ಕಂಪನಿಯ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದ ನೌಕರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಂಪನಿಯೊಂದು, ತನ್ನ ಸಾಧಕ ನೌಕರರಿಗೆ ಕಾರುಗಳು ಹಾಗೂ ಬೈಕುಗಳನ್ನು ಈ ದೀಪಾವಳಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ.
ಸ್ಟ್ರಕ್ಚರಲ್ ಸ್ಟೀಲ್ ಡಿಸೈನ್ ಕಂಪನಿಯಾದ ಟೀಮ್ ಡಿಟೈಲಿಂಗ್ ಸಲ್ಯೂಷನ್ಸ್ ಉತ್ತಮ ಸೇವೆ ಸಲ್ಲಿಸಿದ ತನ್ನ ನೌಕರರಿಗೆ 28 ಕಾರುಗಳು ಮತ್ತು 29 ಬೈಕ್ಗಳನ್ನು ಉಡುಗೊರೆಯಾಗಿ ನೀಡಿದೆ.
ನೌಕರರ ಶ್ರಮ ಮತ್ತು ಬದ್ಧತೆಗೆ ಅನುಗುಣವಾಗಿ ಹುಂಡೈ, ಟಾಟಾ, ಮಾರುತಿ ಸುಜುಕಿ ಮತ್ತು ಮರ್ಸಿಡೀಸ್ ಬೆಂಜ್ ಕಾರುಗಳನ್ನು ನೀಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಕಣ್ಣನ್, ‘ಕಂಪನಿಯ ಯಶಸ್ಸಿನಲ್ಲಿ ನೌಕರರ ಪಾಲು ದೊಡ್ಡದಿದೆ. ಅದನ್ನು ಗುರುತಿಸುವುದು ನಮ್ಮ ಜವಾಬ್ದಾರಿ’ ಎಂದು ತಿಳಿಸಿದ್ದಾರೆ.
‘ಜೀವನದಲ್ಲಿ ಕಾರು ಅಥವಾ ಬೈಕ್ ಖರೀದಿಸುವುದು ನೌಕರರ ಕನಸಾಗಿರುತ್ತದೆ. ಕಂಪನಿಯಲ್ಲಿ 180 ನೌಕರರು ಇದ್ದಾರೆ. ಈ ಪೈಕಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗಿದೆ. 2022ರಲ್ಲಿ ನಾಲ್ವರು ಹಿರಿಯ ಸಹೋದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಲಾಗಿತ್ತು. ಪ್ರಸ್ತುತ ಕಾರು ಮತ್ತು ಬೈಕ್ಗಳನ್ನು ನೀಡಲಾಗಿದೆ’ ಹೇಳಿದ್ದಾರೆ.