ಫ್ರಾನ್ಸ್ನ ಸಿಟ್ರನ್ ಕಾರು ಭಾರತದಲ್ಲಿ ತನ್ನ ಅಸ್ತಿತ್ವ ಮೂಡಿಸಲು ಹೊಸ ಮಾದರಿಗಳನ್ನು ತ್ವರಿತವಾಗಿ ಪರಿಚಯಿಸುತ್ತಿದೆ. ಜಾಗತಿಕ ಮಟ್ಟದ ಬೇಡಿಕೆಯ ಮಾದರಿಗಳನ್ನು ಸಿಟ್ರನ್ ಬಾರತದಲ್ಲಿ ಪರಿಚಯಿಸುತ್ತಿದ್ದು, ಭಾರತದ ಗ್ರಾಹಕರಿಗೆ ಕೈಗೆಟಕುವ ಬೆಲೆಗೆ ಹಲವು ಹೊಸತುಗಳನ್ನು ನೀಡುವ ಪ್ರಯತ್ನ ಮಾಡುತ್ತಿದೆ.
ಇತ್ತೀಚೆಗೆ ಕೂಪ್ ಮಾದರಿಯ ಬಸಾಲ್ಟ್ ಕಾರನ್ನು ಪರಿಚಯಿಸಿತು. ಇದೇ ವೇಳೆಗೆ ಟಾಟಾ ಕೂಡಾ ಇದೇ ಕೂಪ್ ಮಾದರಿಯ ಕರ್ವ್ ಅನ್ನು ಪರಿಚಯಿಸಿತು. ಇದೀಗ ಇದರ ಬೆಲೆಯನ್ನು ಸಿಟ್ರನ್ ಬಿಡುಗಡೆ ಮಾಡಿದೆ. ಸಿಟ್ರನ್ ಬಸಾಲ್ಟ್ ಒಟ್ಟು ಮೂರು ಮಾದರಿಗಳಲ್ಲಿ ಲಭ್ಯ. ಯು, ಪ್ಲಸ್ ಹಾಗೂ ಮ್ಯಾಕ್ಸ್ ಎಂಬ ಈ ಮೂರು ಮಾದರಿಗಳು ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, ಬೆಲೆ ₹11.49 ಲಕ್ಷವಾಗಿದೆ. ಬಸಾಲ್ಟ್ ಆಗಸ್ಟ್ 9ರಂದು ದೇಶದಾದ್ಯಂತ ಬಿಡುಗಡೆಗೊಂಡಿತು. ಆ ಸಂದರ್ಭದಲ್ಲಿ ಕೇವಲ ಬೇಸ್ ಮಾದರಿಯ ಕಾರಿನ ಬೆಲೆಯನ್ನು ಸಿಟ್ರನ್ ಬಹಿರಂಗಗೊಳಿಸಿತ್ತು. ಇದೀಗ ಟಾಪ್ ವೇರಿಯಂಟ್ ವರೆಗೂ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಘೋಷಣೆ ಮಾಡಿದೆ.
ಸಿಟ್ರನ್ ಬಸಾಲ್ಟ್ನ ಬೇಸ್ ವೇರಿಯಂಟ್ನ ಎಕ್ಸ್ ಶೋರೂಂ ಬೆಲೆ ₹7.99 ಲಕ್ಷದಿಂದ ₹13.62 ಲಕ್ಷವಾಗಿದೆ. ಟರ್ಬೊ ಪೆಟ್ರೋಲ್ ಮಾದರಿಯ ಬೆಲೆ ₹11.49 ಲಕ್ಷ. ಡುಯಲ್ ಟೋನ್ ಆಯ್ಕೆಯೂ ಲಭ್ಯವಿದ್ದು, ಇದು ₹21,000 ಹೆಚ್ಚುವರಿ ಬೆಲೆಗೆ ಲಭ್ಯವಿದೆ.
