ಶ್ರಾವಣದಿಂದ ಹೊಸ ಕಾರುಗಳ ಸುಗ್ಗಿ ಆರಂಭ: ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು…?

ಬರಲಿರುವ ಶ್ರಾವಣ ಮಾಸದಿಂದ ಹಬ್ಬಗಳ ಸರಣಿ ಆರಂಭವಾಗಲಿದೆ. ಈ ಸಂದರ್ಭಕ್ಕಾಗಿಯೇ ಪ್ರಮುಖ ಕಂಪನಿಗಳು ತಮ್ಮ ಹೊಸ ಮಾದರಿಯ ಕಾರುಗಳ ಬಿಡುಗಡೆಗೂ ವೇದಿಕೆ ಸಜ್ಜುಗೊಳಿಸಿವೆ. 

ಆಗಸ್ಟ್‌ನಿಂದ ಆರಂಭವಾಗಲಿರುವ ಈ ಸುಗ್ಗಿ ಈ ವರ್ಷಾಂತ್ಯದವರೆಗೂ ಮುಂದುವರಿಯಲಿದೆ. ಇದರಲ್ಲಿ ಟಾಟಾ ಪಂಚ್‌ನಿಂದ ಹಿಡಿದು ಮೆಕ್ಲರ್ನ್‌ವರೆಗೂ ಹೊಸ ತಲೆಮಾರಿನ ಕಾರುಗಳು ಈ ಋತುಮಾನದಲ್ಲಿ ಬಿಡುಗಡೆಯಾಗಲಿದೆ.  ಇವುಗಳಲ್ಲಿ ಪ್ರಮುಖವಾಗಿ…

ಟಾಟಾ ಕರ್ವ್‌

ಕೂಪ್‌ ಮಾದರಿಯ ಕಾರು ಪರಿಚಯಿಸುತ್ತಿರುವ ಟಾಟಾ, ಕರ್ವ್ ಎಂಬ ಕಾರನ್ನು ಪರಿಚಯಿಸುತ್ತಿದೆ. ₹12ಲಕ್ಷದಿಂದ ₹20ಲಕ್ಷ ಬೆಲೆಯೊಳಗಿನ ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯಲ್ಲಿ ಲಭ್ಯ.

ಇವಿ ಮಾದರಿಯ ಕಾರನ್ನೂ ಟಾಟಾ ಕರ್ವ್‌ ಪರಿಚಯಿಸುತ್ತಿದ್ದು, 500 ಕಿ.ಮೀ. ರೇಂಜ್ ಹೊಂದಿದೆ. 1.2ಲೀ ಸಾಮರ್ಥ್ಯದ 3 ಸಿಲಿಂಡರ್‌ನ ಟಿಜೆಡಿಐ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀ ಸಾಮರ್ಥ್ಯದ 4 ಸಿಲಿಂಡರ್‌ ಟಿಜೆಡಿಐ ಪೆಟ್ರೋಲ್ ಎಂಜಿನ್‌ ಮತ್ತು 1.5ಲೀ ನಾಲ್ಕು ಸಿಲಿಂಡರ್‌ಗಳ ಡೀಸೆಲ್‌ ಎಂಜಿನ್‌ ಆಯ್ಕೆಗಳಿವೆ.

7 ಸ್ಪೀಡ್ ಆ್ಯಟೊಮ್ಯಾಟಿಕ್ ಹಾಗೂ ಮ್ಯಾನುಯಲ್ ಗೇರ್‌ ಬಾಕ್ಸ್‌ ಅನ್ನು ಇದು ಹೊಂದಿದೆ. ಒಳಭಾಗದಲ್ಲಿ ಸಂಪೂರ್ಣ ಡಿಜಿಟಲ್ ಕ್ಲಸ್ಟರ್‌, ಸಂಪೂರ್ಣ ಡಿಜಿಟಲ್ ಕ್ಲಸ್ಟರ್, 10.4 ಇಂಚಿನ ಇನ್ಫೊಟೈನ್ಮೆಂಟ್ ಸಿಸ್ಟಂ  ಇರಲಿದೆ; ಇದರೊಂದಿಗೆ 360 ಡಿಗ್ರಿ ಕ್ಯಾಮೆರಾ, ಪ್ಯಾನಾರೊಮಿಕ್ ಸನ್‌ರೂಫ್, ಎಡಿಎಎಸ್‌ ಹಾಗೂ ಇನ್ನೂ ಹಲವು ಸೌಕರ್ಯಗಳು ಕರ್ವ್‌ನಲ್ಲಿವೆ ಎಂದೆನ್ನಲಾಗಿದೆ.

