ಚೀನಾ ಇವಿ ಕಾರು ತಯಾರಿಕಾ ಕಂಪನಿ BYD ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಾರಾಟ ದಾಖಲಿಸಿದ್ದು, ಹೊಂಡಾ ಮತ್ತು ನಿಸ್ಸಾನ್ ಕಂಪನಿಯನ್ನೂ ಮೀರಿಸಿದ್ದು 2024ರ 2ನೇ ತ್ರೈಮಾಸಿಕದಲ್ಲಿ ದಾಖಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಜಾಗತಿಕ ಮಾರುಕಟ್ಟೆಗೆ ಕಡಿಮೆ ಬೆಲೆಯ ಇವಿಗಳನ್ನು ಪರಿಚಿಯಿಸಿರುವ ಬುವೈಡಿ, ಫೋರ್ಡ್‌ನ ಮಾರುಕಟ್ಟೆಗೂ ಅತಿ ಸಮೀಪದಲ್ಲಿ ಎಂದೆನ್ನಲಾಗಿದೆ. ಕಳೆದ ಏಪ್ರಿಲ್‌ನಿಂದ ಜೂನ್‌ವರೆಗೂ ಬಿವೈಡಿ 9.80 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು, ಶೇ 40ರಷ್ಟು ಪ್ರಗತಿ ದಾಖಲಿಸಿದೆ. ಈ ಮೂಲಕ ಬಿವೈಡಿ ಜಗತ್ತಿನ ಏಳನೇ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯಾಗಿದೆ.
ಚೀನಾದಲ್ಲಿ ಬಿವೈಡಿ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡ ನಂತರ, ಅದು ಜಾಗತಿಕ ಮಾರುಕಟ್ಟೆಗೂ ತನ್ನ ವಹಿವಾಟನ್ನು ವಿಸ್ತರಿಸಿಕೊಂಡಿದೆ. ಹೀಗಾಗಿ ಚೀನಾ ಹೊರಗೆ ಈವರೆಗೂ ಕಂಪನಿ 1.05 ಲಕ್ಷ ವಾಹನಗಳ ಮಾರಾಟ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮೂರು ಪಟ್ಟು ಹೆಚ್ಚಳ. ಮೆಕ್ಸಿಕೊ, ಬ್ರಜಿಲ್, ಜಪಾನ್, ಥಾಯ್ಲೆಂಡ್, ಯುರೋಪ್ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಉತ್ತಮ ವ್ಯಾಪಾರ ಕಂಡಿದೆ.
ಎರಡನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಕಾರುಗಳ ಮಾರಾಟ ಮಾಡಿದ ಕಾರು ತಯಾರಿಕಾ ಕಂಪನಿಗಳಲ್ಲಿ ಬಿವೈಡಿಗಿಂತ ಟೊಯೊಟಾ ಕಂಪನಿಯೊಂದೇ ಮುನ್ನಡೆ ಕಾಯ್ದುಕೊಂಡಿದೆ. ಈ ಯಶಸ್ಸಿನ ಬೆನ್ನಲ್ಲೇ ಬಿವೈಡಿ ತನ್ನ ತಯಾರಿಕಾ ಘಟಕಗಳನ್ನು ಇತರ ದೇಶಗಳಲ್ಲೂ ಸ್ಥಾಪಿಸುವ ಯೋಜನೆ ಹೊಂದಿದೆ. ಕಳೆದ ತಿಂಗಳು ಥಾಯ್ಲೆಂಡ್‌ನಲ್ಲಿ ಬಿವೈಡಿ ತನ್ನ ಘಟಕ ಆರಂಭಿಸಿತು. ಹಂಗೇರಿ, ಬ್ರಜಿಲ್, ಟರ್ಕಿ, ಮೆಕ್ಸಿಕೊ ಮತ್ತು ಪಾಕಿಸ್ತಾನದಲ್ಲೂ ತಯಾರಿಕಾ ಘಟಕ ಸ್ಥಾಪಿಸುವ ಯೋಜನೆ ಹೊಂದಿದೆ ಎನ್ನಲಾಗಿದೆ.
ಫೋರ್ಡ್ ಕಂಪನಿಯು 2024ರ 2ನೇ ತ್ರೈಮಾಸಿಕದಲ್ಲಿ ಒಟ್ಟು 11.4 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ಮುಂಚೂಣಿಯಲ್ಲಿದೆ. ಅದೇ ಮಾದರಿಯಲ್ಲಿ ಬಿಎಂಡಬ್ಲೂ ಐರೋಪ್ಯ ಮಾರುಕಟ್ಟೆಯಲ್ಲಿ ಟೆಸ್ಲಾವನ್ನು ಹಿಂದಿಕ್ಕಿದೆ.