ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿ ನಿಸ್ಸಾನ್ (Nissan) ಭಾರತದ, ದೇಶೀಯ ಮಾರುಕಟ್ಟೆಯಲ್ಲಿ ಮ್ಯಾಗ್ನೈಟ್ (Magnite) ಎಸ್‌ಯುವಿಯನ್ನು ಮಾರಾಟ ಮಾಡುತ್ತಿದೆ. ಇದು ಬಹುತೇಕ ಜನರಿಗೆ ಗೊತ್ತಿರುವ ಸಂಗತಿ.
ಆದರೆ, ಈಗ ಮ್ಯಾಗ್ನೈಟ್ ಮಾದರಿಯ ಕಾರುಗಳಲ್ಲಿ ಅದರ ಮುಂಭಾಗದ ಡೋರ್ (ಬಾಗಿಲು) ಹ್ಯಾಂಡಲ್ ಸೇನಾರ್ಸ್ ನಲ್ಲಿ ದೋಷ ಕಂಡುಬಂದಿರುವ ದೂರುಗಳ ವ್ಯಾಪಕವಾಗಿ ಕೇಳಿ ಬಂದಿವೆ. ಹಾಗಾಗಿ ಮುನ್ನೆಚ್ಚರಿಕೆಯಾಗಿ ಅದನ್ನು ಸರಿಪಡಿಸಲು ಮ್ಯಾಗ್ನೈಟ್ ಕಾರನ್ನು ಹಿಂಪಡೆಯಲು ನಿಸ್ಸಾನ್ ಕಂಪನಿಯು ತೀರ್ಮಾನಿಸಿದೆ.
ನಿಸ್ಸಾನ್ ಇಂಡಿಯಾ (Nissan India), ನವೆಂಬರ್ 2020 ರಿಂದ ಡಿಸೆಂಬರ್ 2023 ರವರಿಗೆ ತಯಾರಿಸಿದ ಆರಂಭಿಕ ಆವೃತ್ತಿ ಎಕ್ಸ್ಇ ಹಾಗೂ ಮಧ್ಯಮ ಶ್ರೇಣಿ ಎಕ್ಸ್ಎಲ್ ರೂಪಾಂತರಗಳನ್ನು ವಾಪಸ್ ಪಡೆಯಲಿದೆ. ಡಿಸೆಂಬರ್ 2023ರ ನಂತರ ಉತ್ಪಾದಿಸಿರುವ ಈ ರೂಪಾಂತರಗಳಿಗೆ ಹಿಂಪಡೆಯುವಿಕೆ ಅನ್ವಯಿಸುವುದಿಲ್ಲ. ಸ್ವತಃ ಕಂಪನಿ ಸಿಬ್ಬಂದಿ ಶೀಘ್ರದಲ್ಲಿ ಕಾರುಗಳ ಮಾಲೀಕರನ್ನು ಸಂಪರ್ಕಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಮ್ಯಾಗ್ನೈಟ್ ಮಾದರಿಗಳ ಹಿಂಪಡೆಯುವಿಕೆಯು ವಾಹನವನ್ನು ಚಾಲನೆಯ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂದು ನಿಸ್ಸಾನ್ ಸ್ಪಷ್ಟಪಡಿಸಿದೆ. ಹೊಸ ಸೇನಾರ್ಸ್ ಅನ್ನು ನಿಸ್ಸಾನ್ ಸರ್ವಿಸ್ ಸೆಂಟರ್ ನಲ್ಲಿ ಉಚಿತವಾಗಿ ಅಳವಡಿಸಲಾಗುತ್ತದೆ ಎಂದು ಕಂಪನಿ ಹೇಳಿದೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ, ₹6 ಲಕ್ಷದಿಂದ ₹11.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.