ಬೆಂಗಳೂರು ಟೆಕ್ ಸಿಟಿಯೂ ಹೌದು. ಆದರೆ ಅದು ಕೇವಲ ಐಟಿ ಹಾಗೂ ಬಿಟಿಯಲ್ಲಿ ಮಾತ್ರವಲ್ಲ, ಆಟೊಮೊಬೈಲ್ ಕ್ಷೇತ್ರದ ಕ್ರಿಯೇಟಿವಿಟಿಗೂ ಜಾಗತಿಕ ಮಟ್ಟದ ಜನಪ್ರಿಯತೆ ಪಡೆದಿದೆ ಎನ್ನುವುದಕ್ಕೆ ಇಲ್ಲಿನ ಆಟೊರಿಕ್ಷಾ ಒಂದರ ಚಾಲಕನ ಸೀಟು, ಸ್ಯಾನ್‌ಫ್ರಾನ್ಸಿಸ್‌ಕೊದಿಂದ ತಜ್ಞರನ್ನು ಬರುವಂತೆ ಮಾಡಿರುವುದಕ್ಕೆ ಸಾಕ್ಷಿ.
ಇಂಥದ್ದೊಂದು ಚೇರ್ ಅನ್ನು ಅಳವಡಿಸಿಕೊಂಡಿರುವ ಆಟೋರಿಕ್ಷಾದ ಚಿತ್ರವನ್ನು ಶಿವಾನಿ ಮಟ್ಲಪುಡಿ ಎಂಬುವವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು. ಈ ಚಾಲಕನ ಕೌಶಲವನ್ನು ಯಾರೊ ಮೆಚ್ಚುವುದಿಲ್ಲ ಹೇಳಿ ? ಎಂದು ಕೇಳಿದ್ದರು.
ಇದು ಅಂತರ್ಜಾಲದಲ್ಲಿ ಸಂಚಲನ ಉಂಟು ಮಾಡಿತು. ಎಲ್ಲೆಡೆ ಈ ಆಟೊರಿಕ್ಷಾ ಕುರಿತೇ ಚರ್ಚೆ ಆರಂಭಗೊಂಡಿತು. ಎಕ್ಸಿಕ್ಯುಟಿವ್ ಚೇರ್ ಅನ್ನು ತನ್ನ ಆಟೊದಲ್ಲಿ ಅಳವಡಿಸಿದ ರೀತಿಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾದವು.
ಈ ಘಟನೆಗೆ ಕೆಲವೇ ದಿನಗಳ ಮೊದಲು ಬೆಂಗಳೂರಿನ ಮತ್ತೊಬ್ಬರು ಆಟೋ ರಿಕ್ಷಾ ಚಾಲಕ, ಸ್ಮಾರ್ಟ್ ವಾಚ್ ಪರದೆ ಮೇಲೆ ಕ್ಯುಆರ್ ಕೋಡ್ ಮೂಡುವಂತೆ ಮಾಡಿ, ಗ್ರಾಹಕರಿಗೆ ಸುಲಭ ಪಾವತಿಗೆ ಅನುಕೂಲ ಮಾಡಿಕೊಟ್ಟಿದ್ದೂ ಸುದ್ದಿಯಾಗಿತ್ತು. ಆ ಮೂಲಕ ತಂತ್ರಜ್ಞಾನದಲ್ಲಿ ಬೆಂಗಳೂರು ಮುಂಚೂಣಿಯಲ್ಲಿರುವುದನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತು ಮಾಡಿತ್ತು.
ಆದರೆ ಆಟೋ ರಿಕ್ಷಾದ ಚಾಲಕನ ಆಸನ ಈ ಬಾರಿ ಗಮನ ಸೆಳೆದಿದ್ದ ಹಲವರಲ್ಲಿ ಪ್ರಮುಖರು ಅಟ್ಲಾಸಿಯಾನ್‌ನಲ್ಲಿರುವ ಕಂಪನಿಯೊಂದರ ವಿನ್ಯಾಸಕ ಹಾಗೂ ಉಪಾಧ್ಯಕ್ಷ ಡೇವಿಡ್ ಹಾಂಗ್ ಅವರ ಗಮನ ಸೆಳೆದಿದೆ. ಇದನ್ನು ನೋಡಲು ಬೆಂಗಳೂರಿಗೆ ಭೇಟಿ ನೀಡಲೇ ಬೇಕು ಎಂದು ಅವರು ಆಸಕ್ತಿಯನ್ನೂ ತೋರುವಂತೆ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಿವಾನಿ, ‘ಬೆಂಗಳೂರಿನಲ್ಲಿ ನೀವು ಸುಮಧುರ ಗಳಿಗೆಯನ್ನು ಸವಿಯಲಿದ್ದೀರಿ. ಇಲ್ಲಿ ತಂತ್ರಜ್ಞಾನ ಯುಗದಲ್ಲಿನ ಕ್ರಿಯಾಶೀಲತೆ ನಿಮ್ಮ ಊಹೆಗೂ ಮೀರಿ ಬೆಳೆದಿರುವುದನ್ನು ನೀವು ಕಾಣುತ್ತೀರಿ’ ಎಂದಿದ್ದಾರೆ.
ಈ ಸೀಟಿನ ಕುರಿತು ಡೇವಿಡ್ ಮಾತ್ರವಲ್ಲ, ಹಲವರು ಪ್ರತಿಕ್ರಿಯಿಸಿದ್ದಾರೆ. ‘ಆರಾಮ’ ಶಬ್ಧದ ಹೊಸ ರಾಯಭಾರಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಕಚೇರಿಯಲ್ಲಿ ಬಳಸುವ ಆಸನವನ್ನು ಆಟೋ ರಿಕ್ಷಾದಲ್ಲಿ ಅಳವಡಿಸಿರುವುದರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಆಟೋದಲ್ಲಿ ಸಂಚರಿಸಿದ ಮತ್ತೊಬ್ಬರು ಪ್ರತಿಕ್ರಿಯಿಸಿ, ‘ಇಂಥದ್ದೊಂದು ಕಲ್ಪನೆ ಅವರಿಗೆ ಹೊಳೆದಿದ್ದಾದರೂ ಹೇಗೆ ಎಂಬ ಕುತೂಹಲ ನನ್ನ ಮನಸ್ಸಿನಲ್ಲಿ ಮೂಡಿದೆ’ ಎಂದಿದ್ದಾರೆ.