ಭಾರತೀಯರ ಕಾರುಗಳ ಅಪೇಕ್ಷೆ ಸದ್ಯ ಎಸ್ಯುವಿ ಆಗಿದೆ. ಅದರಲ್ಲೂ ₹15 ಲಕ್ಷದೊಳಗಿನ ಕಾರುಗಳು ಹೆಚ್ಚು ಬಿಕರಿ ಆಗುತ್ತಿವೆ. ತಯಾರಕರು ತರಹೇವಾರಿ ಬಣ್ಣ ಹಾಗೂ ವೇರಿಯಂಟ್ಗಳಲ್ಲಿ ಇಂಥ ಮಧ್ಯಮ ಗಾತ್ರದ ಎಸ್ಯುವಿಗಳನ್ನು ನೀಡುತ್ತಿದ್ದರೂ, ಹಲವರ ಅಪೇಕ್ಷೆ ಕಡು ಕಪ್ಪು ಬಣ್ಣದ ಡಾರ್ಕ್ ಎಡಿಷನ್ ಆಗಿದೆ.
ಒಳಗೂ ಕಪ್ಪು, ಹೊರಗೂ ಕಪ್ಪು ಎಂಬ ಈ ಡಾರ್ಕ್ ಎಡಿಷನ್ ಎಸ್ಯುವಿಗಳಲ್ಲಿ ₹15 ಲಕ್ಷದೊಳಗಿನ ಬೆಲೆಯಲ್ಲಿ ಸಿಗುವ ಪ್ರಮುಖ ಕಾರುಗಳ ಪಟ್ಟಿ ಇಲ್ಲಿದೆ.

ಹ್ಯುಂಡೇ ಎಕ್ಸ್ಟರ್ (Exter) ನೈಟ್ ಎಡಿಷನ್
ಬೆಲೆ: ₹8.46 ಲಕ್ಷ
ಹ್ಯುಂಡೇ ಕಂಪನಿಯ ಆರಂಭಿಕ ಬೆಲೆಯ ಎಸ್ಯುವಿಗಳಲ್ಲಿ ಎಕ್ಸ್ಟರ್ ಪ್ರಮುಖದ್ದು. ಇದರಲ್ಲೇ ಕಪ್ಪು ಬಣ್ಣದ ಕಾರು ಬೇಕಾದಲ್ಲಿ, ಎಕ್ಸ್ಟರ್ ಎಸ್ಎಕ್ಸ್ ನೈಟ್ ಎಡಿಷನ್ ವೇರಿಯಂಟ್ ಲಭ್ಯ. ₹8.46 ಲಕ್ಷಕ್ಕೆ ಈ ಕಾರು ಲಭ್ಯ. ಇದಕ್ಕೆ ಹೆಚ್ಚುವರಿಯಾಗಿ ₹15 ಸಾವಿರ ಪಾವತಿಸಿದಲ್ಲಿ ಎಸ್ಎಕ್ಸ್ ಟ್ರಿಮ್ ಸರಿಸಮಾನವಾದ ಸೌಲಭ್ಯಗಳು ಇದರಲ್ಲಿವೆ.
ಹೊರಭಾಗದಲ್ಲಿ ಕಡು ಕಪ್ಪು ಬಣ್ಣದ ಹೊರಮೈ, ನೈಟ್ ಎಡಿಷನ್ ಬ್ಯಾಡ್ಜ್ ಹಾಗೂ ಬಂಪರ್ನಲ್ಲಿ ತುಸು ಕೆಂಪು, ಬ್ರೇಕ್ ಕ್ಲಿಪ್ ಹಾಗೂ ಟೇಲ್ ಲೈಟ್ಗಳೂ ಕಪ್ಪು ಮತ್ತು ಕೆಂಪು ವರ್ಣದಲ್ಲಿ ಲಭ್ಯ. ಒಳಭಾಗದಲ್ಲೂ ಕಪ್ಪು ಬಣ್ಣವನ್ನು ಧಾರಾಳವಾಗಿ ಬಳಸಲಾಗಿದೆ.

ಹ್ಯುಂಡೇ ವೆನ್ಯೂ ನೈಟ್ ಎಡಿಷನ್
ಬೆಲೆ: ₹ 10.34 ಲಕ್ಷ
ಹ್ಯುಂಡೇ ಕಂಪನಿಯಿಂದ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುತ್ತಿರುವ ಡಾರ್ಕ್ ಎಡಿಷನ್ ವೆನ್ಯೂ. ಎಕ್ಸ್ಟರ್ ರೀತಿಯಲ್ಲೇ ಇದ್ದರೂ, ವೆನ್ಯೂ ನೈಟ್ ಎಡಿಷನ್ ಕೆಂಪು ಬಣ್ಣದ ಬ್ರೇಕ್ ಕ್ಲಿಪರ್ಸ್ ಹೊರತುಪಡಿಸಿ ಉಳಿದೆಲ್ಲವೂ ಈ ಕಾರಿನಲ್ಲಿ ಕಪ್ಪು ವರ್ಣದಲ್ಲೇ ಇದೆ.

ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್
ಬೆಲೆ: ₹ 11.7 ಲಕ್ಷ
ಟಾಟಾ ಕಂಪನಿಯ ನೆಕ್ಸಾನ್ ಡಾರ್ಕ್ ಎಡಿಷನ್ ಬ್ಲಾಕ್ ಥೀಮ್ನಲ್ಲೇ ಅತ್ಯಂತ ಮೆಚ್ಚಿನ ಕಾರು. ಇತರ ಎಸ್ಯುವಿಗಳಿಗಿಂತ ಇದು ಭಿನ್ನವಾಗಿದೆ. ಏಕೆಂದರೆ ಈ ಕಾರಿನಲ್ಲಿ ಕಪ್ಪು ಹೊರತುಪಡಿಸಿ ಇತರ ಯಾವುದೇ ಬಣ್ಣಗಳು ಹೊರಭಾಗದಲ್ಲಿ ಕಾಣಿಸದು. ಕ್ಯಾಬಿನ್ನಲ್ಲೂ… ಒಳಭಾಗದಲ್ಲಿ ಡ್ಯಾಶ್ ಬೋರ್ಡ್, ಸೆಂಟರ್ ಕನ್ಸೋಲ್, ಸ್ಟಿಯರಿಂಗ್ ವೀಲ್ ಕಪ್ಪು ಬಣ್ಣದ್ದೇ ಆಗಿವೆ. ಆಸನಗಳು ಕಡು ನೀಲಿ ಬಣ್ಣದ್ದಾಗಿದೆ. ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ವೇರಿಯಂಟ್ ₹40 ಸಾವಿರ ಹೆಚ್ಚುವರಿ ಹಣಕ್ಕೆ ಲಭ್ಯ.

ಎಂಜಿ ಆ್ಯಸ್ಟರ್ ಬ್ಲಾಕ್ಸ್ಟಾರ್ಮ್
ಬೆಲೆ: ₹ 13.78 ಲಕ್ಷ
ಎಂಜಿ ಆ್ಯಸ್ಟರ್ ಬ್ಲಾಕ್ಸ್ಟಾರ್ಮ್ ಕಾರು ಹೆಚ್ಚಾಗಿ ಹ್ಯುಂಡೇ ಎಕ್ಸ್ಟರ್ ನೈಟ್ ಎಡಿಷನ್ ಜೊತೆ ಹೋಲಿಸಬಹುದು. ಏಕೆಂದರೆ ಕಪ್ಪು ಮತ್ತು ಕೆಂಪು ಬಣ್ಣವನ್ನು ಈ ಕಾರಿನಲ್ಲಿ ಹದವಾಗಿ ಬೆರೆಸಲಾಗಿದೆ. ಬಂಪರ್ನಲ್ಲಿ ಕೆಂಪು ಬಣ್ಣವನ್ನು ಎದ್ದು ಕಾಣಿಸುವಂತೆ ಬಳಸಲಾಗಿದೆ. ಕಪ್ಪು ಬಣ್ಣದ ಅಪ್ಹೋಲ್ಸ್ಟ್ರೀ, ಕೆಂಪು ಬಣ್ಣದ ಹೊಲಿಗೆಯ ಬ್ಲಾಕ್ಸ್ಟಾರ್ಮ್ ಎಂಬ್ರಾಯಿಡರಿ ಇರುವ ಮುಂಭಾಗದ ಆಸನಗಳ ಹೆಡ್ರೆಸ್ಟ್ನಲ್ಲಿ ಬಳಸಲಾಗಿದೆ. ಕೆಂಪು ಬಣ್ಣದ ಏರ್ ಕಾನ್ ವೆಂಟ್ಸ್, ಸ್ಟಿಯರಿಂಗ್ ವೀಲ್ ಹಾಗೂ ಬಾಗಿಲುಗಳಲ್ಲಿ ಬಳಸಲಾಗಿದೆ. ₹34 ಸಾವಿರ ಹೆಚ್ಚುವರಿಯಾಗಿ ನೀಡಿದರೆ ಆ್ಯಸ್ಟರ್ ಮಿಡ್ ಸ್ಪೆಕ್ ವೇರಿಯಂಟ್ ಸಿಗಲಿದೆ.

ಹ್ಯುಂಡೇ ಕ್ರೇಟಾ ನೈಟ್ ಎಡಿಷನ್
ಬೆಲೆ: ₹ 14.62 ಲಕ್ಷ
ಅತ್ಯಂತ ಬೇಡಿಕೆಯ ಹ್ಯುಂಡೇ ಕ್ರೇಟಾ ಕೂಡಾ ನೈಟ್ ಎಡಿಷನ್ ವೇರಿಯಂಟ್ ಹೊರತಂದಿದ್ದು, ಎಸ್ಎಕ್ಸ್ಒ 1.5ಡಿ ಎಟಿ ನೈಟ್ ಎಡಿಷನ್ ಟ್ರಿಮ್ ಹೊಂದಿದೆ. ಇದು ₹20.42 ಲಕ್ಷಕ್ಕೆ ಲಭ್ಯ. ವೆನ್ಯೂವನ್ನೇ ಹೋಲುವ ಕ್ರೇಟ್ ನೈಟ್ ಎಡಿಷನ್, ಲೋಗೊ ಟೈಲ್ಗೇಟ್ನಲ್ಲಿ ನೋಡಬಹುದು. ಕಂಚಿನ ಬಣ್ಣದ ಮೆಟಲ್ ಪೆಡಲ್ ಸೇರಿದಂತೆ ಕಪ್ಪು ಬಣ್ಣಕ್ಕೆ ಹೊಂದುವ ಬಣ್ಣವನ್ನೇ ಬಳಸಲಾಗಿದೆ.