ವಾಯು ಮಾಲಿನ್ಯ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ ಅನ್ನು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಹಾಗೂ ಟಾಟಾ ಮೋಟರ್ಸ್ ಅಭಿವೃದ್ಧಿಪಡಿಸಿವೆ.
ಡೀಸೆಲ್ ವಾಹನಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ಇಂಥ ಮಾದರಿಯ ದ್ರವವನ್ನು ಅಭಿವೃದ್ಧಿಪಡಿಸಿರುವ ಈ ಎರಡೂ ಕಂಪನಿಗಳು ‘ಜೆನಿಯುನ್ ಡಿಇಎಫ್’ ಎಂಬ ಹೆಸರಿನಡಿ ಮಾರುಕಟ್ಟೆಗೆ ಪರಿಚಯಿಸಿವೆ.
ಸರ್ಕಾರಿ ಸ್ವಾಮ್ಯದ ಎಚ್‌ಪಿಸಿಎಲ್‌ಗೆ ಸೇರಿದ 23 ಸಾವಿರ ಪೆಟ್ರೋಲ್ ಬಂಕ್‌ಗಳಲ್ಲಿ ಇದು ಸಿಗಲಿದೆ. ಜತೆಗೆ ಎರಡು ಸಾವಿರ ಅಧಿಕೃತ ಮಾರಾಟ ಮಳಿಗೆಗಳಲ್ಲೂ ಲಭ್ಯ. ವಾಹನದ ಕಾರ್ಯಕ್ಷಮತೆ, ಎಂಜಿನ್‌ಗಳ ದೀರ್ಘ ಕಾಲ ಬಾಳಿಕೆಗೆ ಇದು ನೆರವಾಗಲಿದೆ ಎಂದು ಎಚ್‌ಪಿಸಿಎಲ್ ಹೇಳಿದೆ.
‘ಬಿಎಸ್6 ಮಾನ್ಯತೆ ಹೊಂದಿರುವ ಡೀಸೆಲ್ ವಾಹನಗಳಿಗೆ ಇದು ಸೂಕ್ತವಾಗಿದೆ. ವಾಹನ ಉಗುಳುವ ಪರಿಸರಕ್ಕೆ ಮಾರಕವಾಗಿರುವ ನೈಟ್ರೋಜೆನ್ ಆಕ್ಸೈಡ್ ಅನ್ನು ತಗ್ಗಿಸುವ ಸಾಮರ್ಥ್ಯ ಈ ದ್ರವಕ್ಕಿದೆ. ಇದರಿಂದ ಪರಿಸರದಲ್ಲಿ ಲಭ್ಯವಿರುವ ನೈಟ್ರೋಜೆನ್ ಮತ್ತು ನೀರನ್ನು ಮಾಲಿನ್ಯದಿಂದ ರಕ್ಷಿಸಬಹುದು’ ಎಂದಿದೆ.
‘ಭಾರತದಲ್ಲಿ ಮಾಲಿನ್ಯ ನಿಯಂತ್ರಿಸುವ ನೀತಿಗಳು ರೂಪುಗೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಪರಿಸರಕ್ಕೆ ಮಾರಕವಾಗುವ ರಾಸಾಯನಿಕಗಳು ವಾತಾವರಣ ಪ್ರವೇಶಿಸುವುದನ್ನು ತಡೆಯುವುದು ಬಹುಮುಖ್ಯ. ಹೀಗಾಗಿ ಜೆನಿಯುನ್ ಡಿಇಎಫ್ ರೀತಿಯ ಪರಿಹಾರಗಳ ಅಗತ್ಯವಿದೆ’ ಎಂದು ಟಾಟಾ ಮೋಟರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ತಿಳಿಸಿದ್ದಾರೆ.