ಬೆಂಗಳೂರು: ವಿದ್ಯುತ್ ಬ್ಯಾಟರಿ ಚಾಲಿತ ವಾಹನ ತಯಾರಿಸುವ ಪ್ಯೂರ್ ಇವಿ ಕಂಪನಿ ಅಭಿವೃದ್ಧಿಪಡಿಸಿರುವ ಎಕ್ಸ್ ಪ್ಲಾಟ್‌ಫಾರ್ಮ್ 3.0 ಹೊಸ ಆವೃತ್ತಿ ಮಾರುಕಟ್ಟೆಗೆ ಪರಿಚಯಗೊಂಡಿದೆ.
ಬೈಕ್ ಸವಾರರಿಗೆ ಹೆಚ್ಚಿನ ಅನುಕೂಲ ನೀಡುವ ಉದ್ದೇಶದಿಂದ ಮೇಲ್ಜರ್ಜೆಗೇರಿಸಿರುವ ಎಕ್ಸ್ ಪ್ಲಾಟ್‌ಫಾರ್ಮ್ 3.0 ಬೈಕ್‌ನಲ್ಲಿ ಹೆಚ್ಚಿನ ಕಾರ್ಯಕ್ಷಮತೆ, ಸಂಪರ್ಕ ಮತ್ತು ಉತ್ತಮ ಚಾಲನಾ ಅನುಭವದೊಂದಿಗೆ ಹೊಸ ಫೀಚರ್‌ಗಳು ಇದರಲ್ಲಿವೆ ಎಂದು ಕಂಪನಿ ಹೇಳಿದೆ.
ಹಿಂದಿನ ಆವೃತ್ತಿಗೆ ಹೋಲಿಸಿದಲ್ಲಿ ಎಕ್ಸ್ ಪ್ಲಾಟ್‌ಫಾರ್ಮ್ 3.0ದಲ್ಲಿ ಟಾರ್ಕ್ ಮತ್ತು ಕಾರ್ಯಕ್ಷಮತೆ ಶೇ 25ರಷ್ಟು ಹೆಚ್ಚಾಗಿದೆ. ಇದನ್ನು ವಿಶೇಷವಾಗಿ ಪವರ್ ರೈಡ್‌ನಲ್ಲಿ ಆಸಕ್ತಿ ಇರುವವರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಕೃತಕ ಬುದ್ಧಿಮತ್ತೆಯನ್ನೂ ಇದರ ಸೌಕರ್ಯದಲ್ಲಿ ಬಳಸಿಕೊಳ್ಳಲಾಗಿದೆ. ಇದರಿಂದ ಪ್ಯೂರ್ ಇವಿ ಕೇವಲ ಬೈಕ್ ಎಂಬ ಸಾಧನವನ್ನಷ್ಟೇ ನೀಡುತ್ತಿಲ್ಲ. ಬದಲಿಗೆ ಬುದ್ಧಿವಂತಿಕೆಯಿಂದ ಚಾಲಕನೊಂದಿಗೆ ವರ್ತಿಸುವ ಆಪ್ತತೆಯೂ ಇದರದ್ದಾಗಿದೆ’ ಎಂದು ಪ್ಯೂರ್ ಇವಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ನಿಶಾಂತ್ ಡೊಂಗಾರಿ ತಿಳಿಸಿದ್ದಾರೆ.
‘ಈ ಬೈಕ್‌ನಲ್ಲಿ ಟಿಎಫ್‌ಟಿ ಡ್ಯಾಶ್‌ಬೋರ್ಡ್ ಅಳವಡಿಸಲಾಗಿದೆ. ಆ್ಯಪಲ್ ಮತ್ತು ಆ್ಯಂಡ್ರಾಯ್ಡ್ ಸಾಧನಗಳೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಇದರಲ್ಲಿ ನ್ಯಾವಿಗೇಷನ್ ಮ್ಯಾಪ್, ಬ್ಯಾಟರಿ ಸ್ಥಿತಿಗತಿ ಮಾಹಿತಿ, ಇರುವ ಚಾರ್ಜ್‌ನಲ್ಲಿ ಕ್ರಮಿಸುವ ದೂರದ ಅಂದಾಜು ಸೇರಿದಂತೆ ಹಲವು ಮಾಹಿತಿಗಳು ಲಭ್ಯ. ಇದರ ಎಕ್ಸ್ ಶೋರೂಂ ಬೆಲೆ ₹73,999’ ಎಂದು ಮಾಹಿತಿ ನೀಡಿದ್ದಾರೆ.