15 ವರ್ಷದಷ್ಟು ಹಳೆಯ ವಾಹನಗಳಿಗೆ ಮಾರ್ಚ್ 31ರ ನಂತರ ಬಂಕ್ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಪೂರೈಸುವುದನ್ನು ದೆಹಲಿ ಸರ್ಕಾರವು ನಿಲ್ಲಿಸಲಿದೆ ಎಂದು ಪರಿಸರ ಸಚಿವ ಮನ್ಜಿಂದರ್ ಸಿಂಗ್ ಸಿರ್ಸಾ ತಿಳಿಸಿರುವುದು ಹಳೆಯ ವಾಹನಗಳನ್ನು ಹೊಂದಿರುವವರ ನಿದ್ದೆಗೆಡಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ನಿಯಂತ್ರಣ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ‘ವಾಹನಗಳಿಂದ ಉಂಟಾಗುವ ಹೊಗೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು.
ಹಳೆಯ ವಾಹನಗಳಿಗೆ ನಿರ್ಬಂಧ ವಿಧಿಸುವುದರ ಜತೆಗೆ, ಸಾರ್ವಜನಿಕ ಸಾರಿಗೆಯಾಗಿ ವಿದ್ಯುತ್ ಚಾಲಿತ ವಾಹನ ಬಳಕೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿರುವ ಕುರಿತು ಅವರು ತಿಳಿಸಿದ್ದಾರೆ.
ಈ ನಿರ್ಬಂಧದ ಭಾಗವಾಗಿ ದೆಹಲಿಯ ಪ್ರತಿ ಪೆಟ್ರೋಲ್ ಬಂಕ್ಗಳಲ್ಲಿ ಒಂದು ಸಾಧನ ಅಳವಡಿಸಲಾಗುತ್ತದೆ. 15 ವರ್ಷ ಹಳೆಯ ವಾಹನಗಳನ್ನು ಇದು ಗುರುತಿಸಲಿದೆ. ಅಂಥ ವಾಹನಗಳಿಗೆ ಇಂಧನ ಪೂರೈಕೆ ಇರುವುದಿಲ್ಲ. ಈ ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೂ ಮಾಹಿತಿ ನೀಡುತ್ತೇವೆ ಎಂದು ಅವರು ತಿಳಿಸಿದರು.
ಈ ವರ್ಷಾಂತ್ಯದ ವೇಳೆಗೆ ಅಸ್ತಿತ್ವದಲ್ಲಿರುವ ಶೇ 90ರಷ್ಟು ಸಿಎನ್ಜಿ ಆಧಾರಿತ ಸಾರ್ವಜನಿಕ ಬಸ್ಗಳ ಬದಲಾಗಿ ಎಲೆಕ್ಟ್ರಿಕ್ ಬಸ್ಗಳು ರಸ್ತೆಗೆ ಇಳಿಯಲಿವೆ ಎಂದರು.
ಇಂಧನ ಪೂರೈಕೆ ಇಲ್ಲ ಎಂದಾದಲ್ಲಿ ಹಳೆಯ ವಾಹನ ಮಾಲೀಕರು ಏನು ಮಾಡಬೇಕು? ಹೊಸ ವಾಹನ ಖರೀದಿಗೆ ಬೇಕಾದಷ್ಟು ಹಣ ಇಲ್ಲದವರು, ಹೊಸ ಕಾರನ್ನು ಖರೀದಿಸಲೂ ಆಗದೆ, ಇಂಧನವೂ ಇಲ್ಲದೆ ಹಳೆಯ ಕಾರನ್ನು ಹೊರೆಯಾಗಿ ಸಾಕುವ ಅನಿವಾರ್ಯತೆ ಒಂದೆಡೆಯಾದರೆ, ಹೊಸ ಕಾರು ಖರೀದಿಸಲು ಸರ್ಕಾರ ಪರೋಕ್ಷ ಒತ್ತಡ ಹೇರುವ ಮೂಲಕ ಜನರನ್ನು ಮತ್ತೆ ಸಾಲದ ಸುಳಿಗೆ ನೂಕುವ ಯತ್ನವಿದು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.