Honda, Nissan & Mitsubishi: ಜಗತ್ತಿನ ದೊಡ್ಡ ಸಮೂಹವಾಗುವತ್ತ ಜಪಾನ್‌ನ ಈ ಮೂರು ಕಂಪನಿಗಳು

Nissan, Honda, Mitsubishi

ವಾಹನಗಳ ತಯಾರಿಕೆಯಲ್ಲಿನ ತಮ್ಮ ವಿಭಿನ್ನತೆ, ಬದ್ಧತೆ ಹಾಗೂ ತಂತ್ರಜ್ಞಾನಗಳ ಮೂಲಕವೇ ಜಗತ್ತಿನ ಗಮನ ಸೆಳೆದಿದ್ದ ಜಪಾನ್‌ ಹೋಂಡಾ, ನಿಸ್ಸಾನ್ ಹಾಗೂ ಮಿಟ್ಸುಬಿಷಿ ಕಂಪನಿಗಳು ಜತೆಗೂಡಿ ಕೆಲಸ ಮಾಡಲು ನಿರ್ಧರಿಸಿವೆ.

ಈ ಮೂರು ಕಂಪನಿಗಳು ಈ ಕುರಿತು ಪರಸ್ಪರ ಮಾತುಕತೆ ನಡೆಸಿದ್ದು, ಮುಂದಿನ ಒಂದು ವರ್ಷದಲ್ಲಿ ಜತೆಗೂಡಿ ಯೋಜನೆ, ವಾಹನ ತಯಾರಿಕೆ ಹಾಗೂ ಹೊಸ ತಂತ್ರಜ್ಞಾನದ ಅಳವಡಿಕೆಗೆ ಸಿದ್ಧತೆ ನಡೆಸಿವೆ. ಈ ಒಪ್ಪಂದದ ಮೂಲಕ ಹೋಂಡಾ, ನಿಸ್ಸಾನ್ ಹಾಗೂ ಮಿಟ್ಸುಬಿಷಿ ಕಂಪನಿಗಳ ಸಮೂಹವು, ಜಗತ್ತಿನ ಅತ್ಯಂತ ದೊಡ್ಡ ಸಮೂಹ ಕಂಪನಿಯಾಗಲಿದೆ.

ಸದ್ಯ, ವಿದ್ಯುತ್ ಚಾಲಿತ ವಾಹನಗಳ ಬೇಡಿಕೆ ಇದ್ದರೂ, ಹೈಬ್ರೀಡ್‌ ಹಾಗೂ ಜಲಜನಕ ಚಾಲಿತ ವಾಹನಗಳತ್ತ ಈಗಾಗಲೇ ಇಡೀ ಜಗತ್ತು ತನ್ನ ಚಿತ್ತ ಹರಿಸಿದೆ. ಈ ನಿಟ್ಟಿನಲ್ಲಿ ಈ ಮೂರೂ ಕಂಪನಿಗಳು ಜತೆಗೂಡಿ ಕಾರ್ಯ ನಿರ್ವಹಿಸುವ ಸಾಧ್ಯತೆಗಳಿವೆ.

ಹೊಂಡಾ ಕಂಪನಿಯು ನಗರ ಸಾರಿಗೆಗೆ ಅನುಕೂಲವಾಗುವಂತ ಸಣ್ಣ ಹಾಗೂ ಮಧ್ಯಮ ಗಾತ್ರದ ಕಾರುಗಳ ತಯಾರಿಕೆಯಲ್ಲಿ ಸಿದ್ಧಹಸ್ತವೆನಿಸಿದರೆ, ನಿಸ್ಸಾನ್‌ ತುಸು ದೊಡ್ಡ ಗಾತ್ರದ ಯುಟಿಲಿಟಿ ವಾಹನಗಳ ತಯಾರಿಕೆಯಲ್ಲಿ ಪಳಗಿದ ಕಂಪನಿ. ಮತ್ತೊಂದೆಡೆ ಆಫ್‌ ರೋಡ್‌ ಕಾರುಗಳನ್ನು ಸಿದ್ಧಪಡಿಸುವಲ್ಲಿ ಮಿಟ್ಸಿಬಿಷಿ ಎತ್ತಿದ ಕೈ. ಈ ಮೂರೂ ಕಂಪನಿಗಳು ಏನು ಮೋಡಿ ಮಾಡಲಿವೆಯೋ ಎಂಬ ಲೆಕ್ಕಾಚಾರದಲ್ಲಿ ಈಗ ವಾಹನ ಲೋಕ ಕಣ್ಣಿಟ್ಟಿವೆ.

ಜಪಾನ್‌ 2ನೇ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಹೋಂಡಾ ಕಾರ್ಸ್‌ ಹಾಗೂ ನಿಸ್ಸಾನ್ ಮೋಟಾರ್ಸ್ ಕಂಪನಿಗಳು ಜತೆಗೂಡಿ ಕೆಲಸ ಮಾಡಲು ಈ ಹಿಂದೆಯೇ ನಿರ್ಧರಿಸಿದ್ದವು. ಅದರ ಭಾಗವಾಗಿ 2025ರ ಜೂನ್‌ನಿಂದ ಈ ಕಂಪನಿಗಳ ಜಂಟಿ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಜಾಗತಿಕ ಮಾರುಕಟ್ಟೆ ಕುರಿತಂತೆ ಉಭಯ ಕಂಪನಿಗಳ ಅಧಿಕಾರಿಗಳು ಈಗಾಗಲೇ ಮಾತುಕತೆ ಹಾಗೂ ಚರ್ಚೆಗಳನ್ನು ಆರಂಭಿಸಿದ್ದಾರೆ. ಈ ಕಂಪನಿಗಳು ಮಿಟ್ಸುಬಿಷಿ ಜತೆಗೂಡಲಿವೆ. ಈಗಾಗಲೇ ರಿನೊ ಮತ್ತು ನಿಸ್ಸಾನ್‌ ನಡುವೆ ಒಡಂಬಡಿಕೆ ಇದ್ದೇ ಇದೆ.

