ಐದೇ ನಿಮಿಷದಲ್ಲಿ ಚಾರ್ಜ್; 900 ಕಿ.ಮೀ. ಚಲಿಸುವ ಹೈಡ್ರೋಜೆನ್ ಕಾರು ಬಿಡುಗಡೆ ಮಾಡಿದ Hyundai

Hyundai Nexo

ಆಸ್ಪ್ರೇಲಿಯಾದಲ್ಲಿ ಮೊದಲ ಹೈಡ್ರೊಜೆನ್ ಕಾರು ಮಾರುಕಟ್ಟೆಗೆ ಕಾಲಿಟ್ಟಿದೆ. ಬರೀ ಕಾರು ಮಾತ್ರವಲ್ಲ, ಇದಕ್ಕಾಗಿ ಚಾರ್ಜಿಂಗ್ ಸ್ಟೇಷನ್‌ ಕೂಡಾ ಸಿದ್ಧವಾಗಿದೆ. 

ಕೇವಲ ಐದು ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುವ ಈ ಜಲಜನಕ ಚಾಲಿತ ಕಾರು ಬರೋಬ್ಬರಿ 900 ಕಿ.ಮೀ. ದೂರ ಕ್ರಮಿಸಲಿದೆ. ಇಷ್ಟು ಮಾತ್ರವಲ್ಲ, ಕಾರು ಚಾಲನೆಗೊಳ್ಳುತ್ತಲೇ ವಾತಾವರಣದ ಗಾಳಿಯನ್ನು ಶುದ್ಧಗೊಳಿಸುತ್ತಾ ಸಾಗುತ್ತದೆ.

ಇದೇ ಮೊದಲ ಬಾರಿಗೆ ವಾಣಿಜ್ಯ ಬಳಕೆಗೆ ಜನಜನಕ ಬಳಕೆಯ ಫ್ಯೂಯಲ್ ಸೆಲ್ ಇರುವ ತಂತ್ರಜ್ಞಾನ ಆಧಾರಿತ ಕಾರು ಆಸ್ಟ್ರೇಲಿಯಾದಲ್ಲಿ ರಸ್ತೆಗಿಳಿದಿದೆ. ಆಟೊಮೊಬೈಲ್ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಯೇ ಆಗಿದ್ದು, ಚಾರ್ಜಿಂಗ್ ಸಮಯವನ್ನು ಸಾಕಷ್ಟು ಕಡಿಮೆಗೊಳಿಸಿದೆ.

ಹಾಗಿದ್ದರೆ ಈ ಜಲಜನಕ ಆಧಾರಿತ ಕಾರು ಬಿಡುಗಡೆ ಮಾಡಿದ ಕಂಪನಿ ಯಾವುದು ಎಂಬ ಕುತೂಹಲ ಮೂಡುವುದು ಸಹಜ. ದಕ್ಷಿಣ ಕೊರಿಯಾ ಮೂಲಕ Hyunda ತನ್ನ ಹೊಸ ಮಾದರಿಯ Nexoದಲ್ಲಿ ಈ ಪ್ರಯೋಗ ನಡೆಸಿದೆ. ಸಣ್ಣ ಸಿಲಿಂಡರ್‌ನ ಈ ಕಾರಿನಲ್ಲಿ 6.27 ಕೆ.ಜಿ.ಯಷ್ಟು ಜಲಜನಕ ಹಿಡಿಸುತ್ತದೆ. ಇದರಿಂದ 4,49,100 ಲೀಟರ್‌ ಗಾಳಿ ಶುದ್ಧವಾಗುತ್ತದೆ. ಇದರ ಪ್ರಮಾಣ ಎಷ್ಟೆಂದರೆ 33 ಜನರು ದಿನವಿಡೀ ಉಸಿರಾಡುವಷ್ಟು ಗಾಳಿ ಶುದ್ಧವಾಗುತ್ತದೆ. ಇಂಧನ ದಹಿಸುವ ವಾಹನಗಳಂತೆ ಇದು ಹೊಗೆ ಉಗುಳುವುದಿಲ್ಲ. ಬದಲಿಗೆ ಕೊಳವೆ ಮೂಲಕ ನೀರು ಹೊರಸೂಸುತ್ತದೆ.

ಇದೀಗ ಬ್ಯಾಟರಿ ಚಾಲಿತ ಕಾರುಗಳು ಅಬ್ಬರಿಸುವ ಕಾಲಘಟ್ಟದಲ್ಲಿ, ಜಲಜನಕ ಆಧಾರಿತ ಕಾರು ಸದ್ದು ಮಾಡಲಾರಂಭಿಸಿದೆ. ಸುಸ್ಥಿರ ಜಗತ್ತಿಗೆ ಹಾಗೂ ಶುದ್ಧ ಪರಿಸರ ಬೇಡುವ ಪ್ರಪಂಚಕ್ಕೆ ಇದರ ಅಗತ್ಯ ತೀರಾ ಇದೆ. ಈ ಯಶಸ್ವಿ ಪ್ರಯತ್ನದ ಮೂಲಕ ಹ್ಯುಂಡೇ ಕಂಪನಿ ಜಗತ್ತಿನ ಮೊದಲ ಜಲಜನಕ ಆಧಾರಿತ ಕಾರನ್ನು ಬಿಡುಗಡೆ ಮಾಡಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಆದರೆ ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ. 1966ರಲ್ಲಿ ಷವರ್ಲೆ ಕಂಪನಿಯು ಎಲೆಕ್ಟ್ರೊವ್ಯಾನ್‌ ಎಂಬ ಹೆಸರಿನಡಿ ಮೊದಲ ಹೈಡ್ರೊಜೆನ್ ಸೆಲ್ ಇರುವ ಕಾರನ್ನು ಪರಿಚಯಿಸಿತ್ತು ಎಂಬ ಮಾಹಿತಿಯೂ ಇದೆ. ಆದರೆ ಅದು ಮುಂದೇನಾಯಿತು? ಆ ತಂತ್ರಜ್ಞಾನ ಅಭಿವೃದ್ಧಿ ಏಕೆ ಹೊಂದಲಿಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ.

ಜಲಜನಕ ಆಧಾರಿತ ಎಂಜಿನ್‌ ಅಭಿವೃದ್ಧಿಪಡಿಸಿದ ಟೊಯೊಟಾ 2014ರಲ್ಲಿ ಮಿರಾಯಿ ಎಂಬ ವಿಲಾಸಿ ಸೆಡಾನ್ ಅನ್ನು ಪರಿಚಯಿಸಿತು. 650 ಕಿ.ಮೀ. ದೂರ ಕ್ರಮಿಸುವ ರೇಂಜ್‌ ಇದರದ್ದಾಗಿದ್ದು, ಜಲಜನ ಬಳಸಿ, ನೀರಿನ ಆವಿ ಮತ್ತು ಆಮ್ಲಜನಕವನ್ನು ಇದು ಹೊರಸೂಸುತ್ತಿತ್ತು. ಹೀಗಾಗಿ ಪರಿಸರಕ್ಕೆ ಯಾವುದೇ ಹಾನಿಕಾರಕ ಅನಿಲ ಹೊರಸೂಸದ ಇದು, ಇಡೀ ಜಗತ್ತಿನ ಹುಬ್ಬೇರಿಸಿತ್ತು. ಆದರೆ, ಇದು ಜಗತ್ತಿನ ಇತರ ಭಾಗಗಳಲ್ಲಿ ಏಕೆ ಪ್ರಚಲಿತಕ್ಕೆ ಬರಲಿಲ್ಲ ಎಂಬುದು ನಿಗೂಢವಾಗಿದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