ಸಿಟ್ರಾನ್ ಬಸಾಲ್ಟ್‌

ಫ್ರಾನ್ಸ್‌ನ ಸಿಟ್ರಾನ್‌ ಈ ಬಾರಿ ಬಸಾಲ್ಟ್ ಎಂಬ ಕಾರನ್ನು ಪರಿಚಯಿಸುತ್ತಿದೆ. ₹12ಲಕ್ಷ ಬೆಲೆಯಿಂದ ಲಭ್ಯವಿರುವ ಈ ಕಾರು 1.2 ಲೀ ಟರ್ಬೊ ಪೆಟ್ರೋಲ್‌ ಎಂಜಿನ್ ಹೊಂದಿದೆ. 109 ಅಶ್ವಶಕ್ತಿ ಹಾಗೂ 119 ನ್ಯೂಟನ್ ಮೀಟರ್ ಶಕ್ತಿ ಉತ್ಪಾದಿಸಬಲ್ಲದು. 6 ಸ್ಪೀಡ್‌ನ ಮ್ಯಾನುಯಲ್ ಗೇರ್ ಹಾಗೂ ಆ್ಯಟೊಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. 

ಇದೂ ಟಾಟಾ ಕರ್ವ್‌ ರೀತಿಯ ಕೂಪ್ ಮಾದರಿಯ ಕಾರಾಗಿದೆ. ಡುವಲ್ ಡಿಜಿಟಲ್ ಡಿಸ್‌ಪ್ಲೇ, ಟಯರ್ ಪ್ರೆಷರ್, ಪುಷ್ ಬಟ್ಟನ್, ಕ್ಲೈಮೆಟ್ ಕಂಟ್ರೋಲ್ ಎಸಿ, ಕ್ರೂಸ್ ಕಂಟ್ರೋಲ್‌ ಸೇರಿದಂತೆ ಹಲವು ಸೌಕರ್ಯಗಳು ಲಭ್ಯ.

ಟಾಟಾ ಪಂಚ್ ಫೇಸ್‌ಲಿಫ್ಟ್‌

ಟಾಟಾ ಪಂಚ್‌ನ ಇವಿ ಮಾದರಿಯಿಂದ ಪ್ರೇರಣೆಗೊಂಡು ಮರುವಿನ್ಯಾಸಗೊಂಡ ಕಾರು ಟಾಟಾ ಪಂಚ್. ಹೊಸ ಮಾದರಿಯ ಅಲಾಯ್ ವೀಲ್, 2 ಸ್ಪೋಕ್ ಸ್ಟಿಯರಿಂಗ್, ಟಚ್‌ ಸ್ಪೇಸ್ ಆಟೊ ಕಂಟ್ರೋಲ್ ಎಸಿ, ವ್ಯಾಲಟ್ ಚಾರ್ಜರ್ ಸೇರಿದಂತೆ ಹಲವು ರೀತಿಯ ಸೌಕರ್ಯಗಳನ್ನು ಈ ಪುಟ್ಟ ಕಾರು ಹೊಂದಿದೆ.

1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಪಂಚ್‌, 85 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಆ್ಯಟೊಮ್ಯಾಟಿಕ್ ಗೇರ್ ಬಾಕ್ಸ್‌ ಹೊಂದಿದೆ. ಇದರಲ್ಲಿ ಸಿಎನ್‌ಜಿ ಮಾದರಿಯೂ ಲಭ್ಯ. 

ಮಹೀಂದ್ರಾ ಥಾರ್ ಅರ್ಮಾಡಾ

ಆಫ್‌ರೋಡ್ ಕಾರುಗಳಲ್ಲಿ ಮಹೀಂದ್ರಾ ಥಾರ್ ಹೆಚ್ಚು ಜನಪ್ರಿಯ. ಇದೀಗ 5 ಬಾಗಿಲುಗಳ ಮಾದರಿಯಲ್ಲಿ ಈ ಕಾರು ಹೊಸ ಸ್ವರೂಪದೊಂದಿಗೆ ಆ. 15ರಂದು ಬಿಡುಗಡೆಯಾಗುತ್ತಿದೆ. 

