ಚೆಕ್ ಗಣರಾಜ್ಯದಲ್ಲಿ ಹುಟ್ಟಿ ಸದ್ಯ ಜರ್ಮನಿಯ ಭಾಗವಾಗಿರುವ ಸ್ಕೊಡಾ, ಭಾರತದಲ್ಲೂ ಸದ್ಯ ಸದ್ದು ಮಾಡುತ್ತಿದೆ. ಸುರಕ್ಷತೆ, ಉತ್ಕೃಷ್ಟ ಎಂಜಿನಿಯರಿಂಗ್, ಉತ್ತಮ ಚಾಲನಾ ಅನುಭೂತಿ ಮತ್ತು ಬ್ರ್ಯಾಂಡ್ ಈ ಎಲ್ಲಾ ಅಂಶಗಳಿಂದ ಈಗಲೂ ಉಪಖಂಡದ ಅಸಲಿ ಕಾರು ಪ್ರಿಯರ ಅಚ್ಚುಮೆಚ್ಚಿನದಾಗಿದೆ.
ಐಷಾರಾಮಿ ಸೂಪರ್ಬ್ ಹಾಗೂ ಕೊಡಿಯಾಕ್‌ನಿಂದ, ಮೇಲ್ಮಧ್ಯಮ ವರ್ಗದ ಆಕ್ಟೀವಿಯಾವರೆಗೆ. ಮಧ್ಯಮವರ್ಗದ ಸ್ಲಾವಿಯಾ ಮತ್ತು ಕುಷಾಕ್‌ನ ಜನಪ್ರಿಯತೆ ನಂತರ ಇದೀಗ, ಕೆಳ ಮಧ್ಯಮ ವರ್ಗದವರನ್ನು ಬೇಡಿಕೆ ಈಡೇರಿಸಲು Skoda ಕಂಪನಿಯು ಕಿಲಾಕ್ ಎಂಬ ಪುಟ್ಟ ಕಾರನ್ನು ಪರಿಚಯಿಸಿದೆ.
ಫೋಕ್ಸ್‌ವ್ಯಾಗನ್ನೊಂದಿಗೆ ಪಾಲುದಾರಿಕೆಯಿಂದ ಹೊಸ ಇನ್ನಷ್ಟು ಉತ್ಸಾಹದಲ್ಲಿರುವ ಸ್ಕೊಡಾ ಕಿಲಾಕ್ ಮೂಲಕ ಭಾರತದ ಮಧ್ಯಮ ವರ್ಗದವರಿಗಾಗಿ ಕಾರು ಸಿದ್ಧಪಡಿಸಿದೆ. ಹೀಗಾಗಿ ಕಿಲಾಕ್ ₹7.89 ಲಕ್ಷದಿಂದ ₹14.40 (ಎಕ್ಸ್ ಶೋರೂಂ) ಬೆಲೆಗೆ ಲಭ್ಯ.
ಈ ಮೊತ್ತದ ಬ್ರಾಕೆಟ್‌ನಲ್ಲಿ ಮಾರುತಿ ಸುಜುಕಿ ಬ್ರೀಝಾ, ಟಾಟಾ ನೆಕ್ಸಾನ್, ಹ್ಯುಂಡೇ ವೆನ್ಯೂ, ಕಿಯಾ ಸಾನೆಟ್ ಮತ್ತು ಮಹೀಂದ್ರಾ 3ಎಕ್ಸ್0 ಕಾರುಗಳಿವೆ. ಈ ತೀವ್ರ ಸ್ಪರ್ಧೆಯ ನಡುವೆಯೇ ಸಾಕಷ್ಟು ಹೊಸ ಫೀಚರ್‌ಗಳೊಂದಿಗೆ ಕಿಲಾಕ್ ಅನ್ನು ಸ್ಕೊಡಾ ಪರಿಚಯಿಸಿದೆ.
ಪುಟ್ಟ ಎಸ್‌ಯುವಿಯಲ್ಲಿ ಹೆಚ್ಚು ಅಶ್ವಶಕ್ತಿ
ಮಿನಿ ಎಸ್‌ಯುವಿ ಮಾದರಿಯಲ್ಲಿರುವ ಕಿಲಾಕ್, 1 ಲೀ. ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರ ಮೂಲಕ 114 ಬಿಎಚ್‌ಪಿ ಮತ್ತು 178 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸಬಲ್ಲಷ್ಟು ಶಕ್ತಿಶಾಲಿಯಾಗಿದೆ. ಆಟೊ ಗೇರ್ ಮಾದರಿಯಲ್ಲಿ 6 ಸ್ಪೀಡ್ ಟಾರ್ಕ್ ಪರಿವರ್ತಕಗಳಿವೆ. ಮ್ಯಾನುಯಲ್‌ನಲ್ಲಿ 6 ಸ್ಪೀಡ್ ಗೇರ್‌ಬಾಕ್ಸ್‌ಗಳಿವೆ.
