ಬೆಂಗಳೂರು: 601 ಅಶ್ವ ಶಕ್ತಿ ಉತ್ಪಾದಿಸಬಲ್ಲ, ಪ್ರತಿ ಗಂಟೆಗೆ 0ಯಿಂದ 100 ಕಿ.ಮೀ. ವೇಗ ಕ್ರಮಿಸಲು 3.8 ಸೆಕೆಂಡುಗಳು ಸಾಕೆನ್ನುವ, ವೇಗದ ಚಾಲನೆ, ಅತ್ಯುತ್ತಮ ಹಿಡಿತಕ್ಕೆ ಡುಯಲ್ ಮೋಟಾರ್, ಆಲ್ ವೀಲ್ ಡ್ರೈವ್ ಇಷ್ಟು ಮಾತ್ರವಲ್ಲ. ಸಿಂಗಲ್ ಚಾರ್ಜ್‌ನಲ್ಲಿ ಅಚ್ಚರಿ ಮೂಡಿಸಬಲ್ಲ ರೇಂಜ್… ಇವಿಷ್ಟೂ ಭಾರತದಲ್ಲಿ ಇತ್ತೀಚೆಗೆ ಬಿಡಗುಡೆಗೊಂಡ ಬಿಎಂಡಬ್ಲೂ ಐ5 ಎಂ60 ಎಕ್ಸ್‌ಡ್ರೈವ್ ಕಾರಿನ ವಿಶೇಷತೆ.
ಎಲೆಕ್ಟ್ರಿಕ್, ಸ್ಪೋರ್ಟಿ ಎಕ್ಸಿಕ್ಯುಟಿವ್ ಸೆಡಾನ್ ಕಾರು ಇದಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅತ್ಯದ್ಭುತ ಕಾರ್ಯಕ್ಷಮತೆ ಈ ಕಾರಿನದ್ದು. ಕಾರಿನ ನೋಟದಲ್ಲೂ ಇದಕ್ಕೆ ಸರಿಸಾಟಿ ಯಾವುದೂ ಇಲ್ಲದಷ್ಟು ಆಧುನಿಕತೆ ಹೊಂದಿದೆ. ಜತೆಗೆ ಕಾರ್ಯಕ್ಷಮತೆಯಲ್ಲೂ ಹೋಲಿಕೆ ಇಲ್ಲದಂತ ಸಾಮರ್ಥ್ಯ ಹೊಂದಿದೆ.
ಬಿಎಂಡಬ್ಲೂ ಸಮೂಹದ ಭಾರತ ವಿಭಾಗದ ಅಧ್ಯಕ್ಷ ವಿಕ್ರಂ ಪ್ರವಾಹ ಮಾಹಿತಿ ನೀಡಿ, ‘ಬಿಎಂಡಬ್ಲೂ ಐ5 ಎಂ60 ಎಕ್ಸ್‌ಡ್ರೈವ್ ಕಾರು ಯಾವುದೇ ಅತ್ಯುತ್ತಮ ಕಾರಿನ ಕಾರ್ಯಕ್ಷಮತೆಗೆ ಕಡಿಮೆ ಇಲ್ಲದಂತ ಸೌಕರ್ಯ ಹೊಂದಿರುವ ಎಲೆಕ್ಟ್ರಿಕ್ ವಾಹವಾಗಿದೆ. ವಿಲಾಸಿ ಸ್ಪೋರ್ಟಿ, ಸೆಡಾನ್ ಕಾರು ತಯಾರಿಕೆಯಲ್ಲಿ ಎಂಟು ತಲೆಮಾರುಗಳ ಪಾರಂಪರಿಕ ಕೌಶಲ ಬಿಎಂಡಬ್ಲೂ ಈ ಕಾರಿನಲ್ಲಿ ಕಾಣಬಹುದಾಗಿದೆ. ಎಂ ಅಂದರೆ ಸುಸ್ಥಿರತೆ, ಐ ಅಂದರೆ ಆರನೇ ಎಲೆಕ್ಟ್ರಿಕ್ ವಾಹನ ಇದಾಗಿದೆ ಎಂಬುದನ್ನು ಸೂಚಿಸುತ್ತದೆ. ಆ ಮೂಲಕ ಭಾರತದ ವಿಲಾಸಿ ಕಾರುಗಳ ಮಾರುಕಟ್ಟೆಯಲ್ಲಿ ಬಿಎಂಡಬ್ಲೂ ಐ5 ಎಂ60 ಮೂಲಕ ಮತ್ತೊಮ್ಮೆ ಅಗ್ರಸ್ಥಾನ ಕಾಯ್ದುಕೊಂಡಿದೆ’ ಎಂದಿದ್ದಾರೆ.
