ಭಾರತೀಯ ಸೇನೆಯ ಬಲ ಹೆಚ್ಚಿಸುತ್ತಿರುವ ಟಾಟಾ ವಾಹನಗಳಿವು…

Tata ಕಂಪನಿಯ LPTA 2038 6X6 ಅತ್ಯಧಿಕ ಶಕ್ತಿಶಾಲಿ ವಾಹನಗಳು ಸೇನೆ ಸೇರುತ್ತಿದ್ದು, ಇವುಗಳು ಹಿಮಚ್ಛಾಧಿತ ಪ್ರದೇಶವಾಗಿರಲಿ, ಬಿರುಬಿಸಿಲಿನ ಮರುಭೂಮಿಯಾಗಿರಲಿ, ಕಡು ಬೆಟ್ಟವಾಗಿರಲಿ, ಗುಡ್ಡಗಾಡು ಕಣಿವೆ ಹಾದಿಯೇ ಆಗಿರಲಿ ಸುಲಭವಾಗಿ ಸಾಗುವಂತೆ ವಿನ್ಯಾಸಗೊಳಿಸಲಾಗಿದೆ.

2015ರಲ್ಲಿ 1,239 ವಾಹನಗಳನ್ನು ಸೇನೆ ನೀಡುವ ಒಡಂಬಡಿಕೆಯನ್ನು ಭಾರತೀಯ ಸೇನೆ ಮಾಡಿಕೊಂಡಿದ್ದು, ಇವುಗಳು ಈಗ ಸೇನೆಗೆ ಹಂತಹಂತವಾಗಿ ಸೇರುತ್ತಿವೆ. ಅದರಲ್ಲೂ ಉತ್ತರ ಕಮಾಂಡ್‌ಗೆ ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿವೆ.

ಸೇನೆ ಮತ್ತು ಅರೆಸೇನಾಪಡೆಗೆ ಅಗತ್ಯವಿರುವ ವಾಹನಗಳನ್ನು ಟಾಟಾ ಕಂಪನಿ ಪೂರೈಸುತ್ತದೆ ಎಂಬುದು ಎಲ್ಲರಿಗೂ ಈಗ ತಿಳಿದಿರುವ ಸಂಗತಿ. ಸೇನೆಗೆ ವಾಹನ ತಯಾರು ಮಾಡುವ ಟಾಟಾದ ಅನುಭವ ಇಂದು ನಿನ್ನೆಯದಲ್ಲ. ಬದಲಿಗೆ ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ 1940ರಲ್ಲಿ ವಿಶ್ವ ಯುದ್ಧ 2ಕ್ಕೆ ಸೇನಾ ಸಾಮಗ್ರಿಗಳನ್ನು ಪೂರೈಸಿದ ಅನುಭವ ಈ ಕಂಪನಿ ಹೊಂದಿದೆ. 1958ರಲ್ಲಿ ಸ್ವತಂತ್ರ ಭಾರತದೊಂದಿಗೆ ಇಂಥ ಉತ್ಪನ್ನಗಳ ಪೂರೈಕೆಗೆ ಟಾಟಾ ಒಡಂಬಡಿಕೆ ಮಾಡಿಕೊಂಡಿತು. ಗಾಲಿಯುಳ್ಳ ಆರ್ಮರ್ಡ್‌ ಕ್ಯಾರಿಯರ್‌ಗಳನ್ನು ಆಗ ಸೇನೆಗೆ ಪೂರೈಕೆ ಮಾಡುತ್ತಿತ್ತು. ಇವೆಲ್ಲವೂ ಟಾಟಾನಗರದಲ್ಲಿ ತಯಾರಾಗಿರುವಂಥದ್ದು.

ಇದೀಗ 6X6 ಕ್ಯಾಂಬ್ಯಾಟ್‌ ಪೂರಕ ಟ್ರಕ್‌ಗಳನ್ನು ಟಾಟಾ ಅಭಿವೃದ್ಧಿಪಡಿಸಿದೆ. ಇವುಗಳಲ್ಲಿ LPTA 2038 6×6 ನಂಥ ವಾಹನಗಳು ಹಿಮ ಹೊದ್ದ ಪ್ರದೇಶದಲ್ಲೂ ಸುಲಭವಾಗಿ ಸಾಗಬಲ್ಲದು.

ಇವುಗಳಲ್ಲಿ ಕ್ಯುಮಿನಸ್‌ ಐಎಸ್‌ಎಲ್‌ಇ, 6 ಸಿಲಿಂಡರ್‌ಗಳ ಎಂಜಿನ್‌ 375 ಅಶ್ವಶಕ್ತಿ ಉತ್ಪಾದಿಸುತ್ತದೆ. 1550 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸಬಲ್ಲದು. ಇವುಗಳಲ್ಲಿ 9 ಸ್ಪೀಡ್‌ನ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್‌ ಅಳವಡಿಸಲಾಗಿದೆ. ಇದು ವಾಹನದ ಎಲ್ಲಾ ಗಾಲಿಗಳಿಗೂ ಶಕ್ತಿಯನ್ನು ಪ್ರತ್ಯೇಕವಾಗಿ ಕಳುಹಿಸುವುದರಿಂದ, ಎಂಥದ್ದೇ ಜಾಗದಲ್ಲೂ ಸುಲಭವಾಗಿ ಸಾಗಬಲ್ಲದು.

ಈ ಮಾದರಿಯಲ್ಲಿ ಹಲವು ವಾಹನಗಳನ್ನು ಟಾಟಾ ಹೊರತಂದಿದೆ. ಅವುಗಳಲ್ಲಿ ಕೆಲವು 23 ಟನ್ ತೂಕವಿದ್ದು, 8,500 ಕೆ.ಜಿ. ಭಾರವನ್ನು ಹೊತ್ತೊಯ್ಯಬಲ್ಲದು. ಸೇನೆ, ಅರೆಸೇನಾ ಪಡೆಯ ಜತೆಗೆ, ನೌಕದಾಳ, ವಾಯು ಸೇನೆಗೂ ಟಾಟಾ ಇಂಥ ವಾಹನಗಳನ್ನು ಪೂರೈಕೆ ಮಾಡುತ್ತಿದೆ. ಜತೆಗೆ ಸಾರ್ಕ್‌, ಆಸಿಯನ್‌, ಆಫ್ರಿಕಾ ದೇಶಗಳು, ವಿಶ್ವ ಸಂಸ್ಥೆ ಶಾಂತಿ ಸ್ಥಾಪನಾ ಪಡೆಗಳಿಗೂ ಟಾಟಾ ಸೇನಾ ವಾಹನಗಳನ್ನು ಪೂರೈಕೆ ಮಾಡುತ್ತಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