ಕಿಲಾಕ್‌ನಲ್ಲಿರುವ ಎಂಜಿನ್ ಹೆಚ್ಚು ಇಂಧನ ಕ್ಷಮತೆ ಹೊಂದಿರುವುದು ಮಾತ್ರವಲ್ಲ, ನಗರ ಪ್ರದೇಶದ ಟ್ರಾಫಿಕ್‌ನಲ್ಲಿ ಸುಲಭವಾಗಿ ಚಾಲನೆ ಮಾಡುವಷ್ಟು ಸರಳವಾಗಿದೆ. ಸ್ಲಾವಿಯಾ ಹಾಗೂ ಕುಷಾಕ್‌ನಂತೆಯೇ ಇದು ಪವರ್‌ಸ್ಟ್ರೈನ್ ಹೊಂದಿದೆ. ಹ್ಯಾಚ್‌ಬ್ಯಾಕ್‌ನಿಂದ ಮೇಲ್ದರ್ಜೆಗೇರಲಿಚ್ಛಿಸುವ ಗ್ರಾಹಕರಿಗೆ ಇದರ ಆರಂಭಿಕ ವೇಗ ಮತ್ತು ರಸ್ತೆ ಹಿಡಿತ ಹೆಚ್ಚು ಆತ್ಮವಿಶ್ವಾಸ ಮತ್ತು ಆನಂದ ನೀಡಲಿದೆ. ಆರಂಭಿಕ ವೇಗ ಕೆಲವೇ ಕ್ಷಣಗಳಲ್ಲಿ ಸ್ಪೀಡೋಮೀಟರ್‌ನಲ್ಲಿ ಮೂರು ಅಂಕಿಗಳು ಕಾಣಿಸುವಷ್ಟು ತ್ವರಿತವಾಗಿ ಕಿಲಾಕ್ ತನ್ನ ವೇಗ ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಹೆದ್ದಾರಿಯಲ್ಲಿ ಆರಾಮದಾಯಕ ಚಾಲನೆಗೆ ಸ್ಟಿಯರಿಂಗ್‌ನಲ್ಲಿ ಗೇರ್ ಬದಲಿಸುವ ಶಿಫ್ಟರ್ ನೀಡಲಾಗಿದೆ. ಇದರಿಂದ ಗೇರ್ ಲಿವರ್ ಬಳಸಿ ಬದಲಿಸುವ ಪರಿಶ್ರಮವನ್ನೂ ಸ್ಕೋಡಾ ತಗ್ಗಿಸಿದೆ. ನಗರ ಅಥವಾ ಹೆದ್ದಾರಿಯೇ ಆಗಿರಲಿ, ಕಿಲಾಕ್ ಚಾಲನೆ ಉತ್ತಮ ಅನುಭವ ನೀಡುವ ಗುಣಲಕ್ಷಣ ಹೊಂದಿದೆ.
ಹಿಂಬದಿಯಿಂದ ನೋಡಲು ಕಾರು ದೊಡ್ಡದಾಗಿ ಕಾಣಿಸುತ್ತದೆ. ಆದರೆ ಚಾಲನೆಗೆ ಕುಳಿತಾಗ ಹಗುರವೆಂಬಂತೆಯೇ ಇದರ ಅನುಭವವಾಗಲಿದೆ. ವಾಹನ ದಟ್ಟಣೆಯ ರಸ್ತೆಯಲ್ಲೂ ಸುಲಭವಾಗಿ ತಿರುಗಾಡಿಸಲು ಅನುಕೂಲವಾಗುವಂತೆ ಸ್ಟಿಯರಿಂಗ್ ಮೇಲೆ ಸ್ಕೋಡಾ ಹೆಚ್ಚು ಕೆಲಸ ಮಾಡಿದೆ. MQB A0 IN ಪ್ಲಾಟ್‌ಫಾರ್ಮ್ ಮೇಲೆ ಕಿಲಾಕ್ ಅಭಿವೃದ್ಧಿಪಡಿಸಲಾಗಿದೆ. ಇದೇ ಪ್ಲಾಟ್‌ಫಾರ್ಮ್ ಮೇಲೆ ಕುಷಾಕ್ ಮತ್ತು ಸ್ಲಾವಿಯಾ ಕಾರುಗಳೂ ತಯಾರಾಗಿವೆ. ಇದು 189 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದರೂ, ರಸ್ತೆಗೆ ಅಂಟಿಕೊಂಡೇ ಹೋಗುವಂತೆ ಭಾಸವಾಗುತ್ತದೆ. ಹೆಚ್ಚು ತೇಲುವಿಕೆ ಇಲ್ಲದ ಸ್ಕೋಡಾ ಎಂಜಿನಿಯರಿಂಗ್‌ನಿಂದಾಗಿ ಚಾಲಕರ ಆತ್ಮವಿಶ್ವಾಸ ಹೆಚ್ಚಲಿದೆ.