₹16 ಲಕ್ಷ ಆರಂಭಿಕ ಬೆಲೆಯೊಂದಿಗೆ ಲಭ್ಯವಿರುವ ಮಹೀಂದ್ರಾ ಥಾರ್ ಅರ್ಮಾಡಾ ಕಾರಿನಲ್ಲಿ 2 ಲೀಟರ್‌ನ ಸ್ಟಾಲಿನ್ ಟರ್ಬೊ ಪೆಟ್ರೋಲ್ ಹಾಗೂ 2.2 ಲೀಟರ್‌ ಎಂ ಹಾಕ್‌ ಟರ್ಬೊ ಡೀಸಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯ. ಉಳಿದಂತೆ 19 ಇಂಚಿನ ವೀಲ್, ಸ್ಕಾರ್ಪಿಯೊ ಸ್ಟಿಯರಿಂಗ್ ವೀಲ್, ವೆಂಟಿಲೇಟೆಡ್ ಸೀಟ್, ಎಡಿಎಎಸ್‌ ಹಾಗೂ ಇನ್ನಿತರ ಸೌಕರ್ಯಗಳು ಲಭ್ಯ ಎಂದೆನ್ನಲಾಗಿದೆ.

ಹಂಡೇ ಅಲ್ಕಝಾರ್ ಫೇಸ್‌ಲಿಫ್ಟ್‌

ಹಂಡೇ ಅಲ್ಕಝಾರ್ ಹೊಸ ಅವತಾರದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಪರಿಚಯಗೊಳ್ಳುತ್ತಿದೆ. 

ಆರಂಭಿಕ ಬೆಲೆ ₹17ಲಕ್ಷವಾಗಿದ್ದು, ಹೊರಗಿನಿಂದ ಹೊಸ ಸ್ವರೂಪ ಹಾಗೂ ಒಳಗೆ ಹೊಸ ಸೌಕರ್ಯಗಳನ್ನು ನೀಡುತ್ತಿದೆ. 1.5 ಲಿಟರ್ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಿವೆ. ಒಳಭಾಗದಲ್ಲಿ 10.25 ಇಂಚಿನ ಇನ್ಫೊಟೈನ್ಮೆಂಟ್ ಸಿಸ್ಟಂ, ಪ್ಯಾನಾರೊಮಿಕ್ ಸನ್‌ರೂಫ್ ಒಳಗೊಂಡಂತೆ ಹಲವು ಐಷಾರಾಮಿ ಸೌಲಭ್ಯಗಳನ್ನ ಹಂಡೇ ಅಳವಡಿಸಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್‌ನಲ್ಲಿ ಈ ಕಾರು ಬಿಡುಗಡೆಯಾಗಲಿದೆ.

MG ಗ್ಲಾಸ್ಟರ್ ಫೇಸ್‌ಲಿಫ್ಟ್

ಮೋರಿಸ್ ಗ್ಯಾರೇಜಸ್‌ನ ವಿಲಾಸಿ ಕಾರು ಗ್ಲಾಸ್ಟರ್‌ಗೆ ಫೇಸ್‌ಲಿಫ್ಟ್ ಮಾಡಲಾಗಿದೆ. ಮುಂಭಾಗದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಮುಂಭಾಗ ಹಾಗೂ ಹಿಂಭಾಗದ ದೀಪಗಳು ಲಂಬವಾಗಿವೆ.

2 ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ 375 ಎನ್‌ಎಂ ಟರ್ಕ್ ಉತ್ಪಾದಿಸಲಿದೆ. 2ಲೀಟರ್ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್‌, 8 ಸ್ಪೀಡ್ ಟಾಪ್ ಕನ್ವರ್ಟರ್‌ ಅನ್ನು ಇದು ಹೊಂದಿದೆ. ಅಕ್ಟೋಬರ್‌ನಲ್ಲಿ ಈ ಕಾರು ಪರಿಚಯಗೊಳ್ಳುವ ಸಾಧ್ಯತೆ ಇದೆ.

