿದ್ದರು.
ಲೀನಾ ಅರ್ಜಿ ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ್ ಶರ್ಮಾ ಅವರು, ಎಲ್ಲ 26 ಐಷಾರಾಮಿ ಕಾರುಗಳ ಮಾರಾಟದಿಂದ ಬರುವ ಹಣವನ್ನು ಬಡ್ಡಿ ಬರುವ ನಿಶ್ಚಿತ ಠೇವಣಿಗೆ ಇಡಬೇಕು. ಲೀನಾ ಅವರ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಇ.ಡಿ ಕ್ರಮ ಸರಿಯಾಗಿದೆ ಎಂದು ಹೇಳಿದ್ದಾರೆ.
ತುಂಬಾ ವರ್ಷಗಳಿಂದ ಆ ಕಾರುಗಳನ್ನು ಹಾಗೇ ಶೆಡ್ನಲ್ಲಿ ಇಡುವುದರಿಂದ ಅವುಗಳ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹೀಗಾಗಿ ಅವುಗಳನ್ನು ಮಾರಾಟ ಮಾಡಿ ಹಣ ಠೇವಣಿ ಇಡುವುದೇ ಸೂಕ್ತ ಎಂದು ಆದೇಶಿಸಿದ್ದಾರೆ.
ದೆಹಲಿ ಪೊಲೀಸ್ನ ಆರ್ಥಿಕ ಅಪರಾಧಗಳ ವಿಭಾಗದ ನೇತೃತ್ವದಲ್ಲಿ ಹರಾಜು ನಡೆಯಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕಣವೇನು?
ಬೆಂಗಳೂರು ಮೂಲದ ಸುಖೇಶ್ ಚಂದ್ರಶೇಖರ್ ಎಂಬಾತ ಉದ್ಯಮಿ ಶಿವಿಂದರ್ ಮೋಹನ್ ಸಿಂಗ್ ಎಂಬುವರ ಪತ್ನಿ ಅದಿತಿ ಸಿಂಗ್ಗೆ ಕರೆ ಮಾಡಿ ತಾನು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಪಕ್ಷಕ್ಕೆ ದೇಣಿಗೆ ನೀಡುವಂತೆ ಹೇಳಿ ಅವರಿಂದ ₹200 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದ. ಈ ಪೈಕಿ ₹10 ಕೋಟಿ ಮೌಲ್ಯದ ಉಡುಗೊರೆಗಳನ್ನು ನಟಿ ಜಾಕ್ವೆಲಿನ್ಗೆ ನೀಡಿದ್ದ. ಕೆಲವಷ್ಟು ಹಣದಿಂದ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಎಂದು ಆರೋಪಿಸಲಾಗಿತ್ತು.
ಸುಖೇಶ್ ಚಂದ್ರಶೇಖರ್ ಬಳಿ ಇರುವ ಕಾರುಗಳ ಪಟ್ಟಿ ನೋಡಿದರೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಲ್ಯಂಬೊರ್ಗಿನಿ ಅವೆಂಟಡೋರ್, ಮಲ್ಟಿಪಲ್ ಲ್ಯಾಂಡ್ ರೋವರ್ ರೇಂಜ್ ರೋವರ್ಸ್, ಇಸುಝು ವಿ–ಕ್ರಾಸ್, ರೋಲ್ಸ್ ರಾಯ್ಸ್ ಗೋಷ್ಟ್, ಫೆರಾರಿ 458 ಇಟಾಲಿಯಾ, ಫೆರಾರಿ 488 ಪಿಸ್ಟಾ, ಮರ್ಸಿಡೀಸ್ ಬೆಂಜ್ ಎಸ್63 ಎಎಂಜಿ, ಮ್ಯಾನ್ಸರಿ ವಿನ್ಯಾಸದ ಲ್ಯಾಂಬೊರ್ಗಿನಿ ಉರಸ್, ಮೂರು ಬೆಂಟ್ಲಿ ಸೆಡಾನ್, ಟೂ ಫ್ಲೈಯಿಂಗ್ ಸ್ಪುರ್ಸ್, ಬೆಂಟ್ಲಿ ಬೆಂಟಯಾಗ, ಭಾರತದಲ್ಲಿ ತೀರಾ ಅಪರೂಪ ಎನ್ನಬಹುದಾದ ಬಾರ್ಬಸ್ ಮಾಡಿಫೈಡ್ ಮೇಬ್ಯಾಕ್ ಸುಖೇಶ್ ಬಳಿ ಇತ್ತು.
ಸಂಪೂರ್ಣ ಕಪ್ಪು ಬಣ್ಣದ ರೋಲ್ಸ್ ರಾಯ್ಸ್, ಬಿಳಿ ಬಣ್ಣದ ರೋಲ್ಸ್ ಫ್ಯಾಂಟಮ್, ಗೋಲ್ಡನ್ ಕ್ಯಾಡಿಲಾಕ್ ಎಸ್ಕಲೇಡ್ ಹಾಗೂ ವೈಟ್ ಮರ್ಸಿಡೀಸ್ ಜಿ–ವ್ಯಾಗನ್ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಉಳಿದಂತೆ ಬಿಎಂಡಬ್ಲೂ, ಮರ್ಸಿಡೀಸ್ ಬೆಂಜ್, ಟೊಯೊಟಾ ಫಾರ್ಚೂನರ್ ಸೇರಿದಂತೆ ಸುಮಾರು ₹200 ಕೋಟಿ
ಸುಖೇಶ್ ವಿರುದ್ಧ 20 ವಂಚನೆ ಪ್ರಕರಣ ದಾಖಲಾಗಿದೆ. ಇದರಲ್ಲಿ ಪ್ರಮುಖವಾಗಿ ಸುಖೇಶ್ ತನ್ನನ್ನು ಡಿಎಂಕೆ ಸಂಸ್ಥಾಪಕ ಎಂ.ಕರುಣಾನಿಧಿ ಅವರ ಮೊಮ್ಮಗ, ಟಿ.ಆರ್. ಬಾಲು ಅವರ ಮಗ, ಕೆ. ಅನ್ಬಳಂಗಾ ಅವರ ಪುತ್ರ, ಕರ್ನಾಟಕದ ಕರುಣಾಕರ ರೆಡ್ಡಿ ಅವರ ಸೋದರಳಿಯ, ವೈ.ಎಸ್. ರಾಜಶೇಖರ ರೆಡ್ಡ ಅವರ ಸಂಬಂಧಿ, ಬಿ.ಎಸ್. ಯಡಿಯೂರಪ್ಪ ಅವರ ಅಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ವಂಚಿಸಿದ್ದ.