YAMAHA FZ-S Fi: ಬೈಕ್‌ಗೂ ಬಂತು ಹೈಬ್ರಿಡ್ ಎಂಜಿನ್‌

ಪೆಟ್ರೋಲ್ ಮತ್ತು ಬ್ಯಾಟರಿ ಎರಡನ್ನೂ ಅಳವಡಿಸಿರುವ ಕಾರುಗಳಂತೆಯೇ, ಯಮಹಾ ಹೈಬ್ರಿಡ್‌ ಮಾದರಿಯ ಬೈಕ್‌ YAMAHA FZ-S Fi ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

₹1.44 ಲಕ್ಷ (ಎಕ್ಸ್ ಶೋರೂಂ) ಬೆಲೆಗೆ ಲಭ್ಯವಿರುವ ಈ ಬೈಕ್‌ನ ಎಂಜಿನ್‌, ವಿನ್ಯಾಸ ಮತ್ತು ಹಲವು ಹೊಸ ಸೌಕರ್ಯಗಳೊಂದಿಗೆ ಈ ಬೈಕ್‌ ಅನ್ನು ಕಂಪನಿ ಹೊರತಂದಿದೆ. ಯಮಹಾ ಕಂಪನಿಯ ಡಿಲಕ್ಸ್‌ ವೇರಿಯಂಟ್‌ FZ-S Fi V4ಗೆ ಹೋಲಿಸಿದಲ್ಲಿ ಹೈಬ್ರಿಡ್ ಬೈಕ್‌ಗೆ ಹೆಚ್ಚುವರಿಯಾಗಿ ₹14 ಸಾವಿರ ಪಾವತಿಸಬೇಕು.

ಹೈಬ್ರಿಡ್‌ ಬೈಕ್‌ನಲ್ಲಿ ಸ್ಮಾರ್ಟ್‌ ಮೋಟಾರ್ ಜನರೇಟರ್‌ ಅಳವಡಿಸಲಾಗಿದ್ದು, ಬೈಕ್‌ನ ತ್ವರಿತ ಆರಂಭಿಕ ವೇಗಕ್ಕೆ ಹೆಚ್ಚಿನ ಒತ್ತಡ ಹಾಗೂ ಬೆಂಬಲ ನೀಡಲಿದೆ. ಬೈಕ್‌ ಸ್ಟಾರ್ಟ್‌ ಕೂಡಾ ಹೆಚ್ಚು ಶಬ್ದವಿಲ್ಲದೆ ಆಗುತ್ತದೆ. ಇದರೊಂದಿಗೆ ಸ್ಟಾರ್ಟ್‌ ಮತ್ತು ಸ್ಟಾಪ್ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ. ಇದರಿಂದ ಟ್ರಾಫಿಕ್‌ ಸಿಗ್ನಲ್ ಆಗಿರಲಿ ಅಥವಾ ಬೈಕ್ ಐಡಲ್ ಸ್ಥಿತಿಯಲ್ಲಿದ್ದಾಗ, ಸ್ವಯಂ ಚಾಲಿತವಾಗಿ ಬಂದ್ ಆಗುವುದು ಮತ್ತು ಹೊರಡಲು ಅಣಿಯಾದಾಗ ತಾನೇ ಸ್ಟಾರ್ಟ್‌ ಆಗುವ ತಂತ್ರಜ್ಞಾನ ಹೊಂದಿದೆ. ಇದರಿಂದ ಇಂಧನ ಉಳಿತಾಯ ಹೆಚ್ಚು ಎನ್ನುವುದು ತಜ್ಞರ ಹೇಳಿಕೆ.

ಯಮಹಾದ ಈ ಬೈಕ್‌ನಲ್ಲಿ 4.2 ಇಂಚುಗಳ ಟಿಎಫ್‌ಟಿ ಪರದೆ ಇದ್ದು, ಇದಕ್ಕೆ ಸ್ಮಾರ್ಟ್‌ ಫೋನ್‌ ಸಂಪರ್ಕಕ್ಕಾಗಿ Y-Connect ಆ್ಯಪ್‌ ಅಗತ್ಯ. ಗೂಗಲ್‌ ಮ್ಯಾಪ್ಸ್ ಅಳವಡಿಸಲಾಗಿದ್ದು, ಪ್ರತಿ ತಿರುವುಗಳ ಸಮಗ್ರ ಮಾಹಿತಿ ಸಿಗಲಿದೆ. ಇದರಿಂದ ರಿಯಲ್ ಟೈಂ ಮಾರ್ಗದರ್ಶನ ಸಿಗಲಿದೆ. 

YAMAHA FZ-S Fi ಮೂಲಕ ಕಂಪನಿಯು ಮತ್ತೊಂದು ಬದಲಾವಣೆ ಮಾಡಿದ್ದು, ಹ್ಯಾಂಡಲ್‌ಬಾರ್‌ ಹಾಗೂ ಸ್ವಿಚ್‌ಗೇರ್‌ ಗುಂಡಿಗಳು ಹಾಗೂ ಇಂಧನ ಟ್ಯಾಂಕ್‌ನ ಕ್ಯಾಪ್‌ ಅನ್ನು ವಿಭಿನ್ನ ರೀತಿಯಲ್ಲಿ ಅಳವಡಿಸಿದೆ. ಇಂಡಿಕೇಟರ್ ದೀಪಗಳು ಈ ಹಿಂದಿನಂತೆ ಬೈಕ್‌ನ ದೇಹದ ಹೊರಗೆ ಇರದೆ, ವಿನ್ಯಾಸದಲ್ಲೇ ಅಂತರ್ಗತವಾಗಿರುವಂತೆ ವಿನ್ಯಾಸ ಮಾಡಲಾಗಿದೆ.

ರೇಸಿಂಗ್ ಬ್ಲೂ ಮತ್ತು ಸಿಯಾನ್ ಮೆಟಾಲಿಕ್ ಬ್ಲೂ ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ YAMAHA FZ-S Fi ಲಭ್ಯ.

ಹೈಬ್ರಿಡ್ ಮೋಟಾರ್‌ಸೈಕಲ್‌ ಎಂದರೇನು?

ಸಾಮಾನ್ಯವಾಗಿ ಮೋಟಾರ್‌ಬೈಕ್‌ಗಳಲ್ಲಿ ಪೆಟ್ರೋಲ್ ಅಥವಾ ಬ್ಯಾಟರಿ ಚಾಲಿತ ಎಂಜಿನ್‌ಗಳಿರುವುದು ಸಾಮಾನ್ಯ. ಆದೆ ಈ ಎರಡನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಹೈಬ್ರಿಡ್ ತಂತ್ರಜ್ಞಾನ ಕಾರುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಇದರಿಂದ ಹೆಚ್ಚು ಇಂಧನ ಉಳಿತಾಯ ಮತ್ತು ಕಡಿಮೆ ಪರಿಸರ ಮಾಲಿನ್ಯ ಸಾಧ್ಯ ಎನ್ನುವುದು ತಜ್ಞರ ಮಾತು.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