ಮಾಧ್ಯಮ ವರದಿಗಳ ಪ್ರಕಾರ ಫೋರ್ಡ್, ಭಾರತಕ್ಕೆ ಮರಳುವ ಕುರಿತು ಕಂಪನಿಯ ವ್ಯವಸ್ಥಾಪನಾ ಮಂಡಳಿಯು ಉನ್ನತ ಸಮಿತಿಯು ಹೊಸ ಸಾಧ್ಯತೆಗಳ ಕುರಿತು ಅವಲೋಕಿಸುತ್ತಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಬೆಳವಣಿಗೆಯ ಹಾದಿಯಲ್ಲಿ ಹೊಸ ಸಾಧ್ಯತೆಗಳ ಕುರಿತು ಕಂಪನಿ ಈಗಾಗಲೇ ತಜ್ಞರ ವರದಿಯನ್ನು ಆಧರಿಸಿ ಚರ್ಚೆ ನಡೆಸುತ್ತಿದೆ ಎಂದು ವರದಿಯಾಗಿದೆ. ಫೋರ್ಡ್ನ ಜಾಗತಿಕ ತಂಡವು ಭಾರತ ಮರು ಪ್ರವೇಶಿಸುವ ಕುರಿತು ಎಲ್ಲಾ ಆಯಾಮಗಳಿಂದಲೂ ಚಿಂತಿಸಿ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ತನ್ನ ವರದಿಯನ್ನು ಸಮಿತಿಯು ಕೇಂದ್ರ ಕಚೇರಿಗೆ ಕಳುಹಿಸಿದೆ.
2021ರಲ್ಲಿ ಭಾರತದಿಂದ ಹೊರ ಹೋಗುವ ಮೊದಲು ಫೋರ್ಡ್ ಭಾರತದಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿತ್ತು. ಆದರೆ ಒಮ್ಮೆ ಹೊರಹೋದ ನಂತರ ಮತ್ತೊಮ್ಮೆ ಪ್ರವೇಶ ಪಡೆಯುವುದೆಂದರೆ ಅದಕ್ಕೆ ಬಂಡವಾಳ ಮರು ಹೂಡಿಕೆ ಅಗತ್ಯ. ಚೀನಾ ಹಾಗೂ ಯುರೋಪ್ನ ಮಾರುಕಟ್ಟೆಗಳು ಮಂದ ಗತಿಯಲ್ಲಿ ಸಾಗುತ್ತಿರುವಾಗ ಭಾರತ ಮಾತ್ರ ಒಂದಷ್ಟು ಲಾಭವನ್ನು ತಂದುಕೊಡಬಲ್ಲದು ಎಂಬ ಆಲೋಚನೆ ಕಂಪನಿಯದ್ದು ಎಂದೆನ್ನಲಾಗಿದೆ.
ಈ ಹಿಂದೆ ಫೋರ್ಡ್ ತನ್ನ ಗುಜರಾತ್ ಪ್ಲಾಂಟ್ ಅನ್ನು ಟಾಟಾ ಮೋಟಾರ್ಸ್ಗೆ ಮಾರಾಟ ಮಾಡಿತ್ತು. ಚೆನ್ನೈನಲ್ಲಿರುವ ಘಟಕ ಖರೀದಿಗೆ ಜೆಎಸ್ಡಬ್ಲೂ ಸಮೂಹ ಪೈಪೋಟಿಯಲ್ಲಿತ್ತು. ಆದರೆ ಸದ್ಯ ಅದು ಹಿಂದೆ ಸರಿದಿದೆ. ಇದು ಫೋರ್ಡ್ ಭಾರತ ಮರು ಎಂಟ್ರಿಯ ಮುನ್ಸೂಚನೆ ಎಂದು ಕೆಲ ತಜ್ಞರು ಹೇಳುತ್ತಿದ್ದಾರೆ.
ಫೋರ್ಡ್ನ ಪ್ರಮುಖರು ಭಾರತ ಮರು ಎಂಟ್ರಿಯಗೆ ಹಸಿರು ನಿಶಾನೆ ತೋರಿದಲ್ಲಿ, ಚೆನ್ನೈನ ಘಟಕದಲ್ಲಿ ಕಾರುಗಳ ತಯಾರಿಕೆ ಮಾಡಲು ಕನಿಷ್ಠ ಒಂದು ವರ್ಷವಾದರೂ ಬೇಕು ಎಂದು ಅಂದಾಜಿಸಲಾಗಿದೆ.