ಶಕ್ತಿಶಾಲಿ ಎಸ್‌ಯುವಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜೀಪ್‌ನೊಂದಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಕೈಜೋಡಿಸಿದ್ದಾರೆ.
2024ರ ಜೀಪ್ ರ‍್ಯಾಂಗ್ಲರ್ ರೂಬಿಕಾನ್ ಎಸ್‌ಯುವಿ ಮಾದರಿಯ ಕಾರು ಖರೀದಿಸುವ ಮೂಲಕ ಅದರ ಬ್ರಾಂಡ್ ಅಂಬಾಸೆಡರ್ ಆಗಿದ್ದಾರೆ.
ರ‍್ಯಾಂಗ್ಲರ್ ರೂಬಿಕಾನ್ ಎಸ್‌ಯುವಿ ಕಾರು ಏ. 25ರಂದು ಭಾರತದಲ್ಲಿ ಬಿಡುಗಡೆಯಾಯಿತು. ಎಕ್ಸ್ ಶೋರೂಂ ಬೆಲೆ ₹71.65 ಲಕ್ಷವಿದೆ. 2023ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ರ‍್ಯಾಂಗ್ಲರ್ ರೂಬಿಕಾನ್‌ನ ಫೇಸ್‌ಲಿಫ್ಟ್ ಮಾದರಿ ಇದಾಗಿದೆ. ಈ ಕಾರಿನ ಮೂಲಕ ಹೃತಿಕ್ ರೋಷನ್ ಅವರ ವಿಲಾಸಿ ಕಾರುಗಳ ಸಂಗ್ರಹಕ್ಕೆ ಜೀಪ್ ಹೊಸ ಸೇರ್ಪಡೆಯಾಗಿದೆ. ಈವರೆಗೂ ಅವರ ಬಳಿ ರೋಲ್ಸ್ ರಾಯ್ಸ್ ಗೋಷ್ಟ್, ರೇಂಜ್ ರೋವರ್, ಮರ್ಸಿಡೀಸ್ ಎಸ್–ಕ್ಲಾಸ್ ಹಾಗೂ ಇತರ ಕಾರುಗಳೂ ಇವೆ.
ಜೀಪ್ ರ‍್ಯಾಂಗ್ಲರ್ ರೂಬಿಕಾನ್ ಎಸ್‌ಯುವಿ ಕಾರಿನಲ್ಲಿ 2.0 ಲೀಟರ್ ಟರ್ಬೊಚಾರ್ಜರ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರಲ್ಲಿ 8 ಸ್ಪೀಡ್‌ನ ಟಾರ್ಕ್ ಕನ್ವರ್ಟರ್ ಆ್ಯಟೊಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. 268 ಬಿಎಚ್‌ಬಿ ಅಶ್ವಶಕ್ತಿ ಉತ್ಪಾದಿಸುವುದರ ಜತೆಗೆ, 400 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
ಸೌಕರ್ಯದಲ್ಲಿ 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ, ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 12 ರೀತಿಯಲ್ಲಿ ಸೀಟುಗಳನ್ನು ಹೊಂದಿಸುವ ಸೌಕರ್ಯ ಇದರಲ್ಲಿದೆ. ಇನ್ಫೊಟೈನ್ಮೆಂಟ್ ವ್ಯವಸ್ಥೆಯನ್ನು ಇನ್ಫಿನಿಟಿ ಸಿದ್ಧಪಡಿಸಿದೆ. ಸಂಪೂರ್ಣ ಡಿಜಿಟಲ್ ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಆ್ಯಟೊಮ್ಯಾಟಿಕ್ ಕ್ಲೈಮ್ಯಾಟಿಕ್ ಕಂಟ್ರೋಲ್, ಎಡಿಎಎಸ್ ತಂತ್ರಜ್ಞಾನ ರೂಬಿಕಾನ್‌ನಲ್ಲಿದೆ.
ಹೃತಿಕ್ ರೋಷನ್ ಅವರೊಂದಿಗೆ ಕೈಜೋಡಿಸಿರುವ ಜೀಪ್, ತನ್ನ ವಿಲಾಸಿ ಲೈಫ್‌ಸ್ಟೈಲ್ ಉತ್ಪನ್ನಗಳ ರಾಯಭಾರಿಯಾಗಿರಲಿದ್ದಾರೆ. ಎಲ್ಲಾ ಅಸಾಧ್ಯವೆನ್ನುವ ಗಡಿಗಳನ್ನು ದಾಟುವ ಪ್ರೀಮಿಯಂ ಲೈಫ್‌ಸ್ಟೈಲ್ ಎಸ್‌ಯುವಿಗೆ ಅದೇ ರೀತಿಯ ಸಹಾಸಗಳಲ್ಲಿ ವಿಶೇಷ ಆಸಕ್ತಿ ಹಾಗೂ ಬದ್ಧತೆ ಹೊಂದಿರುವ, ವಿಶೇಷ ವ್ಯಕ್ತಿಯೊಂದಿಗೆ ಕೈಜೋಡಿಸಲು ಉತ್ಸುಕವಾಗಿದ್ದೇವೆ’ ಎಂದು ಜೀಪ್ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಪಿಯೂಷ್ ಕುಮಾರ್ ತಿಳಿಸಿದರು.