ಹೊಸ ಮಾದರಿಯ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಕಿಯಾ ಈ ಬಾರಿ ಪರಿಚಯಿಸಿದೆ. ಭಾರತದಲ್ಲಿ ಈ ಮಾದರಿಯ ಕಾರುಗಳಿಗೆ ಹೆಚ್ಚಿದ ಬೇಡಿಕೆಯನ್ನು ಅರಿತ ಕಿಯಾ, ಈ ಬಾರಿ Syros ಎಂಬ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಇತ್ತೀಚೆಗೆ ದೆಹಲಿಯಲ್ಲಿ ಅನಾವರಣಗೊಳಿಸಿತು. ಇದು ಜಾಗತಿಕ ಲಾಂಚ್ ಕೂಡಾ ಹೌದು.
Kia.com ಅಂತರ್ಜಾಲ ತಾಣದ ಮೂಲಕ ಸೈರೊಸ್ ಬುಕ್ಕಿಂಗ್ ಮಾಡಿಕೊಳ್ಳಬಹುದು, ಅದೂ ಫೆಬ್ರುವರಿ 2025ರಲ್ಲಿ.
ADAS 2ನೇ ಹಂತದ ತಂತ್ರಜ್ಞಾನ ಹಾಗೂ 20 ಪ್ರಯಾಣಿಕ ಸುರಕ್ಷಿತ ಸೌಲಭ್ಯಗಳಿಂದಾಗಿ ಚಾಲನಾ ಅನುಭೂತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿರುವುದಾಗಿ ಕಿಯಾ ಹೇಳಿದೆ. ಜತೆಗೆ ಐಷಾರಾಮಿ ಸೌಲಭ್ಯದೊಂದಿಗೆ ಪ್ರಯಾಣಿಕರ ವಿಲಾಸಿತನಕ್ಕೂ ಇದರಲ್ಲಿ ಒತ್ತು ನೀಡಲಾಗಿದೆ.
ಉತ್ತಮ ಸೌಂಡ್ ಸಿಸ್ಟಂಗಾಗಿ ಹರ್ಮನ್ ಕಾರ್ಡನ್ ಸ್ಪೀಕರ್‌ಗಳು, ವೆಂಟಿಲೇಟೆಡ್ ಸೀಟುಗಳು. ಹಿಂಬದಿಯ ಆಸನಗಳನ್ನೂ ಮುಂದಿನಂತೆಯೇ ಹಿಂದೆಕ್ಕೆ ಮುಂದಕ್ಕೆ ಜರುಗಿಸುವ ಹಾಗೂ ಹಿಂದಕ್ಕೆ ಬಾಗಿಸುವ ಸೌಕರ್ಯವನ್ನು ಇದರಲ್ಲಿ ನೀಡಲಾಗಿದೆ.
‘ಇದು ಸೈರೊಸ್‌ನ ಜಾಗತಿಕ ಬಿಡುಗಡೆ. ಈ ಕಾರನ್ನು ಈಗ ಪ್ರದರ್ಶನಕ್ಕೆ ಇಡಲಾಗುವುದು. ಆಸಕ್ತರು ಈ ಕಾರನ್ನು ವೀಕ್ಷಿಸಿ, ಅದಕ್ಕೆ ಏನು ಬೆಲೆ ಇಡಬಹುದು ಎಂಬ ಸಲಹೆಯನ್ನು ನೀಡಬಹುದು. ಅದನ್ನು ಪರಿಗಣಿಸಿ, ಇದರ ಬೆಲೆ ನಿಗದಿಪಡಿಸಲಾಗುವುದು. ಫೆಬ್ರುವರಿಯಲ್ಲಿ ಇದರ ಬೆಲೆಯನ್ನು ಕಂಪನಿ ಪ್ರಕಟಿಸಲಿದೆ’ ಎಂದು ಕಿಯಾ ಇಂಡಿಯಾದ ಹಿರಿಯ ಉಪಾಧ್ಯಕ್ಷ ಹರ್ದೀಪ್ ಬ್ರಾರ್ ತಿಳಿಸಿದ್ದಾರೆ.
Syros ಮೂಲಕ ಕಿಯಾ ಕಂಪನಿಯು ಮಾರುತಿ ಬ್ರೀಜಾ, ಟೊಯೊಟಾ ಅರ್ಬನ್ ಕ್ರೂಸರ್, ಸ್ಕೋಡಾ ಕುಷಾಕ್, ಫೋಕ್ಸ್‌ವ್ಯಾಗನ್ ಟೈಗುನ್ ಹೀಗೆ ಈ ವಿಭಾಗದಲ್ಲಿ ಕಿಯಾ ತನ್ನ ಸ್ಥಳವನ್ನು ಮಾಡಿಕೊಳ್ಳಲು ಹೆಜ್ಜೆ ಇಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಿವೆ ಎಂದು ಕಂಪನಿ ಹೇಳಿದೆ.
ಕಾಂಪ್ಯಾಕ್ಟ್ ಹಾಗೂ ಮಿಡ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಕಿಯಾ ಕಂಪನಿ ಶೇ 15ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.