ಓಲಾ ಆಟೊದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರಶೀದಿ ನೀಡುವಂತೆ ಓಲಾ ಕಂಪನಿಗೆ, ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸೂಚಿಸಿದೆ.
ಪ್ರಯಾಣಿಕರು ಕ್ರಮಿಸಿದ ದೂರಕ್ಕಿಂತಲೂ ಓಲಾ ಆ್ಯಪ್‌ನಲ್ಲಿ ಹೆಚ್ಚು ಬಿಲ್ ತೋರಿಸಲಾಗುತ್ತದೆ. ಗ್ರಾಹಕರು ಪಾವತಿಸಿದ ಅಧಿಕ ಶುಲ್ಕವನ್ನು ಕಂಪನಿಯು ಮರಳಿಸುತ್ತಿಲ್ಲ. ಇದರ ಬದಲಾಗಿ ಕೂಪನ್ ಕೋಡ್ ನೀಡುತ್ತಿದೆ. ಗ್ರಾಹಕರು ಈ ಕೋಡ್ ಬಳಸಿ ಮತ್ತೊಮ್ಮೆ ಸಂಚರಿಸುವಂತೆ ಹೇಳುತ್ತಿದೆ.
‘ಕಂಪನಿಯು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಹೆಚ್ಚುವರಿ ಹಣವನ್ನು ಮರುಪಾವತಿಸುತ್ತಿಲ್ಲ. ಆ್ಯಪ್ ಮೂಲಕ ಆಟೊ ಬುಕಿಂಗ್ ಮಾಡಿದ ಎಲ್ಲಾ ಗ್ರಾಹಕರಿಗೂ ರಶೀದಿ ಅಥವಾ ಇನ್‌ವಾಯ್ಸ್ ನೀಡಬೇಕು. ಇದನ್ನು ನೀಡದಿರುವುದು ಗ್ರಾಹಕ ರಕ್ಷಣಾ ಕಾಯ್ದೆ 2019ರ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಪ್ರಾಧಿಕಾರ ಹೇಳಿದೆ.
ಕಂಪನಿಯು ಗ್ರಾಹಕರಿಗೆ ಹಣ ಮರುಪಾವತಿ ಸಂಬಂಧ ಪ್ರಶ್ನಾತೀತ ನೀತಿಯನ್ನು ಅಳವಡಿಸಿಕೊಂಡಿದೆ. ನೊಂದ ಗ್ರಾಹಕರಿಗೆ ಪರಿಹಾರ ಸಿಗುತ್ತಿಲ್ಲ ಎಂದು ಹೇಳಿದೆ. ಗ್ರಾಹಕರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು ಅಥವಾ ಕೂಪನ್ ನೀಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.
ಎಚ್ಚೆತ್ತುಕೊಂಡ ಕಂಪನಿ: ಸಿಸಿಪಿಎ ಸೂಚನೆ ನೀಡಿದ ಬೆನ್ನಲ್ಲೇ ಓಲಾ ಕಂಪನಿಯು ತನ್ನ ಕಾರ್ಯಾಚರಣೆಯಲ್ಲಿ ಹಲವು ಬದಲಾವಣೆಗೆ ಕ್ರಮಕೈಗೊಡಿದೆ.
ವೆಬ್‌ಸೈಟ್‌ನಲ್ಲಿ ಗ್ರಾಹಕರ ಕುಂದು ಕೊರತೆ ಆಲಿಸುವ ಸಂಬಂಧ ನೋಡಲ್ ಅಧಿಕಾರಿಗಳ ಮಾಹಿತಿ ನೀಡಿದೆ. ಪ್ರಯಾಣ ರದ್ದತಿಗೆ ಸಂಬಂಧಿಸಿದಂತೆ ಮತ್ತಷ್ಟು ಕಾರಣಗಳನ್ನು ಪ್ರಕಟಿಸಿದೆ.
ಎಷ್ಟು ಸಮಯಕ್ಕೆ ಮೊದಲು ಪ್ರಯಾಣ ರದ್ದುಪಡಿಸಬೇಕು, ಇದಕ್ಕೆ ಶುಲ್ಕ ಎಷ್ಟು ಕಡಿತವಾಗಲಿದೆ ಎಂಬ ಬಗ್ಗೆ ವಿವರ ನೀಡಿದೆ. ಕಿಲೊಮೀಟರ್‌ಗೆ ಅನುಗುಣವಾಗಿ ದರ ಪಟ್ಟಿ ಪ್ರಕಟಿಸಿದೆ. ಚಾಲಕರ ಕಾಯುವ ಸಮಯಕ್ಕೆ ಗ್ರಾಹಕರು ಎಷ್ಟು ಶುಲ್ಕ ಪಾವತಿಸಬೇಕಿದೆ ಎಂಬ ಬಗ್ಗೆಯೂ ವಿವರ ನೀಡಿದೆ.