- ಬಿಎಂಡಬ್ಲೂ ಐ5 ಎಂ60 ಎಕ್ಸ್‌ಡ್ರೈವ್ ಕಾರಿನ ಎಕ್ಸ್ ಶೋರೂಂ ಬೆಲೆ ₹1.19 ಕೋಟಿ.
- ಈ ಕಾರು 2 ವರ್ಷಗಳ ವಾರೆಂಟಿ ಹೊಂದಿದೆ. ಆದರೆ ಇದಕ್ಕೆ ಕಿಲೋ ಮೀಟರ್‌ನ ಮಿತಿ ಇಲ್ಲ
- ಎಕ್ಸ್‌ಟೆಂಡೆಡ್ ವಾರಂಟಿ ಸೌಲಭ್ಯವಿದೆ. ಅದು ಮೂರನೇ ವರ್ಷದಿಂದ ಆರಂಭವಾಗಿ 5ನೇ ವರ್ಷದವರೆಗೂ ಇರಲಿದೆ. ಆಗಲೂ ಕಿಲೋ ಮೀಟರ್‌ನ ಮಿತಿ ಇಲ್ಲ
- ಬಿಎಂಡಬ್ಲೂ ಐ5 ಎಂ60 ಎಕ್ಸ್‌ಡ್ರೈವ್ ಕಾರಿನ ವಾರಂಟಿ 8 ವರ್ಷ ಅಥವಾ 1.60 ಲಕ್ಷ ಕಿಲೋ ಮೀಟರ್

ಐ5 ಎಂ60 ಹೇಗಿದೆ…?
ಬಿಎಂಡಬ್ಲೂ ಎಂದರೆ ಕಣ್ಣೆದು ಬರುವುದೇ ಅದರ ಸಿಗ್ನೇಚರ್ ಕಿಡ್ನಿ ಗ್ರಿಲ್. ಅದು ಐ5 ಎಂ60ಯಲ್ಲೂ ಅದ್ಭುತವಾಗಿ ಕಾಣಿಸುವಂತಿದೆ. ಆದರೆ ಈ ಬಾರಿ ಅದರ ಗೋಚರತೆ ಮತ್ತು ರೇಡಿಯನ್ಸ್ ಇನ್ನಷ್ಟು ತೀಕ್ಷ್ಣವಾಗಿದೆ. ಈಗ ಇದನ್ನು ಶಾರ್ಕ್‌ನೋಸ್ ಎಂದೂ ಕರೆಯಲಾಗುತ್ತಿದೆ. ಮುಂಭಾಗದಲ್ಲಿ ಅಡಾಪ್ಟಿವ್ ಹೆಡ್‌ಲೈಟ್ಸ್ ಹೊಂದಿದೆ. ಇದರೊಂದಿಗೆ ಕಾರ್ನರಿಂಗ್ ಲೈಟ್ಸ್, ಮ್ಯಾಟ್ರಿಕ್ಸ್ ಹೈಬೀಮ್ ಜತೆಗೆ ಗ್ಲೇರ್ ಮುಕ್ತ ಹೈ ಬೀಮ್ ನೆರವಿನ ಸೌಕರ್ಯವೂ ಇದರಲ್ಲಿದೆ.
ಡಿಎಲ್‌ಆರ್ ಮತ್ತು ಇಂಡಿಕೇಟರ್‌ಗಳು ಲಂಭವಾಗಿವೆ, ಹೀಗಾಗಿ ಮುಂಭಾಗ ಹೆಚ್ಚು ಸ್ಪಷ್ಟವಾಗಿ, ವಿಲಾಸಿತನ ಮೇಳೈಸುವಂತೆ ಕಾಣಿಸುತ್ತಿದೆ.
