Ola electric ಸ್ಕೂಟರ್ ಸೇವೆಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ಸುಮಾರು 10 ಸಾವಿರ ದೂರುಗಳು ಸಲ್ಲಿಕೆಯಾಗಿದೆ. ಈ ಕುರಿತಂತೆ ವಿವರಣೆ ನೀಡುವಂತೆ ಗ್ರಾಹಕರ ಹಕ್ಕುಗಳ ಪ್ರಾಧಿಕಾರದ ಕೇಂದ್ರೀಯ ಮಂಡಳಿಯು ಸಾಫ್ಟ್‌ಬ್ಯಾಂಕ್ ಬೆಂಬಲಿತ ಇ–ಸ್ಕೂಟರ್ ತಯಾರಿಕಾ ಕಂಪನಿಗೆ ನೋಟಿಸ್ ಜಾರಿ ಮಾಡಿದೆ.
‘ಗ್ರಾಹಕರ ಹಕ್ಕುಗಳ ಪ್ರಾಧಿಕಾರದ ಕೇಂದ್ರೀಯ ಮಂಡಳಿಯು 2023ರ ಸೆಪ್ಟೆಂಬರ್‌ನಿಂದ 2024ರ ಆಗಸ್ಟ್‌ವರೆಗಿನ ಅವಧಿಯಲ್ಲಿ ಒಲಾ ವಿರುದ್ಧ ಸಲ್ಲಿಕೆಯಾದ ಹತ್ತು ಸಾವಿರ ದೂರುಗಳನ್ನು ಪರಿಗಣಿಸಿ ನೋಟಿಸ್ ಜಾರಿ ಮಾಡಿದೆ’ ಎಂದು ಗ್ರಾಹಕರ ವ್ಯವಹಾರಗಳ ಸಚಿವಾಲಯದ ನಿಧಿ ಖರೆ ತಿಳಿಸಿರುವುದಾಗಿ ವರದಿಯಾಗಿದೆ.
‘ಇಂಥದ್ದೇ ದೂರುಗಳು ಈಗಲೂ ಸಲ್ಲಿಕೆಯಾಗುತ್ತಿವೆ. ಇದು ಬಹಳಷ್ಟು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಇದು ಕಂಪನಿಯ ವೃತ್ತಿಪರವಲ್ಲದ ನಡವಳಿಕೆ ಎಂದೇ ಪರಿಗಣಿಸಲಾಗಿದೆ’ ಎಂದಿದ್ದಾರೆ.
ಇ–ಸ್ಕೂಟರ್ ವಿಭಾಗದಲ್ಲಿ ಭಾರತದಲ್ಲಿ ಶೇ 27ರಷ್ಟು ಪಾಲನ್ನು ಒಲಾ ಹೊಂದಿದೆ. ಈಗ ಕಂಪನಿ ವಿರುದ್ಧ ಕೇಳಿಬಂದಿರುವ ದೂರಿನ ಕುರಿತು ಪ್ರತಿಕ್ರಿಯೆ ಪಡೆಯಲು ಯತ್ನಿಸಲಾಯಿತು. ಆದರೆ ಪ್ರತಿಕ್ರಿಯಿಸಲಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸ್ಕೂಟರ್‌ನ ಸೇವಾ ಕೇಂದ್ರಗಳಲ್ಲಿನ ಸಮಸ್ಯೆಯನ್ನೇ ತನ್ನ ಹಾಸ್ಯಕ್ಕೆ ಬಳಸಿಕೊಂಡಿದ್ದಕ್ಕೆ ಒಲಾ ಸಂಸ್ಥಾಪಕರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವಾಗ್ಯುದ್ಧ ನಡೆದಿದ್ದು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.
ಕಳೆದ ಆಗಸ್ಟ್‌ನಲ್ಲಿ ಒಲಾ ಎಲೆಕ್ಟ್ರಿಕ್ ಕಂಪನಿಯು ಷೇರು ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಗ್ರಾಹಕರ ಸೇವೆಯಲ್ಲಿನ ಲೋಪದಿಂದಾಗಿ ಉಂಟಾದ ಆಕ್ರೋಶದಿಂದ ಶೇ 40ರಷ್ಟು ಕುಸಿತ ಕಂಡಿದೆ. ಕಳೆದ ಕೆಲ ವಾರಗಳಿಂದ ಒಲಾ ಸ್ಕೂಟರ್‌ಗಳ ಮಾರಾಟದಲ್ಲೂ ಇಳಿಮುಖವಾಗಿದೆ. ಕಂಪನಿಯ ಸೇವೆ ಕುರಿತಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.