ವಾಹನ ಲೋಕದಲ್ಲಿ ಇತ್ತೀಚೆಗೆ ತೀರಾ ಸಂಚಲನ ಮೂಡಿಸಿದ್ದು ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯು ಬ್ಯಾಟರಿ ಚಾಲಿತ ಎಸ್ಯುವಿಗಳಾದ BE 6e ಹಾಗೂ XEV 9e. ಹೊಸ ಮಾದರಿಯ ಲುಕ್, ಸ್ಟಬಿಲಿಟಿ, ಫೀಚರ್ಸ್ ದೃಷ್ಟಿಯಿಂದ ಜನರ ನಿರೀಕ್ಷೆಯನ್ನೂ ಮೀರಿ, ಜನಪ್ರಿಯತೆ ಪಡೆದುಕೊಂಡಿದೆ.
2025ರ ಜನವರಿಯಿಂದ ಇದರ ಬುಕ್ಕಿಂಗ್ ಪ್ರಾರಂಭವಾಗಲಿದೆ. ಎಂಜಿನ್ ಇಲ್ಲದ ಕಾರಣ ಇದರ ಸಿ.ಸಿ. ಎಷ್ಟು, ಸಿಲಿಂಡರ್ ಎಷ್ಟು ಎಂದು ಕೇಳುವ ಗೋಜಿಲ್ಲ. ಹಾಗೆಯೇ ಈಗಾಗಲೇ ಬ್ಯಾಟರಿ ಚಾಲಿತ ಕಾರುಗಳು ಮಾರುಕಟ್ಟೆಯಲ್ಲಿರುವುದರಿಂದ ಎಷ್ಟು ವ್ಯಾಟ್ ಎಂದು ಕೇಳುವುದರಲ್ಲೂ ಏನು ಹೊಸತಿಲ್ಲ. ಆದರೆ ಮಹೀಂದ್ರಾದ ಈ ನೂತನ ಇವಿ ಕಾರುಗಳಲ್ಲಿ ರ್ಯಾಮ್ ಎಷ್ಟು ಎಂದು ಕೇಳುವುದು ಈಗ ಸದ್ಯದ ಟ್ರೆಂಡ್.
ಏಕೆಂದರೆ ಮಹೀಂದ್ರಾ Mahindra BE 6e, XEV 9e ಬರೀ ಬ್ಯಾಟರಿ ಚಾಲಿತ ಕಾರು ಮಾತ್ರವಲ್ಲ. ಬದಲಿಗೆ ಸ್ಮಾರ್ಟ್ ಕೂಡಾ ಹೌದು. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಮಹೀಂದ್ರಾ ಕಂಪನಿ ಅಳವಡಿಸಿಕೊಂಡಿದೆ. ಇದಕ್ಕಾಗಿ ಮಹೀಂದ್ರಾ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆರ್ಕಿಟೆಕ್ಚರ್ (MAIA) ಎಂಬ ಹೆಸರಿನ ಈ ಸೌಕರ್ಯಕ್ಕೆ ಕಂಪನಿಯು ತನ್ನ ಕಾರುಗಳಲ್ಲಿ ಬಳಸಿರುವ ರ್ಯಾಮ್ ಗಾತ್ರ 24 ಜಿ.ಬಿ. ಇದು ಆ್ಯಪಲ್ನ ಐಫೋನ್ 16 ಪ್ರೊಗಿಂತಲೂ ಹೆಚ್ಚು,
Mahindra XEV BE 6e: ಕ್ವಾಲ್ಕಂ ಸ್ನಾಪ್ಡ್ರಾಗನ್ ಮದರ್ಬೋರ್ಡ್, 24ಜಿಬಿ ರ್ಯಾಮ್
ಮಹೀಂದ್ರಾ ಎಕ್ಸ್ಇವಿ ಬಿಇ 6ಇ ಕಾರಿನಲ್ಲಿ ಸ್ನಾಪ್ಡ್ರ್ಯಾಗನ್ 8295 ಚಿಪ್ಸೆಟ್ ಅಳವಡಿಸಲಾಗಿದೆ. 5 ಎನ್ಎಂ ಚಿಪ್ಸೆಟ್ನಲ್ಲಿ 24ಜಿಬಿ ರ್ಯಾಮ್ ಅಳವಡಿಸಲಾಗಿದೆ. ಇದರಲ್ಲಿ 128ಜಿಬಿ ಆನ್ಬೋರ್ಡ್ ಸ್ಟೋರೇಜ್ ನೀಡಲಾಗಿದೆ. ಇದು ಐಫೋನ್ ಪ್ರೊನಷ್ಟು. ಕನೆಕ್ಟಿವಿಟಿಗೆ ವೈಫೈ 6, ಬ್ಲೂಟೂತ್ 5.2 ಮತ್ತು 5ಜಿ ಸಪೋರ್ಟ್ ಇದೆ.
ಚಾಲನೆ ಮಾಡುವವರ ಮೂಡ್ ಅಂದಾಜಿಸಿ ಅದಕ್ಕೆ ತಕ್ಕಂತೆ ಒಳಾಂಗಣದ ದೀಪಗಳ ಬಣ್ಣ, ಗೀತೆಗಳನ್ನು ಬದಲಿಸುವ, ಲೇನ್ ಅಸಿಸ್ಟ್ ಮಾಡುವ, ಚಾಲಕನಿಲ್ಲದೆ ಕಾರನ್ನು ಪಾರ್ಕ್ ಮಾಡಲು ಅಗತ್ಯವಿರುವ ಚಾಕಚಕ್ಯತೆಯನ್ನು ಮಹೀಂದ್ರಾದ ಈ ಕಾರುಗಳು ಹೊಂದಿವೆ. ಅದಕ್ಕೆ ಪೂರಕವಾಗಿ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿದೆ.