ಇಕ್ಕೆಲಗಳಿಂದ ಬಿಎಂಡಬ್ಲೂ ಐ5 ಎಂ60 ಕಾರನ್ನು ನೋಡಿದರೆ, ಹೆಚ್ಚು ಉದ್ದವಾಗಿ ಮತ್ತು ಶ್ರೀಮಂತಿಕೆಯನ್ನು ಸೂಸುವಂತಿದೆ. ಹಿಂಭಾಗದಲ್ಲಿ ಕಾರಿನ ಭುಜ ಮತ್ತು ಮೇಲ್ಭಾಗ ಮತ್ತು ಹಿಂಬದಿಯಲ್ಲಿರುವ ಎಲ್ ಆಕಾರದ ಹಾಲ್‌ಮಾರ್ಕ್ ದೀಪಗಳು ಬಿಎಂಡಬ್ಲೂ ಕಾರು ಎಂದು ತಕ್ಷಣಕ್ಕೆ ಹೇಳುವಷ್ಟರ ಮಟ್ಟಿಗೆ ಇವೆ. 20 ಇಂಚಿನ ಎಂ ಅಲಾಯ್ ವೀಲ್ ಇದರದ್ದು. ಒಳಭಾಗದಲ್ಲಿ ಕಾರ್ಬನ್ ಫೈಬರ್ ಬಳಸಲಾಗಿದೆ. ಹೀಗಾಗಿ ಐ5 ಮುಂದಿನ ತಲೆಮಾರಿನ ಕಾರು ಮಾದರಿಯಲ್ಲಿ ಕಾಣಿಸುವಂತಿದೆ.
ಇನ್ನು ಕಾರಿನ ಕಾರ್ಯಕ್ಷಮತೆಯ ವಿಷಯಕ್ಕೆ ಬಂದಲ್ಲಿ, ಇದರ ಪವರ್ ಎಲೆಕ್ಟ್ರಿಕ್ ಡ್ರೈವ್ ಸೌಕರ್ಯವು, ಮುಂದಿನ ಹಾಗೂ ಹಿಂದಿನ ಆ್ಯಕ್ಸಲ್‌ಗೆ ಶಕ್ತಿ ತುಂಬಲಿದೆ. ಹೀಗಾಗಿ ಈ ಕಾರು 0 ಯಿಂದ 100 ಕಿ.ಮೀ. ವೇಗ ಕ್ರಮಿಸಲು 3.8 ಸೆಕೆಂಡುಗಳನ್ನು ಮಾತ್ರ ತೆಗೆದುಕೊಳ್ಳಲಿದೆ. ಹೀಗಾಗಿ ಇದು ಗರಿಷ್ಠ ಪ್ರತಿ ಗಂಟೆಗೆ 230 ಕಿ.ಮೀ. ವೇಗದಲ್ಲಿ ಸಾಗುವಷ್ಟು ಸಾಮರ್ಥ್ಯ ಹೊಂದಿದೆ. 601 ಅಶ್ವಶಕ್ತಿಯನ್ನು ಇದು ಉತ್ಪಾದಿಸಬಲ್ಲದು. 795 ಎನ್‌ಎಂ ಟಾರ್ಕ್ ಇದು ಹೊಂದಿದೆ. ಅತ್ಯಧಿಕ ವೋಲ್ಟೇಜ್‌ನ ಬ್ಯಾಟರಿಯನ್ನು ಇದು ಹೊಂದಿದ್ದು, ಅಧಿಕ ಶಕ್ತಿಯೊಂದಿಗೆ 81.2 ಕಿಲೋ ವ್ಯಾಟ್ ಉತ್ಪಾದಿಸಬಲ್ಲದು. ಒಂದು ಸಂಪೂರ್ಣ ಚಾರ್ಜ್‌ನಲ್ಲಿ 516 ಕಿ.ಮೀ. ಸಾಗುವಷ್ಟು ಸಾಮರ್ಥ್ಯ ಈ ಬ್ಯಾಟರಿಯದ್ದು. 11 ಕಿಲೋ ವ್ಯಾಟ್ ಚಾರ್ಜಿಂಗ್ ಯೂನಿಟ್ ಇದು ಹೊಂದಿದೆ. 22 ಕಿ.ವ್ಯಾ. ಎಸಿ ಚಾರ್ಜಿಂಗ್ ಆಯ್ಕೆಯೂ ಇದೆ.
