Hero Surge | ದ್ವಿಚಕ್ರವೂ ಹೌದು, ತ್ರಿಚಕ್ರವನ್ನಾಗಿಯೂ ಮಾಡಬಹುದು

ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹಿರೊ ಕಂಪನಿ ಮಾಲೀಕತ್ವದ ಸರ್ಜ್‌ ಆಟೊಮೊಬೈಲ್ಸ್‌ ವಿನೂತನ ಮಾದರಿಯ ವಾಹನವನ್ನು ಪರಿಚಯಿಸಿದ್ದು, ಅದಕ್ಕೆ ಎಸ್‌32 ಎಂದು ಹೆಸರಿಟ್ಟಿದೆ.

ವಿದ್ಯುತ್ ಚಾಲಿತ ವಾಹನವೇ ಆದರೂ, ಇದರ ವಿನ್ಯಾಸದಲ್ಲಿರುವ ವಿನೂತನ ಬದಲಾವಣೆ ಹಲವರ ಹುಬ್ಬೇರಿಸುವಂತೆ ಮಾಡಲಿದೆ. ಏಕೆಂದರೆ ಇದು ದ್ವಿಚಕ್ರವಾಹನವೂ ಹೌದು. ಅಗತ್ಯಬಿದ್ದರೆ ತ್ರಿಚಕ್ರವನ್ನಾಗಿಯೂ ಪರಿವರ್ತಿಸಬಲ್ಲ ಸುಲಭದ ವಾಹನ. ಈ ಬದಲಾವಣೆಗೆ ಅಗತ್ಯವಿರುವ ಸಮಯ ಕೇವಲ 3 ನಿಮಿಷ ಎಂದು ವಾಹನ ತಯಾರಿಕಾ ಕಂಪನಿ ಹೇಳಿದೆ.

ಸರ್ಜ್‌ ಎಸ್‌32 ತ್ರಿಚಕ್ರ ವಾಹನ ಹೌದು, ಆದರೆ ಇದಕ್ಕೆ ಮುಂಭಾಗದ ಚಕ್ರ ಇರುವುದಿಲ್ಲ. ಅದರ ಬದಲು ಇ–ಸ್ಕೂಟರ್‌ ಅನ್ನೇ ಇದಕ್ಕೆ ಜೋಡಿಸಿದಲ್ಲಿ, ತ್ರಿಚಕ್ರಕ್ಕೆ ಅಗತ್ಯವಿರುವ ಮುಂಭಾಗದ ಗಾಲಿ ಜೋಡಣೆಯಾಗಲಿದೆ. ಇದಕ್ಕಾಗಿ ಯಾವುದೇ ವಿಶೇಷ ಸಾಧನ, ಸಲಕರಣೆಯ ಅಗತ್ಯವಿಲ್ಲ. ಸರಳವಾಗಿ ದ್ವಿಚಕ್ರವಾಹನವನ್ನು ತ್ರಿಚಕ್ರವನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಕಂಪನಿ ಅಭಿವೃದ್ಧಿಪಡಿಸಿದೆ.

ಮೊದಲು ದ್ವಿಚಕ್ರವಾಹನದ ಹಿಂಬದಿಯ ಚಕ್ರವನ್ನು ಭೂಮಿಯಿಂದ ಸ್ವಲ್ಪ ಮೇಲಕ್ಕೆತ್ತಬೇಕು. ಅದನ್ನು ತ್ರಿಚಕ್ರವಾಹನದ ಸಾಧನಕ್ಕೆ ಸೇರಿಸದರಾಯಿತು. ನಂತರ ಎಲೆಕ್ಟ್ರಾನಿಕ್ ಕನೆಕ್ಟರ್ ಅನ್ನು ಇದಕ್ಕೆ ಪ್ಲಗ್‌ ಇನ್ ಮಾಡಿದರಾಯಿತು. ದ್ವಿಚಕ್ರ ವಾಹನದ ಹ್ಯಾಂಡಲ್ ಬಾರ್ ಅನ್ನೇ ತ್ರಿಚಕ್ರವಾಹನ ನಿಯಂತ್ರಿಸುವ ಪವರ್ ಟ್ರೈನ್ ಆಗಿ ಮತ್ತು ಬ್ರೇಕ್ ಆಗಿ ಕೆಲಸ ಮಾಡಲಿದೆ.

