ಕಾರುಗಳ ವಿನ್ಯಾಸವಷ್ಟೇ ಈಗ ಮುಖ್ಯವಲ್ಲ. ಕಾರಿನೊಳಗೆ ಪ್ರಯಾಣಿಸುವವರ ಸುರಕ್ಷತೆಯೂ ಮುಖ್ಯ ಎಂಬುದು ಈಗ ಜಾಗತಿಕ ಮಟ್ಟದ ಬೇಡಿಕೆಯಾಗಿದೆ. ಯುರೋಪ್ ಎನ್‌ಕ್ಯಾಪ್, ಗ್ಲೋಬಲ್ ಎನ್‌ಕ್ಯಾಪ್ ಹೀಗೆ ಹಲವು ಬಗೆಯ ಟೆಸ್ಟ್‌ಗಳ ವರದಿಗಳೂ ಈಗ ಕಾರುಗಳ ಖರೀದಿಗೆ ಅಗತ್ಯವಿರುವ ಮಾನದಂಡಗಳಾಗಿವೆ.
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿರುವ ಕಾರು ಪರೀಕ್ಷಾ ಕಾರ್ಯಕ್ರಮವು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತಿದೆ. ಹೀಗಾಗಿ ಮುಂದಿನ ಬದಲಾವಣೆ ಹಾಗೂ ಹೊಸ ನಿಯಮಗಳು 2026ರಲ್ಲಿ ಜಾರಿಗೆ ಬರಲಿದೆ.
ಕಾರಿನಲ್ಲಿ ಪ್ರಯಾಣಿಸುವ ವ್ಯಕ್ತಿಗಳು ಮಾತ್ರವಷ್ಟೇ ಟೆಸ್ಟ್ ಪಾಸಾಗಲು ಈಗ ಮುಖ್ಯವಲ್ಲ. ಅದು ನೈಜ ಜಗತ್ತಿಗೆ ಹತ್ತಿರವಿರಬೇಕು ಎಂಬುದು ಹೊಸ ನಿಯಮ. ಅಂದರೆ, ಮಳೆ ಅಥವಾ ಸಮರ್ಪಕ ರಸ್ತೆಯೇ ಇಲ್ಲದ ಹಾದಿಯಲ್ಲೂ ಕಾರಿನೊಳಗಿರುವ ಪ್ರಯಾಣಿಕರ ಸುರಕ್ಷತೆ ಸಾಧ್ಯವೇ ಎಂಬುದು ಸೇರಲಿದೆ.
ರಾತ್ರಿ ಸಂಚರಿಸುವಾಗ ಅಥವಾ ಹಗಲು ಸಂಚರಿಸುವಾಗ ಕಾರು ಎಷ್ಟು ಸುರಕ್ಷಿತವಾಗಿರಲಿದೆ ಎಂಬುದೂ ಮುಂದೆ ಸುರಕ್ಷತೆಯ ಪಟ್ಟಿಗೆ ಸೇರಲಿದೆ. ಇಷ್ಟು ಮಾತ್ರವಲ್ಲ, ಕಾರಿನಲ್ಲಿ ಕೂತವರ ವಯಸ್ಸು, ತೂಕ, ಸ್ಥೂಲಕಾಯ ಹೀಗೆ ಎಲ್ಲವನ್ನೂ ಪರಿಗಣಿಸಿ ಕಾರು ಎಷ್ಟರಮಟ್ಟಿಗೆ ಸುರಕ್ಷಿತ ಎಂಬುದು ನಿರ್ಧಾರವಾಗಲಿದೆ. ಜತೆಗೆ ಹೆಚ್ಚಿನ ವೇಗ ಹಾಗೂ ಕಡಿಮೆ ವೇಗದಲ್ಲಿ ಕಾರಿನೊಳಗಿದ್ದವರ ಸುರಕ್ಷತೆ ಇಲ್ಲಿ ಪರಿಗಣಿಸಲಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.