ಬಿಎಂಡಬ್ಲೂ ಐ5 ಎಂ60 ಎಕ್ಸ್‌ಡ್ರೈವ್‌ನಲ್ಲಿ ಬಿಎಂಡಬ್ಲೂ ಆಪರೇಟಿಮಗ್ ಸಿಸ್ಟಂ 8.5 ಅಳವಡಿಸಲಾಗಿದೆ. ಇನ್ಫೊಟೈನ್ಮೆಂಟ್ ಹಾಗೂ ಮನರಂಜನೆಯನ್ನು ನೀಡುವ ಸೌಕರ್ಯ ಹೊಂದಿದೆ. ಮ್ಯಾಪ್ ಮತ್ತು ನ್ಯಾವಿಗೇಷನ್ ಅನ್ನು ಸದಾ ತೋರಿಸುವ ಪರದೆ, ಬೇಕಾಗಿದ್ದನ್ನು ವೇಗವಾಗಿ ಆಯ್ಕೆ ಮಾಡುವ ಸೌಕರ್ಯ, ಕ್ಲೌಡ್ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಸೌಕರ್ಯಗಳನ್ನು ಇದು ಹೊಂದಿದೆ.
ಚಾಲಕ ಸ್ನೇಹಿಯಾದ ಕ್ರ್ಯೂಸ್ ವ್ಯವಸ್ಥೆ, ಅಟೆಂಟಿವ್‌ನೆಸ್ ನೆರವು, ಪಾರ್ಕಿಂಗ್ ನೆರವು, ಸ್ಮಾರ್ಟ್ ಫೋನ್ ಮೂಲಕವೇ ನಿರ್ವಹಿಸಬಹುದಾದ ರಿಮೋಟ್ ಪಾರ್ಕಿಂಗ್, ಲೇನ್ ನಿಯಂತ್ರ ಸಹಾಯಕ ಸೌಲಭ್ಯ ಇದರಲ್ಲಿದೆ.
ಎಲೆಕ್ಟ್ರಾನಿಕ್ ನಿಯಂತ್ರಿತ ಸಸ್ಪೆನ್ಶನ್ ಮತ್ತು ಶಾಕ್ ಅಬ್ಸಾರ್ಬರ್ ಐ5 ಎಂ60ಯಲ್ಲಿದೆ. ಚಕ್ರಗಳು ಅನುಭವಿಸುವ ಆಘಾತವನ್ನು ಗ್ರಹಿಸಿ ಈ ಅಡಾಪ್ಟಿವ್ ಸಸ್ಪನ್ಶನ್ ಕಾರ್ಯ ನಿರ್ವಹಿಸಲಿದೆ. ಜತೆಗೆ ಅತ್ಯಾಧುನಿಕ ಆ್ಯಕ್ಟಿವ್ ಸ್ಟಿಯರಿಂಗ್ ಚಾಲಕನ ಹಿಡಿತ ತಪ್ಪುವುದಿಲ್ಲ. ಅದರಲ್ಲೂ ಲೇನ್ ಬದಲಿಸುವಾಗ, ತಿರುವಿನಲ್ಲಿ ಚಾಲಕನ ಹಿಡಿತ ತಪ್ಪದಂತೆ ಸ್ಟಿಯರಿಂಗ್ ಗ್ರಿಪ್ ನೀಡಲಿದೆ. ಬಿಎಂಡಬ್ಲೂ ಸುರಕ್ಷತಾ ಸೌಕರ್ಯದಲ್ಲಿ, ಕಾರಿನೊಳಗೆ 6 ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಅಟೆಂಟಿವ್ ಅಸಿಸ್ಟೆನ್ಸ್, ಡೈನಾಮಿಕ್ ಸ್ಟಬಲಿಟಿ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಆಟೊ ಹೋಲ್ಡ್, ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್, ಕ್ರಾಶ್ ಸೆನ್ಸರ್, ಎಲೆಕ್ಟ್ರಾನಿಕ್ ವೆಹಿಕಲ್ ಇಮ್ಮೊಬಲೈಜರ್, ISOFIX ಚೈಲ್ಡ್ ಸೀಟ್ ಮೌಂಟಿಂಗ್ ಇತ್ಯಾದಿ ಸೌಕರ್ಯಗಳು ಈ ಕಾರಿನಲ್ಲಿವೆ.