ಕಾರು ತಯಾರಿಕೆಯಲ್ಲಿ ಎಂಜಿನ್ ಹಂಚಿಕೊಳ್ಳುವುದೂ ಎಂದರೆ, ಕಂಪ್ಯೂಟರ್‌ಗಳಲ್ಲಿ ಪ್ರಾಸೆಸರ್‌ಗಳನ್ನು ಬಳಸಿದಂತೆಯೇ. ಅದರಲ್ಲೂ ಸದ್ಯ ಭಾರತದಲ್ಲಿ ಬಹುಬೇಡಿಕೆಯ ಕಾರುಗಳಲ್ಲಿ ಎಸ್‌ಯುವಿ ಅಗ್ರ ಸ್ಥಾನದಲ್ಲಿದೆ. ಹೀಗೆ ಎಂಜಿ ಹೆಕ್ಟರ್, ಜೀಪ್ ಕಂಪಾಸ್ ಹಾಗೂ ಟಾಟಾ ಹಾರಿಯರ್ ಕಾರುಗಳಲ್ಲಿರುವುದು ಒಂದೇ ಕಂಪನಿ ಅಭಿವೃದ್ಧಿಪಡಿಸಿದ ಎಂಜಿನ್. ಅದುವೇ ಇಟಲಿಯ ಫಿಯೆಟ್.
ಒಂದು ಕಾಲದಲ್ಲಿ ಮಾರುತಿಯಿಂದ ಟಾಟಾವರೆಗೂ 24 ಕಾರುಗಳಲ್ಲಿ ಫಿಯೆಟ್‌ನ 1.3 ಲೀಟರ್ ಮಲ್ಟಿಜೆಟ್ ಎಂಜಿನ್ ಬಳಕೆಯಾಗುತ್ತಿತ್ತು. ಸದ್ಯ 2.0 ಲೀಟರ್ ಎಂಜಿನ್ ಅನ್ನು ಪುಣೆಯ ತನ್ನ ತಯಾರಿಕಾ ಘಟಕದಲ್ಲಿ ಉತ್ಪಾದಿಸುತ್ತಿರುವ ಫಿಯೆಟ್, ಈಗಲೂ ತನ್ನ ಹಳೆಯ ಖದರ್ ಅನ್ನೇ ಮುಂದುವರಿಸಿದೆ.

ಸದ್ಯ ಮೂರು ಎಸ್‌ಯುವಿಗಳು ಈ ಒಂದು ಎಂಜಿನ್ ಬಳಕೆ ಮಾಡುತ್ತಿದ್ದರೂ, ಅದರ ಕಾರ್ಯಕ್ಷಮತೆ ಬೇರೆಯೇ ಆಗಿದೆ.

ಟಾಟಾ ಹ್ಯಾರಿಯರ್, ಸಫಾರಿ ಡೀಸೆಲ್
ಟಾಟಾ ಮೋಟಾರ್ಸ್‌ನ ಅತಿ ಬೇಡಿಕೆಯ ಕಾರು ಹ್ಯಾರಿಯರ್ ಹಾಗೂ ಸಫಾರಿಯಲ್ಲಿ ಫಿಯೆಟ್ ಎಂಜಿನ್ ಬಳಕೆಯಾಗಿದೆ. ಇಲ್ಲಿ ಇದನ್ನು ಕ್ರಯೋಟೆಕ್ ಡೀಸೆಲ್ ಎಂದು ಕರೆಯಲಾಗುತ್ತದೆ. ಮುಂಬರಲಿರುವ ಸಿಯಾರಾದಲ್ಲೂ ಇದೇ ಎಂಜಿನ್ ಬಳಸಲಾಗಿದೆ ಎಂದು ವರದಿಯಾಗಿದೆ.
ಟಾಟಾ ಕಂಪನಿ ಬಳಕೆ ಮಾಡಿರುವ ಈ 2.0 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ 168 ಅಶ್ವಶಕ್ತಿ ಹಾಗೂ 350 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸಬಲ್ಲದು. ಇದರಲ್ಲಿ 6 ಸ್ಪೀಡ್ ಮ್ಯಾನುಯಲ್ ಮತ್ತು ಹ್ಯುಂಡೇ ಕಂಪನಿಯಿಂದ ಪಡೆದಿರುವ 6 ಸ್ಪೀಡ್‌ನ ಟಾರ್ಕ್ ಕನ್ವರ್ಟರ್ ಆ್ಯಟೊಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಹ್ಯಾರಿಯರ್‌ನಲ್ಲಿ ಈ ಎಂಜಿನ್ ಪ್ರತಿ ಗಂಟೆಗೆ 0ಯಿಂದ 100 ಕಿ.ಮೀ. ವೇಗ ಪಡೆಯಲು ತೆಗೆದುಕೊಳ್ಳುವ ಸಮಯ 11.75 ಸೆಕೆಂಡುಗಳು.

