ದೇಶೀಯ ಪ್ರಯಾಣಿಕ ವಾಹನ ವಾರ್ಷಿಕ ಮಾರಾಟವು ಮುಂದಿನ ಕೆಲವೇ ವರ್ಷಗಳಲ್ಲಿ 50 ಲಕ್ಷದ ಗಡಿ ದಾಟುವ ನಿರೀಕ್ಷೆಯಿದೆ. ಟಾಟಾ ಮೋಟರ್ಸ್ ಈ ಬೆಳವಣಿಗೆಯ ಅವಕಾಶವನ್ನು ಬಳಸಿಕೊಳ್ಳಲು ಸಜ್ಜಾಗಿದೆ ಎಂದು ಟಾಟಾ ಸಮೂಹದ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿದ್ದಾರೆ.
ಕಳೆದ ವರ್ಷ 41 ಲಕ್ಷ ವಾಹನಗಳು ಮಾರಾಟವಾಗಿ ದ್ದವು. ಪ್ರತಿ ಒಂದು ಸಾವಿರ ಜನಸಂಖ್ಯೆಗೆ ಭಾರತದಲ್ಲಿ ಸುಮಾರು 30 ವಾಹನಗಳಿವೆ. ಆದರೆ ಇದು ಜಾಗತಿಕ ಸರಾಸರಿಗೆ ಹೋಲಿಸಿದರೆ ಕಡಿಮೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಲಿದೆ ಎಂದು 2023-24ರ ವಾರ್ಷಿಕ ವರದಿಯಲ್ಲಿ ಕಂಪನಿಯ ಷೇರುದಾರರಿಗೆ ನೀಡಿದ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.
ಮುಂದಿನ ಹಂತಗಳಲ್ಲಿ ವರಮಾನ ಹೆಚ್ಚಳ, ನಗದು ಹರಿವು ಹೆಚ್ಚಳ, ತಂತ್ರಜ್ಞಾನ ಸುಧಾರಣೆ ಮತ್ತು ಬ್ರ್ಯಾಂಡ್ ನಾಯಕತ್ವ ವಿಸ್ತರಣೆಯ ಕಡೆಗೆ ಗಮನ ಹರಿಸಲಾಗುವುದು ಎಂದು ಅವರು ಹೇಳಿದ್ದಾರೆ. ವಾಹನ ಮಾರಾಟದ ಹೊರತಾಗಿ, ವ್ಯಾಪಾರವು ವಾಹನದ ಬಿಡಿಭಾಗಗಳು, ಡಿಜಿಟಲ್ ಮತ್ತು ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದರು.
ಕಂಪನಿಯ ಪ್ರಯಾಣಿಕ ವಾಹನ ಮಾರಾಟವು 2023–2024ರ ಹಣಕಾಸು ವರ್ಷದಲ್ಲಿ ₹52,353 ಕೋಟಿ ವರಮಾನ ಗಳಿಸಿದೆ. ಇದು 2022–23ರ ಇದೇ ಅವಧಿಗಿಂತ ಶೇ 9.4ರಷ್ಟು ಹೆಚ್ಚಳವಾಗಿದೆ ಎಂದು ಚಂದ್ರಶೇಖರನ್ ಹೇಳಿದ್ದಾರೆ.