ಹೊಂಡಾ WR-V

ಹೊಂಡಾದ ಡಬ್ಲೂಆರ್‌ವಿ ಕಾರು ಈ ಬಾರಿ ಬಾಕ್ಸ್ ಮಾದರಿಯ ವಿನ್ಯಾಸದಲ್ಲಿ ಕಂಡುಬರುತ್ತಿದೆ. ಒಳಭಾಗದಲ್ಲಿ ಡಿಜಿಟಲ್ ರೀತಿಯ ಅತ್ಯಾಧುಕಿನ ತಂತ್ರಜ್ಞಾನ ಇದೆ. ಆಗಸ್ಟ್‌ನಲ್ಲಿ ಈ ಕಾರು ರಸ್ತೆಗಿಳಿಯಲಿದೆ.

ಮಾರುತಿ ಡಿಝೈರ್

ಮಾರುತಿಯ ಜನಪ್ರಿಯ ಸೆಡಾನ್‌ ಕಾರಾದ ಡಿಝೈರ್‌ ಇದೇ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

1.2 ಲೀಟರ್‌ನ 3 ಸಿಲಿಂಡರ್‌ ಎಂಜಿನ್‌ ಅನ್ನು ಇದು ಹೊಂದಿದೆ. 112 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸಲಿದೆ. ಹಲವು ಇಂಧನಗಳ ಬಳಕೆಯ ಸೌಕರ್ಯವೂ ಇದೆ ಎನ್ನಲಾಗಿದೆ. ಪುಷ್ ಬಟ್ಟನ್ ಸ್ಟಾರ್ಟ್, 6 ಏರ್ ಬ್ಯಾಗ್, ಹಿಲ್ ಹೋಲ್ಡ್‌ ಅಸಿಸ್ಟ್‌ ಸೇರಿದಂತೆ ಹಲವು ಸೌಲಭ್ಯಗಳು ಇದರಲ್ಲಿ ಲಭ್ಯ.

ನಿಸ್ಸಾನ್ ಜ್ಯೂಕ್

ನಿಸ್ಸಾನ್ ಕಂಪನಿಯು 2024ರಲ್ಲಿ ಹೆಚ್ಚು ಉತ್ಸಾಹದಲ್ಲಿದೆ. ಜ್ಯೂಕ್ ಎಂಬ ಪುಟ್ಟ ಕಾರನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿದೆ. 

₹9ಲಕ್ಷದಿಂದ ₹16ಲಕ್ಷದೊಳಗಿನ ಕಾರು ಇದಾಗಿದ್ದು, 1 ಲೀಟರ್‌ನ 3 ಸಿಲಿಂಡರ್ ಟರ್ಬೊ ಪೆಟ್ರೋಲ್‌ ಎಂಜಿನ್ ಇದಾಗಿದ್ದು, 115 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸಲಿದೆ. 1.6ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯೂ ಲಭ್ಯ. 7 ಸ್ಪೀಡ್‌ ಡಿಸಿಟಿ ಗೇರ್ ಬಾಕ್ಸ್‌ ಅನ್ನು ಇದು ಹೊಂದಿದೆ.

ಸ್ಪೋರ್ಟಿ, ಕಾಂಪ್ಯಾಕ್ಟ್, ಫಂಕಿ ವಿನ್ಯಾಸದ ಈ ಕಾರಿನೊಳಗೆ 12.5 ಇಂಚಿನ ಇನ್ಫೊಟೈನ್ಮೆಂಟ್ ಸಿಸ್ಟಂ, ಬೊಸ್ ಆಡಿಯೊದಂತ ವಿಲಾಸಿ ಸೌಲಭ್ಯ ಇದೆ. ಅಕ್ಟೋಬರ್‌ನಲ್ಲಿ ಈ ಕಾರು ಬಿಡುಗಡೆ ಸಾಧ್ಯತೆ ಇದೆ.

