MG Windsor: ₹9.99 ಲಕ್ಷ; ಅನಿಯಮಿತ ಅವಧಿಗೆ ಬ್ಯಾಟರಿ ಗ್ಯಾರಂಟಿ ಭರವಸೆ

MG Windsor

ಮೋರಿಸ್ ಗ್ಯಾರೇಜಸ್‌ (ಎಂ.ಜಿ) ಹಾಗೂ ಜೆಎಸ್ಡಬ್ಲ್ಯೂ ಕಂಪನಿಗಳು ಜತೆಗೂಡಿ ಅಭಿವೃದ್ಧಿಪಡಿಸಲಾದ ಬ್ಯಾಟರಿ ಚಾಲಿತ ವಿಂಡ್ಸರ್‌ ಎಂಬ ಕ್ರಾಸ್‌ಓವರ್ ಯುಟಿಲಿಟಿ ವೆಹಿಕಲ್ (ಸಿಯುವಿ) ಕಾರು ಭಾರತದ ಮಾರುಕಟ್ಟೆಗೆ ಧಾಂಗುಡಿ ಇಟ್ಟಿದೆ.

ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನ ಐಷಾರಾಮಿ ಸೌಕರ್ಯವನ್ನು ನೀಡುವ ಭರವಸೆ ನೀಡಿರುವ ಕಂಪನಿಯು, ಅನಿಯಮಿತ ಬಳಕೆಯ ವಾರೆಂಟಿಯೊಂದಿಗೆ ಹಾಗೂ ಶೇ 60ರ ಬೆಲೆಯಲ್ಲಿ ಮರಳಿ ಖರೀದಿಸುವ ಭರವಸೆಯೊಂದಿಗೆ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

38 ಕಿಲೋ ವ್ಯಾಟ್‌ನ ಬ್ಯಾಟರಿಯು ಒಮ್ಮೆ ಗರಿಷ್ಠ ಚಾರ್ಜ್‌ಗೆ 331 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. 136 ಅಶ್ವ ಶಕ್ತಿ ಹಾಗೂ 200 ನ್ಯೂಟನ್ ಮೀಟರ್ ಶಕ್ತಿಯನ್ನು ಇದು ಉತ್ಪಾದಿಸಬಲ್ಲದು. 167.7 ಸೆಂ.ಮೀ., ಎತ್ತರ, 180 ಸೆಂ.ಮೀ. ಅಗಲ ಹಾಗೂ ಗಾಲಿಗಳ ನಡುವಿನ ಅಂತರ 270 ಸೆಂ.ಮೀ. ಇದೆ. ಹಿಂಬದಿಯ ಆಸನ 135 ಡಿಗ್ರಿಯಷ್ಟು ಬಾಗುವ ಸೌಕರ್ಯವಿದ್ದು, ಸಹ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕೆ ಒತ್ತು ನೀಡಲಾಗಿದೆ.

ಇನ್ಫಿನಿಟಿ ಕಂಪನಿಯ 9 ಸ್ಪೀಕರ್‌ ಹಾಗೂ ಬೃಹತ್ ಇನ್ಫೊಟೈನ್ಮೆಂಟ್‌ ಸಿಸ್ಟಂ ನೀಡಲಾಗಿದೆ. ಪ್ರಯಾಣಿಕರ ಅಪೇಕ್ಷೆಗೆ ತಕ್ಕಂತೆ ಒಳಾಂಗಣ ವಿನ್ಯಾಸದ ದೀಪಗಳು 256 ಬಗೆಯ ಬಣ್ಣಗಳಲ್ಲಿ ಬದಲಿಸಲು ಅವಕಾಶವಿದೆ. ಬೃಹತ್ ಸನ್‌ರೂಫ್‌, 18 ಇಂಚಿನ ಟೈರ್‌ಗಳು ಇದರದ್ದು.

