ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಬಜಾಜ್ (Bajaj), ವಿಶ್ವದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಸ್ಕೂಟರ್ ಹಾಗೂ ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ. ಇದೀಗ, ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ (World First CNG Motorcycle) ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ.
ಪುಣೆಯಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಜೀವ್ ಬಜಾಜ್ (Rajiv Bajaj) ಸಂಸ್ಥೆಯ ಮುಂಬರುವ ಯೋಜನೆಗಳ ಬಗ್ಗೆ ವಿವರಿಸಿ, ವಿಶ್ವದ ಮೊದಲ ಸಿಎನ್‌ಜಿ ಬೈಕ್‌ನ್ನು ಜೂನ್ 18, 2024ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದರು.
ಬಜಾಜ್ ಆಟೋ (Bajaj Auto) ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರೀ ಯಶಸ್ಸನ್ನು ಸಾಧಿಸಿದ್ದು, ಆ ರೀತಿಯ ಪ್ರಗತಿಯನ್ನು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ಮುಂದುವರಿಸಲು ಬಯಸಿದೆ. ಅದಕ್ಕಾಗಿ ಸಿಎನ್‌ಜಿ ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಲು ತಯಾರಿಯನ್ನು ನಡೆಸುತ್ತಿದೆ. ಜೊತೆಗೆ ದ್ವಿಚಕ್ರ ವಾಹನಗಳ ನಿರ್ವಹಣೆಗೆ ಮಧ್ಯಮ ವರ್ಗದ ಜನರು ಮಾಡುತ್ತಿರುವ ಖರ್ಚನ್ನು ಕಡಿಮೆಗೊಳಿಸಲು ಉದ್ದೇಶಿಸಿದೆ ಎಂದು ಹೇಳಲಾಗಿದೆ.
ಬಜಾಜ್ ಕಂಪನಿಯು ಸಿಎನ್‌ಜಿ ಬೈಕ್‌ಗೆ ‘ಪ್ಲಾಟಿನಾ’ ಎಂದು ಹೆಸರನ್ನು ಇಡಬಹುದು. ಬ್ರೂಜರ್ ಇ101 ಕೋಡ್ ನೇವ್ ಹೊಂದಿರುವ ಮೋಟಾರ್‌ಸೈಕಲ್‌ವೊಂದನ್ನು ಅಂತಿಮ ಹಂತದಲ್ಲಿ ವಿನ್ಯಾಸಗೊಳಿಸುತ್ತಿದೆ ಎಂದು 2023ರ ಅಕ್ಟೋಬರ್‌ನಲ್ಲಿ ವರದಿಯಾಗಿತ್ತು. ಈಗಾಗಲೇ, ವಿಶೇಷ ಫ್ಯುಯೆಲ್ ಟ್ಯಾಂಕ್ ಹೊಂದಿರುವ ಬೈಕ್‌ವೊಂದು ಹಲವು ಬಾರಿ ಪ್ರಾಯೋಗಿಕ ಸಂಚಾರವನ್ನು ನಡೆಸಿದ್ದು, ಆ ಫೋಟೋಗಳು ಆನ್‌ಲೈನ್ ನಲ್ಲಿಯೂ ಕಾಣಿಸಿಕೊಂಡಿದ್ದವು. ಆದರೆ, ಇದೇ ಸಿಎನ್‌ಜಿ ಮೋಟಾರ್‌ಸೈಕಲ್ ಆಗಿದೆಯೇ ಎಂಬುದರ ಬಗ್ಗೆ ಖಚಿತತೆಯಿಲ್ಲ.
ಬಜಾಜ್ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಹೋಲಿಕೆ ಮಾಡಿದರೆ, ಸಿಎನ್‌ಜಿ ಬೈಕ್‌ಗಳು ಸ್ವಲ್ಪ ಹೆಚ್ಚಿನ ಬೆಲೆ ಹೊಂದಿರಬಹುದು ಎಂದು ಹೇಳಲಾಗಿದೆ. ಮುಂಬರಲಿರುವ ಸಿಎನ್‌ಜಿ ಮೋಟಾರ್‌ಸೈಕಲ್ ಫ್ಯುಯೆಲ್ (ಇಂಧನ) ಟ್ಯಾಂಕ್ ವಿನ್ಯಾಸ ಕೊಂಚ ಭಿನ್ನವಿರಲಿದ್ದು, ಇದರಿಂದ ತಯಾರಿಕಾ ವೆಚ್ಚ ಹೆಚ್ಚಾಗಲಿದೆ ಎನ್ನಲಾಗಿದೆ. ಆದರೆ, ಸಿಎನ್‌ಜಿ ಬೈಕ್ ನಿರ್ವಹಣಾ ವೆಚ್ಚ ಅಗ್ಗವಾಗಿರುವುದರೊಂದಿಗೆ ದರ ಏರಿಕೆ ಪ್ರಮಾಣ ಗ್ರಾಹಕರ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.
ನೂತನ ಸಿಎನ್‌ಜಿ ಬೈಕ್ ₹80 ಸಾವಿರ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು. ಪ್ರತಿ ಕೆಜಿಗೆ 70 ಕಿಲೋಮೀಟರ್‌ಗೂ ಅಧಿಕ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆಯುವುದಾದರೆ ಜೂನ್ 18ರಂದು ಸಿಎನ್‌ಜಿ ಬೈಕ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ, ಈ ಕುರಿತು ಬಜಾಜ್ ಕಂಪನಿಯಿಂದ ಯಾವುದೇ ಅಧಿಕೃತ ವಿವರಗಳು ಬಹಿರಂಗಗೊಂಡಿಲ್ಲ.