ಐಫೋನ್ 16 ಪ್ರೊ ಮೊಬೈಲ್ನಲ್ಲಿ 8 ಜಿ.ಬಿ. ರ್ಯಾಮ್ ಇದೆ. ಗೂಗಲ್ ಪಿಕ್ಸೆಲ್ 9 ಪ್ರೊ ಎಕ್ಸ್ಎಲ್ನಲ್ಲಿ 16 ಜಿ.ಬಿ. ರ್ಯಾಮ್ ಇದೆ. ಆ್ಯಪಲ್ನ ಮ್ಯಾಕ್ಬುಕ್ ಪ್ರೊ ಎಂ4 ಮಾದರಿಯಲ್ಲೂ 16 ಜಿ.ಬಿ. ರ್ಯಾಮ್ ಇದೆ. ಹೀಗಾಗಿ ಭವಿಷ್ಯದ ಇವಿ ಕಾರುಗಳು ಹೆಚ್ಚು ಸ್ಮಾರ್ಟ್ ಆಗಿರುವುದರಿಂದ ಅವುಗಳ ವ್ಯಾಟ್, ರೇಂಜ್ ಕೇಳುವ ಮೊದಲು ಅವುಗಳಲ್ಲಿ ಎಷ್ಟು ಗಾತ್ರದ ರ್ಯಾಮ್ ಅಳವಡಿಸಲಾಗಿದೆ ಎಂಬುದನ್ನು ಕೇಳಲಾಗುವುದು.
ಭವಿಷ್ಯದಲ್ಲಿ ಬ್ಯಾಟರಿ ಚಾಲಿತ ಕಾರುಗಳು ಚಾಲನೆಗೆ ಹೆಚ್ಚು ಸುರಕ್ಷಿತವಾಗಿರಲಿವೆ. ಏಕೆಂದರೆ ಸ್ಮಾರ್ಟ್ಫೋನ್ಗಳಿಗಿಂತ ಹೆಚ್ಚಿನ ರ್ಯಾಮ್ ಹೊಂದಿರುವ ಕಾರುಗಳು ಹೆಚ್ಚು ಸ್ಮಾರ್ಟ್ ಆಗಿ ಕೆಲಸ ಮಾಡುವಂತೆ ಸಿದ್ಧಪಡಿಸಲಾಗಿದೆ. ಆದರೆ ಸ್ಮಾರ್ಟ್ಫೋನ್ಗೂ ಇವಿ ಕಾರುಗಳಿಗೂ ಹೋಲಿಕೆ ಮಾಡುವುದು ಹಾಸ್ಯಾಸ್ಪದ ಎನಿಸಬಹುದು. ಆದರೆ ವಾಸ್ತವದಲ್ಲಿ ಎರಡೂ ತಂತ್ರಾಂಶಗಳನ್ನೇ ಹೊಂದಿವೆ ಮತ್ತು ಅವುಗಳ ಮೂಲಕವೇ ಈ ಎರಡೂ ಕಾರ್ಯಾಚರಣೆ ಮಾಡುತ್ತವೆ.
ಹಾಗಿದ್ದರೆ ಕಾರಿಗೇಕೆ ಇಷ್ಟು ದೊಡ್ಡ ಗಾತ್ರದ ರ್ಯಾಮ್?
ತಾನು ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆಯ MAIA ಜಗತ್ತಿನಲ್ಲೇ ಅತ್ಯಂತ ವೇಗದ ಆಟೊಮೋಟಿವ್ ಸಿಸ್ಟಂ ಎಂದು ಮಹೀಂದ್ರಾ ಹೇಳಿದೆ. ಪ್ರತಿ ಸೆಕೆಂಡ್ಗೆ 51 ಟ್ರಿಲಿಯನ್ ಕಾರ್ಯಾಚರಣೆಯನ್ನು ಇದು ನಿರ್ವಹಿಸಬಲ್ಲದು. ಕಾರಿನ ಬಳಕೆದಾರರು ಕಾರಿನೊಂದಿಗೆ ದಿನಗಳನ್ನು ಕಳೆಯುತ್ತಾ ಹೋದಂತೆ, ತಂತ್ರಾಂಶವು ಅವರಿಗೆ ತಕ್ಕಂತೆ ಹೊಂದಿಕೊಂಡು ಸಾಗಲಿದೆ. ಬಳಕೆದಾರರ ಬೇಡಿಕೆಗೆ ತಕ್ಕಂತೆ ವರ್ತಿಸುವ ಗುಣವನ್ನು ಬೆಳೆಸಿಕೊಳ್ಳಲಿದೆ. ಇದಕ್ಕೆ ತಕ್ಕಂತೆ ಮಹೀಂದ್ರಾ ವಿಡಿಯೊವನ್ನೂ ಬಿಡುಗಡೆ ಮಾಡಿದೆ. ಆ ಮೂಲಕ ತನ್ನ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವ ಯತ್ನ ಮಾಡಿದೆ.