ಈ ಹಬ್ಬದ ಋತುವಿನಲ್ಲಿ ದೇಶೀಯ ವಿಮಾನ ಟಿಕೆಟ್ ದರದಲ್ಲಿ ಸಾಕಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಟ್ರಾವೆಲ್ ಪೋರ್ಟಲ್ ಇಕ್ಸಿಗೊ ತಿಳಿಸಿದೆ.
ದೀಪಾವಳಿಗೆ ಏಕಮುಖ ಸಂಚಾರ ದರದಲ್ಲಿ ಶೇ 10ರಿಂದ ಶೇ 15ರಷ್ಟು ಏರಿಕೆಯಾಗಬಹುದು. ಓಣಂ ಹಬ್ಬದ ಸಂದರ್ಭ ದಲ್ಲಿ ಶೇ 20ರಿಂದ ಶೇ 25ರಷ್ಟು ದರ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಅಕ್ಟೋಬರ್ 30ರಿಂದ ನವೆಂಬರ್ 5ರ ವರೆಗೆ ದೆಹಲಿ–ಚೆನ್ನೈ ನಡುವಿನ ತಡೆರಹಿತ ಸಂಚಾರ ದರವು ₹7,618 ಆಗುವ ಸಾಧ್ಯತೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 10ರಿಂದ ಶೇ 16ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿಸಿದೆ.
‘ದೆಹಲಿ–ಚೆನ್ನೈ, ಮುಂಬೈ–ಬೆಂಗಳೂರು ಮತ್ತು ದೆಹಲಿ–ಹೈದರಾಬಾದ್ ನಡುವಿನ ಏಕಮುಖ ಸಂಚಾರದ ಸರಾಸರಿ ದರ ₹4 ಸಾವಿರದಿಂದ ₹5 ಸಾವಿರ ಇದೆ. ಈ ದರದಲ್ಲಿ ಶೇ 10ರಿಂದ ಶೇ 15ರಷ್ಟು ಏರಿಕೆಯಾಗಬಹುದು’ ಎಂದು ಇಕ್ಸಿಗೊ ಗ್ರೂಪ್‌ನ ಸಹ ಕಾರ್ಯ ನಿರ್ವಾಹಕ ಅಧಿಕಾರಿ ರಜನೀಶ್ ಕುಮಾರ್ ತಿಳಿಸಿದ್ದಾರೆ.
1.29 ಪ್ರಯಾಣಿಕರು ಸಂಚಾರ: ಜುಲೈ ತಿಂಗಳಿನಲ್ಲಿ ದೇಶೀಯ ವಿಮಾನ ಮಾರ್ಗದಲ್ಲಿ 1.29 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶ ನಾಲಯ (ಡಿಜಿಸಿಎ) ತಿಳಿಸಿದೆ
ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 7.3ರಷ್ಟು ಹೆಚ್ಚಳವಾಗಿದೆ.