ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು 2027ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಸದ್ಯ ಕಂಪನಿಯ ಚಿತ್ತ 450ಸಿ.ಸಿ. ಹಾಗೂ 350 ಸಿ.ಸಿ. ಬೈಕ್‌ಗಳತ್ತ ಗಮನ ನೆಟ್ಟಿದೆ. ಮುಂದಿನ 2ರಿಂದ 3 ವರ್ಷಗಳ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 650 ಸಿ.ಸಿ.ಯ ಕನಿಷ್ಠ ಎರಡು ಬೈಕ್‌ಗಳ ಮಾದರಿಯನ್ನು ಭಾರತದಲ್ಲಿ ಪರಿಚಯಿಸುವ ಗುರಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಭಾರತ ಹಾಗೂ ಬ್ರಿಟನ್‌ನಲ್ಲಿ ಎಲೆಕ್ಟ್ರಿಕ್ ಬೈಕ್‌ಗಳ ಉತ್ಪಾದನೆಯ ಮೇಲೆ ರಾಯಲ್ ಎನ್‌ಫೀಲ್ಡ್ ಸಾಕಷ್ಟು ಗಮನ ಹರಿಸಿದೆ. ಚೆನ್ನೈನಲ್ಲಿ ತನ್ನ ತಾಂತ್ರಿಕ ಕೇಂದ್ರ ಹೊಂದಿದ್ದರೂ, ಎಲೆಕ್ಟ್ರಿಕ್ ವಾಹನಗಳಿಗಾಗಿಯೇ ರಾಯಲ್ ಎನ್‌ಫೀಲ್ಡ್ ಪ್ರತ್ಯೇಕ ಮೌಲ್ಯಮಾಪನ ಹಾಗೂ ಪರೀಕ್ಷಾ ಕೇಂದ್ರವನ್ನು ಹೊಂದುವ ಯೋಜನೆ ಹೊಂದಿದೆ ಎಂದೆನ್ನಲಾಗಿದೆ.
ರಾಯಲ್ ಎನ್‌ಫೀಲ್ಡ್ ಎರಡು ಪ್ರಮುಖ ಪ್ಲಾಟ್‌ಫಾರ್ಮ್ ಮೇಲೆ ಹೆಚ್ಚು ಕೆಲಸ ಮಾಡುತ್ತಿದ್ದು, ಇವುಗಳಿಂದ ಕನಿಷ್ಠ 4ರಿಂದ 5 ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳನ್ನು ಹೊರತರುವ ಉದ್ದೇಶ ಹೊಂದಿದೆ. ಆದಾಗ್ಯೂ, ಈ ಮೋಟಾರ್ ಬೈಕ್‌ಗಳ ಅಭಿವೃದ್ಧಿ ಇನ್ನೂ ಆರಂಭಿಕ ಹಂತದಲ್ಲಿದೆ. ತಯಾರಿಕಾ ಮಾದರಿಯವರೆಗೆ ತಲುಪು ಇನ್ನೂ ಕೆಲವು ವರ್ಷಗಳ ಅಗತ್ಯವಿದೆ ಎಂದು ಮೂಲಗಳು ಹೇಳಿವೆ.
ಆಸಕ್ತಿಕರ ವಿಷಯವೆಂದರೆ, ಕಳೆದ ವರ್ಷ ಹಿಮಾಲಯನ್ ಎಲೆಕ್ಟ್ರಿಕ್ ಬೈಕ್‌ನ ಮಾದರಿಯ ಪ್ರತಿಕೃತಿಯನ್ನು ಕಂಪನಿ ಬಿಡುಗಡೆ ಮಾಡಿತ್ತು. ಬರಲಿರುವ ವರ್ಷಗಳಲ್ಲಿ ಬ್ಯಾಟರಿ ಚಾಲಿತ ವಾಹನಗಳ ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿ ಹೊಂದುವ ಹಾಗೂ ತಯಾರಿಕಾ ವೆಚ್ಚ ತಗ್ಗುವ ವಿಶ್ವಾಸದಲ್ಲಿರುವ ರಾಯಲ್ ಎನ್‌ಫೀಲ್ಡ್ ಹೊಸ ಮಾದರಿಯ ಬೈಕ್‌ಗಳ ಅಭಿವೃದ್ಧಿಗೆ ಮುಂದಾಗಿದೆ.