ಸಿಟ್ರನ್ನ ಸಿ3 ಕಾರಿನ ಮಾದರಿಯನ್ನು ಅನುಸರಿಸಿ ಅಭಿವೃದ್ಧಿಗೊಂದಿದೆ ಕಾರು ಬಸಾಲ್ಟ್. ಸ್ಪ್ಲಿಟ್ ಹೆಡ್ಲ್ಯಾಂಪ್ಗಳು ಇದರದ್ದಾಗಿದ್ದು, ಪ್ರೊಜೆಕ್ಟರ್ ಹಾಗೂ ವಿ–ಆಕಾರದ ಎಲ್ಇಡಿ ಡಿಆರ್ಎಲ್ ಹೊಂದಿರುವ ಹೆಡ್ಲ್ಯಾಂಪ್ ಅನ್ನು ಪರಿಚಯಿಸಿದೆ. ಕೂಪ್ ಮಾದರಿಯ ರೂಫ್ ಲೈನ್ ಹೊಂದಿದೆ. ಹಿಂಬದಿಯ ಲೈಟ್ ಕೂಡಾ ದೊಡ್ಡದಾಗಿವೆ. ಹಿಂಬದಿಯ ಬಂಪರ್ಗೆ ಎರಡು ಬಗೆಯ ಬಣ್ಣವನ್ನು ನೀಡಲಾಗಿದೆ. ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲಾಕ್ ರೂಫ್ ಹಾಗೂ ಶಾರ್ಕ್ ಫಿನ್ ಆ್ಯಂಟೆನಾ ನೀಡಲಾಗಿದೆ.
ಒಳಭಾಗದಲ್ಲೂ ಡುಯಲ್ ಟೋನ್ ಬಣ್ಣ ನೀಡಲಾಗಿದೆ. ಇದರಲ್ಲಿ 3 ಸ್ಪೋಕ್ನ ಸ್ಟಿಯರಿಂಗ್ ವೀಲ್ ನೀಡಲಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದೆ. ಕಾರಿನೊಳಗೆ 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ ನೀಡಲಾಗಿದೆ. ವೈರ್ಲೆಸ್ ಆ್ಯಂಡ್ರಾಯ್ಡ್ ಆಟೊ ಮತ್ತು ಆ್ಯಪಲ್ ಕಾರ್ಪ್ಲೇ ಕನೆಕ್ಟಿವಿಟಿ, ವೈರ್ಲೆಸ್ ಚಾರ್ಜರ್, ಎಲೆಕ್ಟ್ರಿಕಲ್ ಮೂಲಕ ಹೊಂದಿಸಬಹುದಾದ ಒಆರ್ವಿಎಂಗಳನ್ನು ಹಾಗೂ ಕ್ರೂಸ್ ಕಂಟ್ರೊಲ್ ನೀಡಲಾಗಿದೆ.
ಎಲ್ಲಕ್ಕೂ ಮುಖ್ಯವಾಗಿ ಹಿಂಬದಿಯ ಆಸನದಲ್ಲಿ ಪ್ರಯಾಣಿಸುವವರಿಗೆ ತೊಡೆಗೆ ಹೆಚ್ಚಿನ ಸಪೋರ್ಟ್ ನೀಡುವಂತೆ ಮೇಲೆ ಎತ್ತರಿಸುವ ಸೌಕರ್ಯ ನೀಡಲಾಗಿದೆ. ಹಿಂಬದಿ ಆಸನಕ್ಕೂ ಎಸಿ ವೆಂಟ್ ಹಾಗೂ ಆರಾಮದಾಯಕ ಹೆಡ್ರೆಸ್ಟ್ ನೀಡಲಾಗಿದೆ.
1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಇದರದ್ದಾಗಿದ್ದು, 81 ಬಿಎಚ್ಪಿ ಹಾಗೂ 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 108 ಬಿಎಚ್ಪಿ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಇವುಗಳಲ್ಲಿ 5 ಸ್ಪೀಡ್ನ ಮ್ಯಾನುಯಲ್ ಹಾಗೂ 6 ಸ್ಪೀಡ್ನ ಮ್ಯಾನುಯಲ್ ಹಾಗೂ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್ ಇದೆ.
ಸಿಟ್ರನ್ ಬಸಾಲ್ಟ್ ಕಾರು ಸೆಪ್ಟೆಂಬರ್ ಮೊದಲ ವಾರದಿಂದ ರಸ್ತೆಗಳಿಯಲಿದೆ.