ನಿಸ್ಸಾನ್ ಎಕ್ಸ್‌ಟ್ರಯಲ್

ನಿಸ್ಸಾನ್ ತನ್ನ ವಿಲಾಸಿ ಹಾಗೂ ಆಫ್‌ರೋಡ್‌ ಕಾರು ಎಕ್ಸ್‌ಟ್ರಯಲ್ ಅನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ₹35ಲಕ್ಷದಿಂದ ₹40ಲಕ್ಷ ಬೆಲೆಯೊಳಗೆ ಲಭ್ಯವಿರುವ ಈ ಕಾರಿನಲ್ಲಿ 1.5 ಲೀಟರ್ ಮೈಲ್ಡ್ ಹೈಬ್ರೀಡ್‌ ಪೆಟ್ರೋಲ್ ಹಾಗೂ 1.5ಲೀಟರ್‌ನ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಇದೆ. 2 ವೀಲ್ ಹಾಗೂ 4 ವೀಲ್ ಡ್ರೈವ್‌ ಆಯ್ಕೆ ಇದೆ. 

ಇದರೊಂದಿಗೆ ಪ್ಯಾನಾರೋಮಿಕ್ ಸನ್‌ರೂಫ್, ಎಡಿಎಎಸ್‌ ಸೌಕರ್ಯವೂ ಇದೆ. ಆಗಸ್ಟ್‌ನಲ್ಲಿ ಈ ಕಾರು ಬಿಡುಗಡೆಯಾಗುವ ಸಾಧ್ಯತೆ ಇದೆ.

ಕಿಯಾ ಗ್ರ್ಯಾಂಡ್ ಕಾರ್ನಿವಲ್

ಕಿಯಾದ ವಿಲಾಸಿ ಕಾರು ಗ್ರಾಂಡ್ ಕಾರ್ನಿವಲ್‌ ಹೊಸ ರೂಪದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ.

₹30ಲಕ್ಷದಿಂದ ₹40ಲಕ್ಷ ಬೆಲೆಯ ಆಸುಪಾಸಿನ ಕಾರು ಇದಾಗಿದ್ದು, ಹೊರ ಭಾಗದ ವಿನ್ಯಾಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ. 

ಡುಯಲ್ ಸನ್‌ರೂಫ್‌, ಎಸಿ, ಸ್ಲೈಡಿಂಗ್ ಡೋರ್, 2.2 ಲೀಟರ್‌ನ 4 ಸಿಲಿಂಡರ್ ಟರ್ಬೊ ಚಾರ್ಜ್ ಡೀಸೆಲ್ ಎಂಜಿನ್‌ ಅನ್ನು ಕಾರ್ನಿವಲ್ ಹೊಂದಿದೆ. ಅಕ್ಟೋಬರ್‌ನಲ್ಲಿ ಕಾರು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಹಂಡೇ ಪ್ಯಾಲಿಸೇಡ್‌

ದಕ್ಷಿಣ ಕೊರಿಯಾದ ಹಂಡೇ ಕಂಪನಿಯ ಪ್ಯಾಲಿಸೇಡ್ ಕಾರು 2024ರಲ್ಲಿ ಭಾರತಕ್ಕೆ ಬರಲಿದೆ.

₹37 ಲಕ್ಷದಿಂದ ₹40 ಲಕ್ಷ ಬೆಲೆಯ ವಿಲಾಸಿ ಕಾರು ಇದಾಗಿದ್ದು, 2.2 ಲೀಟರ್ 4 ಸಿಲಿಂಡರ್‌ನ ಎಂಜಿನ್‌ ಅನ್ನು ಇದು ಹೊಂದಿದೆ. 195 ಬಿಎಚ್‌ಪಿ, 420 ನ್ಯೂಟನ್ ಮೀಟರ್‌ನ ಟಾರ್ಕ್ ಅನ್ನು ಇದು ಉತ್ಪಾದಿಸಲಿದೆ. ಆ್ಯಟೊಮ್ಯಾಟಿಕ್ ಗೇರ್‌ ಬಾಕ್ಸ್‌ ಮಾತ್ರ ಇದು ಹೊಂದಿರುವುದು ವಿಶೇಷ. ಜತೆಗೆ 4 ವೀಲ್ ಡ್ರೈವ್ ಆಯ್ಕೆ ಇದೆ.

ಈ ಎಲ್ಲಾ ಕಾರುಗಳೊಂದಿಗೆ ನಿಸ್ಸಾನ್ ಮ್ಯಾಗ್ನೈಟ್, ರಿನೊ ಕೈಗರ್‌ಗಳು ಹೊಸ ಸ್ವರೂಪದಲ್ಲಿ ಭಾರತದ ಮಾರುಕಟ್ಟೆಗೆ ದಾಂಗುಡಿ ಇಡಲಿವೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