ಎಂಜಿ ಹೆಕ್ಟರ್ ಡೀಸೆಲ್
ಫಿಯೆಟ್‌ನ 2.0 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಿರುವ ಮತ್ತೊಂದು ಎಸ್‌ಯುವಿ ಎಂಜಿ ಹೆಕ್ಟರ್. ಇದೂ ಟಾಟಾ ಹ್ಯಾರಿಯರ್‌ನಂತೆಯೇ 168 ಬಿಎಚ್‌ಪಿ ಮತ್ತು 350 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸಬಲ್ಲದು. ಆದರೆ ಹೆಕ್ಟರ್‌ನಲ್ಲಿ ಆ್ಯಟೊಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವಿಲ್ಲ. ಹೆಕ್ಟರ್‌ನಲ್ಲಿ ಇದೇ ಎಂಜಿನ್ ಪ್ರತಿ ಗಂಟೆಗೆ 0ಯಿಂದ 100 ಕಿ.ಮೀ. ವೇಗ ಹೆಚ್ಚಿಸಿಕೊಳ್ಳಲು ತೆಗೆದುಕೊಳ್ಳುವ ಸಮಯ 11.39 ಸೆಕೆಂಡುಗಳು. ಇದು ಮ್ಯಾನ್ಯುಯಲ್ ಗೇರ್‌ಬಾಕ್ಸ್‌ನಿಂದಾಗಿ ಇಲ್ಲಿ ಸಮಯ ಕಡಿಮೆ ತೆಗೆದುಕೊಂಡಿದೆ ಎಂದು ಆಟೊ ತಜ್ಞರು ಅಂದಾಜಿಸಿದ್ದಾರೆ.

ಜೀಪ್ ಕಂಪಾಸ್ ಡೀಸೆಲ್
ಜೀಪ್ ಕಂಪಾಸ್‌ನಲ್ಲೂ ಫಿಯಟ್‌ನ 2.0 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಟಾಟಾ ಮತ್ತು ಎಂಜಿಗೆ ಹೋಲಿಸಿದರೆ ಫಿಯೆಟ್ ಎಂಜಿನ್ ಬಳಸಿದ ಮೊದಲ ಎಸ್‌ಯುವಿ ಜೀಪ್. ಇದೇ ಎಂಜಿನ್ ಜೀಪ್‌ನಲ್ಲಿ 171 ಬಿಎಚ್‌ಪಿ ಹಾಗೂ 350 ನ್ಯೂಟನ್ ಮೀಟರ್ ಪೀಕ್ ಟಾರ್ಕ್ ಉತ್ಪಾದಿಸಬಲ್ಲದು. ಹ್ಯಾರಿಯರ್‌ನಂತೆಯೇ ಇಲ್ಲಿಯೂ 6 ಸ್ಪೀಡ್ ಮ್ಯಾನುಯಲ್ ಮತ್ತು 9 ಸ್ಪೀಡ್‌ನ ಟಾರ್ಕ್ ಕನ್ವರ್ಟರ್ ಆ್ಯಟೊಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವಿದೆ.
ಇಲ್ಲಿ ಇತರ ಎರಡು ಕಾರುಗಳಿಗಿಂತ 3 ಬಿಎಚ್‌ಪಿ ಹೆಚ್ಚುವರಿ ಶಕ್ತಿ ಉತ್ಪಾದಿಸುತ್ತದಾದರೂ ಪ್ರತಿ ಗಂಟೆಗೆ ವೇಗ ಹೆಚ್ಚಿಸಿಕೊಳ್ಳುವ ಪ್ರಮಾಣ 0ಯಿಂದ 100 ಕಿ.ಮೀ. ವೇಗಕ್ಕೆ 11.40 ಸೆಕೆಂಡುಗಳು ಬೇಕು.
ಈ ಮೂರೂ ಕಾರುಗಳಲ್ಲಿ ಶಬ್ದ, ಕಂಪನ ಮತ್ತು ಕಠೋರತೆ (NVH) ಹ್ಯಾರಿಯರ್‌ನಲ್ಲಿ ಹೆಚ್ಚು. ಆದರೆ 2.0 ಲೀಟರ್ ಎಂಜಿನ್ ಕ್ಷಣಮಾತ್ರದಲ್ಲಿ ಕಾರಿನ ವೇಗ ಹೆಚ್ಚಿಸುವ ಹಾಗೂ ಹೆಚ್ಚು ಶಕ್ತಿಕೊಡುವ ಸಾಮರ್ಥ್ಯದಲ್ಲಿ ಮುಂದಿದೆ.