ಸರ್ಜ್‌ ಎಸ್‌32 ವಿನ್ಯಾಸ

ಎಸ್‌32 ಪ್ರಯಾಣಿಕ ವಾಹನ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಪ್ರಾನ್ ಹೊಂದಿರುವ ಹೆಡ್‌ಲೈಟ್‌, ಅಗಲವಾದ ಕಾಲಿಡುವ ಜಾಗ ಹಾಗೂ ಇಬ್ಬರಿಗಾಗಿ ವಿನ್ಯಾಸ ಮಾಡಿರುವ ಎರಡು ಆಸನಗಳು. ಮುಂಭಾಗದ ಇಂಡಿಕೇಟರ್‌ಗಳು ಹ್ಯಾಂಡಲ್‌ಬಾರ್‌ನಿಂದ ಹೊರಬಂದಿವೆ. ಇದು ಸ್ಕೂಟರ್ ವಿಭಾಗದಲ್ಲಿ ಹೊಸತು. ಹಿಂಬದಿಯ ಎಲ್‌ಇಡಿಯನ್ನು ವಾಹನದ ದೇಹದ ಭಾಗದೊಳಗೆ ಅಳವಡಿಸಲಾಗಿದೆ.

ಜೋಡಿ ಶಾಕ್‌ಅಬ್ಸಾರ್ಬರ್ಸ್‌ಗಳನ್ನು ಮುಂಭಾಗದಲ್ಲಿ ನೀಡಲಾಗಿದೆ. ಒಂದು ಶಾಕ್ ಅಬ್ಸಾರ್ಬರ್‌ ಅನ್ನು ಹಿಂಭಾಗಕ್ಕೆ ಕೊಡಲಾಗಿದೆ. ಇದನ್ನು ತ್ರಿಚಕ್ರ ವಾಹನದ ದೇಹಕ್ಕೆ ಹೊಂದುವಂತೆ ವಿನ್ಯಾಸ ಮಾಡಲಾಗಿದೆ. ಮುಂಭಾಗದ ಚಕ್ರಕ್ಕೆ ಡಿಸ್ಕ್‌ ಬ್ರೇಕ್ ಹಾಗೂ ಹಿಂಭಾಗಕ್ಕೆ ಡ್ರಂ ಬ್ರೇಕ್ ಅಳವಡಿಸಲಾಗಿದೆ.

ಸರ್ಜ್ ಎಸ್‌32

3.87 ಕಿಲೋ ವ್ಯಾಟ್‌ ಬ್ಯಾಟರಿ ಪ್ಯಾಕ್ ಇದರದ್ದು. 6 ಕಿಲೋವ್ಯಾಟ್ ಶಕ್ತಿ ಉತ್ಪತ್ತಿ ಮಾಡಬಹುದಾದ ಈ ಸ್ಕೂಟರ್‌ ಪ್ರತಿ ಗಂಟೆಗೆ 60 ಕಿ.ಮೀ. ಗರಿಷ್ಠ ವೇಗದಲ್ಲಿ ಸಾಗಲಿದೆ. ಇದರಲ್ಲಿ ಇನ್ನೂ ಮೂರು ಮಾದರಿಗಳನ್ನು ಸರ್ಜ್ ಪರಿಚಯಿಸಿದೆ. ಎಲ್‌ಡಿ, ಎಚ್‌ಡಿ ಮತ್ತು ಎಫ್‌ಬಿ ಎಂಬ ಮಾದರಿಗಳಿವೆ. ಎಸ್‌32 ಪಿವಿ ಎಂಬ ಮಾದರಿಯು 9.675 ಕೆ.ವಿ. ಬ್ಯಾಟರಿ ಪ್ಯಾಕ್‌ ಹೊಂದಿದೆ. ಇದು ಗರಿಷ್ಠ 8 ಕಿಲೋ ವ್ಯಾಟ್ ಶಕ್ತಿ ಉತ್ಪತ್ತಿ ಮಾಡಲಿದೆ. ಎಲ್‌ಡಿ, ಎಚ್‌ಡಿ ಹಾಗೂ ಎಫ್‌ಬಿ ಇವುಗಳಿಗಿಂತ ಸ್ವಲ್ಪ ದೊಡ್ಡದು. ಇದು 11.617 ಕೆ.ವಿ. ಬ್ಯಾಟರಿ ಪ್ಯಾಕ್ ಹೊಂದಿದೆ. ಇದು 10 ಕೆ.ವಿ. ಶಕ್ತಿ ಉತ್ಪಾದಿಸುತ್ತದೆ.

ಹಾಗಿದ್ದರೆ ಇದನ್ನು ಚಾಲನೆ ಮಾಡಲು ತ್ರಿಚಕ್ರ ವಾಹನ ಪರವಾನಗಿ ಅಗತ್ಯವೇ ಎಂಬುದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