FORD ಕಾರ್ಯಾಚರಣೆಗೆ ಚೆನ್ನೈನಲ್ಲಿ ಸಿದ್ಧತೆ: ಕಾರುಗಳು ಭಾರತಕ್ಕೋ..? ವಿದೇಶಕ್ಕೋ..?

ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನೇ ಸ್ಥಿಗಿತಗೊಳಿಸಿದ್ದ ಫೋರ್ಡ್‌, ಇದೀಗ ಚೆನ್ನೈನಲ್ಲಿರುವ ತನ್ನ ಘಟಕದಲ್ಲಿ ಮರು ಕಾರ್ಯಾಚರಣೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದು, ಇದಕ್ಕೆ ಪೂರಕವಾಗಿ ತಮಿಳುನಾಡು ಸರ್ಕಾರಕ್ಕೆ ಉದ್ದೇಶ ಪತ್ರವನ್ನು ಕಂಪನಿ ಸಲ್ಲಿಸಿದೆ.

ಸುಮಾರು ಮೂರು ದಶಕಗಳ ಕಾಲ ಭಾರತದಲ್ಲಿದ್ದ ಫೋರ್ಡ್‌, 2021ರಲ್ಲಿ ಭಾರತದ ಮಾರುಕಟ್ಟೆಗೆ ಕಾರುಗಳನ್ನು ತಯಾರಿಸುವುದನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಆದರೆ ಇದೀಗ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ಫೋರ್ಡ್‌, ಚೆನ್ನೈನಲ್ಲಿರುವ ತನ್ನ ತಯಾರಿಕಾ ಘಟಕದ ಮೂಲಕ ಕಾರುಗಳ ಉತ್ಪಾದನೆ ಮತ್ತು ರಫ್ತು ಕಾರ್ಯಾಚರಣೆ ನಡೆಸುವುದಾಗಿ ಉದ್ದೇಶ ಪತ್ರ (LOI)ದಲ್ಲಿ ಹೇಳಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಇತ್ತೀಚಿನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಫೋರ್ಡ್‌ ಕಂಪನಿಯ ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಿ, ತಮ್ಮ ಈ ಪ್ರಸ್ತಾವವನ್ನು ಸಲ್ಲಿಸಿದ್ದಾರೆ.

‘ಈ ನೂತನ ಪ್ರಸ್ತಾವದ ಮೂಲಕ ಭಾರತದಲ್ಲಿನ ನುರಿತ ತಂತ್ರಜ್ಞರನ್ನು ಬಳಸಿಕೊಂಡು ಕಾರುಗಳ ತಯಾರಿಕೆಯನ್ನು ಮುಂದುವರಿಸುವುದು ಹಾಗೂ ಆ ಮೂಲಕ ಜಾಗತಿಕ ಮಾರುಕಟ್ಟೆಗೆ ಹೊಸ ಮಾದರಿಯ ಕಾರುಗಳನ್ನು ನೀಡುವ ಕಂಪನಿಯ ಉದ್ದೇಶ ಮುಂದುವರಿಯಲಿದೆ’ ಎಂದು ಫೋರ್ಡ್ ಅಂತರರಾಷ್ಟ್ರೀಯ ಮಾರುಕಟ್ಟೆಯ ಸಮೂಹ ಅಧ್ಯಕ್ಷ ಕೇ ಹಾರ್ಡ್‌ ತಿಳಿಸಿದ್ದಾರೆ.

‘ತಮಿಳುನಾಡಿನಲ್ಲಿರುವ ಜಾಗತಿಕ ಕಾರ್ಯಾಚರಣೆ ಘಟಕದಲ್ಲಿ ಸದ್ಯ 12 ಸಾವಿರ ಉದ್ಯೋಗಿಗಳನ್ನು ಫೋರ್ಡ್‌ ಹೊಂದಿದೆ. ಇದು ಮುಂದಿನ ಮೂರು ವರ್ಷಗಳಲ್ಲಿ 2,500ರಿಂದ 3 ಸಾವಿರದಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಫೋರ್ಡ್‌ ಕಂಪನಿಯಿಂದ ನೇರ ವೇತನ ಪಾವತಿ ವ್ಯಾಪ್ತಿಯ ಅತಿ ಹೆಚ್ಚು ನೌಕರರ ಸಂಖ್ಯೆ ಈ ಘಟಕದಲ್ಲಿದೆ’ ಎಂದಿದ್ದಾರೆ.

ಸುಮಾರು ಮೂರು ದಶಕಗಳ ಕಾಲ ಭಾರತದಲ್ಲಿದ್ದ ಫೋರ್ಡ್‌ 2021ರಲ್ಲಿ ದೇಶವನ್ನು ತೊರೆಯುವ ನಿರ್ಣಯ ಕೈಗೊಂಡಿತ್ತು. ದೇಶದಲ್ಲಿರುವ ಫೋರ್ಡ್‌ನ ಎರಡು ತಯಾರಿಕಾ ಘಟಕದಲ್ಲಿನ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿತ್ತು. ಭಾರತದಲ್ಲಿನ ತನ್ನ ಕಾರ್ಯಾಚರಣೆಯ ಪುನರ್‌ರಚನೆಯ ಭಾಗವಾಗಿ ಆಮದು ಮಾಡಿಕೊಳ್ಳುವ ಕಾರುಗಳನ್ನು ಮಾತ್ರ ಮಾರಾಟ ಮಾಡುವುದಾಗಿ ಕಂಪನಿ ಘೋಷಿಸಿತ್ತು.

ಈ ನಿಟ್ಟಿನಲ್ಲಿ ಗುಜರಾತ್‌ನ ಸನಾಂದ್‌ನಲ್ಲಿರುವ ತನ್ನ ತಯಾರಿಕಾ ಘಟಕವನ್ನು ಟಾಟಾ ಮೋಟರ್ಸ್‌ಗೆ ಮಾರಾಟ ಮಾಡಿತು. ಆದರೆ ಚೆನ್ನೈನ ತಯಾರಿಕಾ ಘಟಕವನ್ನು ತಾನು ಹೊಂದಿದ್ದ ಗುರಿಯಂತೆ 2022ರ ದ್ವಿತೀಯ ತ್ರೈಮಾಸಿಕದೊಳಗೆ ಮಾರಲು ಫೋರ್ಡ್‌ಗೆ ಸಾಧ್ಯವಾಗಿರಲಿಲ್ಲ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