ಜಾಗತಿಕ ಮಟ್ಟದಲ್ಲಿ ಈವರೆಗಿನ ಪ್ರಮುಖ ಪಾಲುದಾರಿಕೆಗಳು

  • 1998ರ ಮೇ 7ರಂದು ಕ್ರಿಸ್ಲರ್‌ ಕಾರ್ಪೊರೇಷನ್‌ ಅನ್ನು ಮರ್ಸಿಡೀಸ್‌–ಬೆಂಜ್‌ ಸಮೂಹವು 43.07 ಶತಕೊಟಿ ಡಾಲರ್‌ಗೆ ಖರೀದಿಸಿತು
  • 2024ರ ಡಿಸೆಂಬರ್‌ 23ರಂದು ನಿಸ್ಸಾನ್ ಮೋಟಾರ್ ಕಂಪನಿಯನ್ನು ಹೋಂಡಾ ಮೋಟಾರ್‌ ಕಂಪನಿಯನ್ನು 38.77 ಶತಕೊಟಿ ಡಾಲರ್‌ಗೆ ಖರೀದಿಸಿತು
  • 2012ರ ಜುಲೈ 4ರಂದು ಡಾ ಇಂಗ್‌ ಹಕ್‌ ಎಫ್‌ ಪೋಷೆ ಎಜಿ ಅನ್ನು ಫೋಕ್ಸ್‌ವ್ಯಾಗನ್‌ ಎಜಿ ಕಂಪನಿಯು 8.73 ಶತಕೋಟಿ ಡಾಲರ್‌ಗೆ ಖರೀದಿಸಿತು
  • 2019ರ ಡಿಸೆಂಬರ್ 18ರಂದು ಪ್ಯೂಗೊ ಕಂಪನಿಯನ್ನು ಸ್ಟೆಲ್ಲಂಟಿಸ್‌ ಕಂಪನಿಯು 6.52 ಶತಕೋಟಿ ಡಾಲರ್‌ಗೆ ಖರೀದಿಸಿತು
  • 2021ರ ಫೆಬ್ರುವರಿ 22ರಂದು ಲ್ಯೂಸಿಡ್‌ ಮೋಟಾರ್ಸ್‌ ಕಂಪನಿಯನ್ನು ಲ್ಯೂಸಿಡ್‌ ಸಮೂಹವು 4.57 ಶತಕೋಟಿ ಡಾಲರ್‌ಗೆ ಖರೀದಿಸಿತು
  • 2014ರ ಜನವರಿ 1ರಂದು ಎಫ್‌ಸಿಎ ಯುಎಸ್‌ ಕಂಪನಿಯನ್ನು ಫಿಯಟ್‌ ಎಸ್‌ಪಿಎ ಕಂಪನಿಯು 4.35 ಶತಕೊಟಿ ಡಾಲರ್‌ಗೆ ಖರೀದಿಸಿತು
  • 2020ರ ಡಿಸೆಂಬರ್‌ 7ರಂದು ಅಪ್ಪಾರ್ಟ್‌ ಯುಎಸ್‌ಎ ಕಂಪನಿಯನ್ನು ಔರೋರಾ ಇನ್ನೋವೇಷನ್ ಕಂಪನಿಯು 4 ಶತಕೋಟಿ ಸಾಲರ್‌ಗೆ ಖರೀದಿಸಿತು
  • 2010ರ ಜುಲೈ 22ರಂದು ಜನರಲ್‌ ಮೋಟಾರ್ಸ್‌ ಫೈನಾನ್ಶಿಯಲ್ ಕಂಪನಿಯನ್ನು ಜನರಲ್ ಮೋಟಾರ್ಸ್ ಕಂಪನಿಯು 3.30 ಶತಕೋಟಿ ಡಾಲರ್‌ಗೆ ಖರೀದಿಸಿತು
  • 2016ರ ಜನವರಿ 29ರಂದು ಡೈಹಾಟ್ಸು ಮೋಟಾರ್ಸ್ ಅನ್ನು ಟೊಯೊಟಾ ಮೋಟಾರ್ ಕಂಪನಿಯು 3.09 ಶತಕೊಟಿ ಡಾಲರ್‌ಗೆ ಖರೀದಿಸಿತು
  • 1998ರ ಅಕ್ಟೋಬರ್‌ 19ರಂದು ಕಿಯಾ ಕಂಪನಿಯನ್ನು ಹ್ಯುಂಡೇ ಮೋಟಾರ್‌ ಕಂಪನಿಯು 2.92 ಶತಕೊಟಿ ಡಾಲರ್‌ಗೆ ಖರೀದಿಸಿತು
Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