ಇಟಲಿಯ ಕಾರು ತಯಾರಿಕಾ ಕಂಪನಿ ಲ್ಯಾಂಬೊರ್ಘಿನಿ, ಗ್ರಾಹಕರ ದೂರುಗಳಿಗೆ ಸ್ಪಂದಿಸದೆ ಅಹಂಕಾರ ತೋರುತ್ತಿದೆ ಎಂದು ರೇಮಂಡ್ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಆಕ್ರೋಶ ತೋರಿದ್ದಾರೆ.
ಈ ತಿಂಗಳ ಆರಂಭದಲ್ಲಿ ಗೌತಮ್ ಅವರು ತಮ್ಮ ಹೊಸ ಲ್ಯಾಂಬೊರ್ಘಿನಿ ರೆವಲ್ಟೊವನ್ನು ಚಲಾಯಿಸಿಕೊಂಡು ಹೋದಾಗ ಕಾರು ತಾಂತ್ರಿಕ ದೋಷದಿಂದಾಗಿ ಮುಂಬೈನ ಟ್ರಾನ್ಸ್ ಹಾರ್ಬರ್ ಲಿಂಕ್ ಬಳಿ ಕೆಟ್ಟು ನಿಂತಿತು. ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಈ ಬಗ್ಗೆ ಕಂಪನಿ ಪ್ರತಿಕ್ರಿಯಿಸಲಿಲ್ಲ ಎಂದಿರುವ ಅವರು, ಮತ್ತೊಂದು ಪೋಸ್ಟ್ ಹಂಚಿಕೊಂಡು ‘ಲ್ಯಾಂಬೊರ್ಘಿನಿಯ ಭಾರತದ ಮುಖ್ಯಸ್ಥ ಶರದ್ ಅಗರ್ವಾಲ್ ಮತ್ತು ಏಷ್ಯಾ ಮುಖ್ಯಸ್ಥ ಫ್ರಾನ್ಸೆಸ್ಕೊ ಸ್ಕಾರ್ಡಾವೊನಿ ಅವರ ದುರಹಂಕಾರದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಗ್ರಾಹಕರ ಸಮಸ್ಯೆಗಳೇನು ಎಂಬುದನ್ನು ಪರಿಶೀಲಿಸಲು ಯಾರೂ ಸಂಪರ್ಕಿಸಲಿಲ್ಲ. ಭಾರತದ ಮುಖ್ಯಸ್ಥ ಶರದ್ ಅವರು ಕೂಡ ನಿಷ್ಠಾವಂತ ಗ್ರಾಹಕರಿಗೆ ಕನಿಷ್ಠ ಪಕ್ಷ ದೂರವಾಣಿ ಕರೆ ಮಾಡಿ ವಿಚಾರಿಸದಿರುವುದು ಆಘಾತಕಾರಿಯಾಗಿದೆ’ ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
‘ಇದು ಹೊಚ್ಚಹೊಸ ಕಾರು. ಖರೀದಿಸಿದ 15 ದಿನಗಳಲ್ಲೇ ಸಮಸ್ಯೆ ಎದುರಾಗಿದೆ. ಈ ರೀತಿ ಇನ್ನೂ ಎರಡು ಕಾರುಗಳಲ್ಲಿ ದೋಷ ಉಂಟಾಗಿರುವ ಬಗ್ಗೆ ಕೇಳಿದ್ದೇನೆ. ಹೀಗಿದ್ದರೂ ಈ ಕಾರುಗಳು ವಿಶ್ವಾಸಾರ್ಹವೇ’ ಎಂದು ಕೇಳಿದ್ದರು.
ಭಾರತದಲ್ಲಿ ಲ್ಯಾಂಬೊರ್ಘಿನಿ ರೆವಲ್ಟೊ ಬೆಲೆ ಅಂದಾಜು ₹8.89 ಕೋಟಿ ಇದೆ.