ನೋಡಲು ಪೆಂಗ್ವಿನ್‌ ರೂಪದಲ್ಲಿರುವ ಈ ಕಾರು 3 ಶ್ರೇಣಿಗಳಲ್ಲಿ ಹಾಗೂ 4 ಬಣ್ಣಗಳಲ್ಲಿ ಲಭ್ಯ. ಆರಂಭಿಕ ಬೆಲೆಯಾಗಿ ₹9.9 ಲಕ್ಷ ಹಾಗೂ ಪ್ರತಿ ಕಿ.ಮೀ.ಗೆ ₹3.5ರಂತೆ ಬ್ಯಾಟರಿ ಬಾಡಿಗೆಯೊಂದಿಗೆ ಕಾರನ್ನು ಖರೀದಿಸಬಹುದು ಎಂದು ಎಂಜಿ ಮೋಟಾರ್ಸ್ ನ ಮುಖ್ಯ ವಾಣಿಜ್ಯ ಅಧಿಕಾರಿ ಸತೀಂದರ್ ಸಿಂಗ್ ಬಾಜ್ವಾ ತಿಳಿಸಿದರು.
‘ವಿಂಡ್ಸರ್ ಕ್ಯಾಸೆಲ್‌ ಎಂಬ ಅರಮನೆಯ ಕಲಾ ಶ್ರೀಮಂತಿಕೆಯಿಂದ ಪ್ರೇರಣೆಗೊಂಡು ಈ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಕಾರಿನಲ್ಲಿ ಚಾಲಕ ಹಾಗೂ ಪ್ರಯಾಣಿಕರ ಆರಾಮ ಮತ್ತು ಸುರಕ್ಷತೆಗೆ ಗರಿಷ್ಠ ಒತ್ತು ನೀಡಲಾಗಿದೆ. ದಹಿಸುವ ಎಂಜಿನ್‌ ನಿರ್ವಹಣೆಗಿಂತಲೂ ಕಡಿಮೆ ವೆಚ್ಚದಲ್ಲಿ ವಿಂಡ್ಸರ್‌ ಹೊಂದಬಹುದು. ಜತೆಗೆ ಮೂರು ವರ್ಷದ ವಾರಂಟಿ ನಂತರ ಮೂಲ ಬೆಲೆಯ ಶೇ 60ರ ದರದಲ್ಲಿ ಮರಳಿ ಖರೀದಿಸುವ ಅವಕಾಶವನ್ನು ಎಂಜಿ ಮೋಟಾರ್ಸ್ ಮಾತ್ರ ನೀಡುತ್ತಿದೆ’ ಎಂದು ತಿಳಿಸಿದರು.

’ಎಂಜಿ ಮೋಟಾರ್ಸ್‌ ವಿಂಡ್ಸರ್ ಕಾರಿನಲ್ಲಿ ಸಂಪರ್ಕ ಹಾಗೂ ಮನರಂಜನೆಗಾಗಿ ಜಿಯೊದೊಂದಿಗೆ ಪಾಲುದಾರಿಕೆ ಹೊಂದಿದೆ. ಇವಿಹಬ್‌, ಇವಿಪಿಡಿಯಾದಂತ ಬಳಕೆದಾರ ಸ್ನೇಹಿ ಆ್ಯಪ್‌ಗಳನ್ನು ಎಂಜಿ ಅಭಿವೃದ್ಧಿಪಡಿಸಿದೆ’ ಎಂದು ತಿಳಿಸಿದರು.

ಎಂಜಿ ವಿಂಡ್ಸರ್‌ ಇವಿ ಕಾರಿನ ಮುಂಗಡ ಬುಕ್ಕಿಂಗ್ ಬಿಡುಗಡೆ ಸಮಯ (ಸೆ. 11)ದಿಂದಲೇ ಆರಂಭವಾಗಿದೆ. ಟೆಸ್ಟ್‌ಡ್ರೈವ್‌ ಸೆ. 25ರಿಂದ ದೇಶದ ಎಲ್ಲಾ ಎಂಜಿ ಮಾರಾಟ ಮಳಿಗೆಗಳಲ್ಲಿ ಲಭ್ಯ. ಟೆಸ್ಟ್‌ ಡ್ರೈವ್‌ ನಂತರದ ಕಾರುಗಳ ಬುಕ್ಕಿಂಗ್‌ ಅಕ್ಟೋಬರ್‌ 3ರ ನಂತರ ಹಾಗೂ ಕಾರುಗಳ ಮಾರಾಟ ಅ. 12ರಿಂದ ಲಭ್ಯ ಎಂದು ತಿಳಿಸಿದ್ದಾರೆ.

ವಿಂಡ್ಸರ್ ಕಾರು ಬಿಡುಗಡೆ ಸಂದರ್ಭದಲ್ಲಿ ಎಂಜಿ ಮೋಟಾರ್ಸ್ ಇಂಡಿಯಾದ ಸಿಇಒ ರಾಜೀವ್ ಛಾಬಾ ಮಾತನಾಡಿದರು. ಜೆ ಎಸ್ ಡಬ್ಲ್ಯೂ ಎಂಜಿ ಮೋಟಾರ್ಸ್ ನ ನಿರ್ದೇಶಕ ಪಾರ್ಥ ಜಿಂದಾಲ್, ಗೌರವ್ ಗುಪ್ತಾ, ಬಿಜು ಬಾಲೇಂದ್ರನ್ ಇದ್ದರು.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