ಬಿಸಿಲ ಬೇಗೆಯಿಂದ ಪಾರಾಗಲು ಹಲವರು ಬಿಯರ್ ಮೊರೆ ಹೋಗುವುದುಂಟು. ಹೀಗಾಗಿಯೇ ಪಬ್ ನಗರಿ ಬೆಂಗಳೂರಿನಲ್ಲಿ ಹಾದಿಬೀದಿಯಲ್ಲಿ ಚಿಲ್ ಆಗುವ ಬಿಯರ್ ಕೇಂದ್ರಗಳು ತೆರೆದಿವೆ. ಬಿಯರ್ ಕೇವಲ ಬೇಸಿಗೆಯ ಧಗೆ ತಗ್ಗಿಸಲು ಮಾತ್ರವಲ್ಲ, ಕೆಲವರು ನಳನಳಿಸುವ ಕೂದಲಿಗೂ ಬಳಸಿದರು. ಇನ್ನೂ ಕೆಲವರು ಅಂದವಾಗಿ ಕಾಣಲು ಮುಖವನ್ನೂ ತೊಳೆದುಕೊಂಡರು. ಆದರೆ ಇದೀಗ ಕಾರುಗಳ ವಿಂಡ್ಶೀಲ್ಡ್ ಶುಚಿಗೊಳಿಸಲು ಬಿಯರ್ ಬೆಸ್ಟ್ ಎಂದು ಕೆಲವರು ಅನುಭವದ ಆಧಾರದಲ್ಲಿ ಹೇಳುತ್ತಿದ್ದಾರೆ.
ಆಟೊವ್ಯೂ46 ಎಂಬ ಇನ್ಸ್ಟಾಗ್ರಾಂ ಹ್ಯಾಂಡ್ಲರ್ ಇಂಥದ್ದೊಂದು ವಿಡಿಯೊ ಹಂಚಿಕೊಂಡಿದ್ದಾರೆ. ಕಾರಿನ ವಿಂಡ್ಶೀಲ್ಡ್ಗೆ ನೀರು ಅಥವಾ ಶಾಂಪೂ ಹಾಕುವ ಬದಲು, ಬಿಯರ್ ಹಾಕಿದರೆ ಹೆಚ್ಚು ಸ್ಪಷ್ಟವಾದ ಗಾಜು ನಿಮ್ಮ ಕಾರಿನದ್ದಾಗಲಿದೆ ಎಂಬುದು ಇವರ ಮಾತು.
ಬಿಯರ್ ಬಳಸುವುದರಿಂದ ಕಾರಿನ ಗಾಜು ಶುಚಿಯಾಗುವುದರ ಜತೆಗೆ, ನೀರಿನಿಂದ ತೊಳೆದರೆ ಗಾಜಿನ ಮೇಲೆ ಮೂಡುವ ಕಲೆಯೂ ಇದರಲ್ಲಿ ಇರುವುದಿಲ್ಲವಂತೆ. ಬಿಯರ್ ಹೊಟ್ಟೆಗೆ ಮಾತ್ರವಲ್ಲ, ಕಾರಿಗೂ ಇಷ್ಟ ಎಂಬುದು ಇವರ ಮಾತಿನಿಂದಲೇ ತಿಳಿಯುತ್ತದೆ.
ಹೀಗಾಗಿ ಮುಂದಿನ ಬಾರಿ ಬಿಯರ್ ಕುಡಿಯುವ ಮುನ್ನ ನಿಮ್ಮನ್ನು ಸದಾ ಹೊತ್ತೆಯ್ಯುವ ಕಾರಿಗೂ ಒಂದೆರಡು ಪಿಂಟ್ ಬಿಯರ್ ಖರೀದಿಸಿ. ಬಿಯರ್ ಕುಡಿದವರ ಕಣ್ಣು ಮಂಜಾದರೂ, ಕಾರಿನ ಗಾಜು ಮಂಜಾಗದಂತೆ ಇದು ಕಾಪಾಡಲಿದೆ.