ಬೆಂಗಳೂರು: ಬಹುನಿರೀಕ್ಷಿತ ನಿಂಜಾ 500 ಸೂಪರ್ ಬೈಕ್ ಅನ್ನು ಕವಾಸಕಿ ಕಂಪನಿಯು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಎಕ್ಸ್ ಶೋರೂಂ ಬೆಲೆ ₹5.24ರಷ್ಟಿರುವ ಈ ಬೈಕ್‌ನ ಬಿಡುಗಡೆಗಾಗಿ ಬೈಕ್ ಪ್ರಿಯರು ಹಲವು ಸಮಯಗಳಿಂದ ಕಾದಿದ್ದರು. ಈ ಬಾರಿ ಮತ್ತೊಂದು ಅಚ್ಚರಿ ನೀಡಿರುವ ಕವಾಸಕಿ, ನಿಂಜಾ 400ರ ಬೆಲೆಯಲ್ಲೇ ನಿಂಜಾ 500 ಬೈಕ್ ಲಭ್ಯ. ಬೆಲೆಯಲ್ಲಿ ಯಾವುದೇ ಹೆಚ್ಚು ಮಾಡದಿರುವುದೂ ಕವಾಸಕಿ ಪ್ರಿಯರ ಸಂತಸಕ್ಕೆ ಕಾರಣವಾಗಿದೆ.
ಬೈಕ್‌ನ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ದೇಶವ್ಯಾಪಿ ಇರುವ ಕವಾಸಕಿ ಶೋರೂಂಗಳಲ್ಲಿ ನಿಂಜಾ 500 ಕಾಯ್ದಿರಿಸಬಹುದು. ಬೈಕ್‌ಗಳ ಡೆಲಿವರಿ ಫೆಬ್ರುವರಿ ತಿಂಗಳಾಂತ್ಯದಿಂದ ಆರಂಭವಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ನಿಂಜಾ 400ಕ್ಕೆ ಸದ್ಯ ₹40 ಸಾವಿರ ರಿಯಾಯಿತಿ ಘೋಷಿಸಲಾಗಿದೆ. ಆದರೆ ನಿಂಜಾ 500 ತನ್ನ ಸೋದರ ಆವೃತ್ತಿಯ ಜನಪ್ರಿಯತೆಯನ್ನೂ ಮೀರಿಸುವಂತಿದೆ ಎಂದೆನ್ನಲಾಗಿದೆ.
ನಿಂಜಾ 500ರ ಸಾಮರ್ಥ್ಯ
451 ಸಿ.ಸಿ. ಲಿಕ್ವಿಡ್ ಕೂಲ್ಡ್ ಅವಳಿ ಎಂಜಿನ್ ಹೊಂದಿರುವ ನಿಂಜಾ 500, 45 ಅಶ್ವ ಶಕ್ತಿಯನ್ನು 9 ಸಾವಿರ ಆರ್‌ಪಿಎಂನಲ್ಲಿ ಉತ್ಪಾದಿಸಲಿದೆ. 42.6 ನ್ಯೂಟನ್ ಮೀಟರ್‌ನಷ್ಟು ಶಕ್ತಿಯನ್ನು 6 ಸಾವಿರ ಆರ್‌ಪಿಎಂನಲ್ಲಿ ಉತ್ಪಾದಿಸಲಿದೆ. ಇದೇ ತಂತ್ರಜ್ಞಾನವನ್ನು ಈಗಾಗಲೇ ಕವಾಸಕಿಯ ಎಲಿಮಿನೇಟರ್ 500 ಕ್ರೂಸರ್‌ನಲ್ಲಿ ಹಾಗೂ ನಿಂಜಾ 7 ಹೈಬ್ರಿಡ್ ಬೈಕ್‌ನಲ್ಲಿ ಬಳಸಲಾಗಿದೆ.
ಬೈಕ್‌ನ ಒಟ್ಟು ತೂಕ 171 ಕೆ.ಜಿ. ಇದೆ. ಇದು ನಿಂಜಾ 400 ಹಾಗೂ ಯಮಹಾ ಆರ್3, ಕೆಟಿಎಂ ಆರ್‌ಸಿ 390ಕ್ಕೆ ಹೋಲಿಸಿದರೆ ತುಸು ಭಾರ. ಆದರೆ ಏಪ್ರಿಲಾ ಆರ್‌ಎಸ್ 457ಗಿಂತ ತುಸು ಭಾರ ಕಡಿಮೆ. ನಿಂಜಾ 400ರಲ್ಲಿ ಬಳಸಿರುವ ಬಿಡಿಭಾಗಗಳನ್ನೇ ಇದರಲ್ಲೂ ಬಳಸಲಾಗಿದೆ. ಜತೆಗೆ ಡ್ಯುಯಲ್ ಚಾನಲ್ ಎಬಿಎಸ್ ಇದ್ದು ಸವಾರರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
ನಿಂಜಾ 500ರ ಮತ್ತೊಂದು ವಿಶೇಷವೆಂದರೆ, ಎತ್ತರದ ಆಸನ ಬೇಕೆನ್ನುವ ಸವಾರರಿಗೆ ಇಲ್ಲೊಂದು ಅವಕಾಶವಿದೆ. ಸೀಟ್ ಅನ್ನು 815 ಮಿ.ಮೀ.ನಷ್ಟು ಎತ್ತರಿಸುವ ಅವಕಾಶ ನೀಡಲಾಗಿದೆ.
ನೋಡಲು ಆಧುನಿಕ ಕವಾಸಕಿ ಸ್ಪೋರ್ಟ್ಸ್ ಬೈಕ್‌ನಂತೆ ಕಾಣಿಸುತ್ತದೆ. ZX-6R ಹಾಗೂ ನಿಂಜಾ 7 ಹೈಬ್ರಿಡ್‌ನಂತೆಯೂ ಕಾಣಿಸುತ್ತದೆ. ಬೈಕ್ ಸ್ಟಾರ್ಟ್ ಮಾಡಲು ಕೀ ಅವಶ್ಯಕತೆ ಇಲ್ಲ. ಬ್ಲೂಟೂತ್ ಸಂಪರ್ಕ ಸೌಲಭ್ಯವಿದೆ. ಸಂಪೂರ್ಣ ಕಪ್ಪು ಬಣ್ಣ ಇದರ ನೋಟ.
ದುಬಾರಿ ಎನಿಸಿದರೂ ನಿಂಜಾ 500 ಬೈಕ್ ಸ್ಪರ್ಧೆ ತುಸು ಹೆಚ್ಚೇ ಇದೆ. ಯಮಹಾ ಆರ್3, ಏಪ್ರಿಲಿಯಾ ಆರ್‌ಎಸ್ 457 ಹಾಗೂ ಕೆಟಿಎಂ ಆರ್‌ಸಿ 390 ಕೂಡಾ ನಿಂಜಾ 500ಕ್ಕೆ ತೀವ್ರ ಸ್ಪರ್ಧೆ ಒಡ್ಡುತ್ತಿದೆ.