ಇವೆಲ್ಲದಕ್ಕೂ ಮುಖ್ಯ ಕಾರಣ ಸ್ಕೋಡಾ ಕಿಲಾಕ್‌ನಲ್ಲಿ ಬಳಸಿರುವ ಸಸ್ಪೆನ್ಶನ್. ಸಾಮಾನ್ಯ ರಸ್ತೆಗಿಂತ ಭಿನ್ನವಾದ ರಸ್ತೆಯಲ್ಲಿ ಸಾಗುವಾಗ ಇದರ ಅನುಭವವಾಗಲಿದೆ. ಒಂದು ಹಂತದಲ್ಲಿ ಕುಷಾಕ್‌ಗಿಂತಲೂ ಕಿಲಾಕ್‌ನ ಸಸ್ಪನ್ಶೆನ್ ಹೆಚ್ಚು ಉತ್ತಮ ಎಂದೆನಿಸಿದರೂ ಅಚ್ಚರಿ ಇಲ್ಲ.
ಸುರಕ್ಷತೆಗೆ ಮೊದಲ ಆದ್ಯತೆ
ಭಾರತ್ NCAP ಪರೀಕ್ಷೆಗಳಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಸಾಧಿಸಿದ ಎಸ್ಯುವಿಗಳಿವೆ. ಆದರೆ ಕೈಲಾಕ್ ಅದನ್ನು ಒಂದು ಹೆಜ್ಜೆ ಮುಂದೆ ಕೊಂಡೊಯ್ಯುತ್ತದೆ. ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಯಸ್ಕರ ರಕ್ಷಣೆಯಲ್ಲಿ 32 ಅಂಶಗಳಿಗೆ ಇದು 30.88 ಅಂಕಗಳನ್ನು (ಶೇ 97) ಪಡೆದಿದೆ. ಮಕ್ಕಳ ಸುರಕ್ಷತೆಯಲ್ಲಿ 49 ಅಂಕಗಳಲ್ಲಿ 45 ಪಡೆದಿದೆ (ಶೇ 92). ಇದರಲ್ಲಿ 25 ಸ್ಟ್ಯಾಂಡರ್ಡ್ ಸುರಕ್ಷತಾ ಸಾಧನಗಳಿವೆ. 6 ಏರ್ ಬ್ಯಾಗ್, ಟ್ರ್ಯಾಕ್ಷನ್ ಮತ್ತು ಸ್ಟಬಿಲಿಟಿ ಕಂಟ್ರೋಲ್, ಆ್ಯಂಟಿ ಲಾಕ್ ಬ್ರೇಕ್, ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್, ಬ್ರೇಕ್ ಡಿಸ್ಕ್ ವೈಪಿಂಗ್, ರೋಲ್ ಓವರ್ ಪ್ರೊಟೆಕ್ಷನ್, ಮೋಟಾರ್ ಸ್ಲಿಪ್ ರೆಗ್ಯುಲೇಷನ್, ಎಲೆಕ್ಟ್ರಾನಿಕ್ ಡಿಫರೆನ್ಶಿಯಲ್ ಲಾಕ್, ಪ್ಯಾಸೆಂಜರ್ ಏರ್‌ಬ್ಯಾಗ್ ಡಿಆ್ಯಕ್ಟಿವೇಷನ್, ಮಲ್ಟಿ ಕೊಲಿಷನ್ ಬ್ರೇಕಿಂಗ್, ಐಸೊಫಿಕ್ಸ್ ಸೀಟ್‌ಗಳು ಹಾಗೂ ಇನ್ನೂ ಹಲವು.

ಕಿಲಾಕ್‌ನ ಕ್ಯಾಬಿನ್‌ನ ಒಳಗಿನ ಸೌಕರ್ಯಗಳು
ಸ್ಕೋಡಾ ಕೈಲಾಕ್ ಗೆ ಸ್ಟೈಲಿಶ್ ಕ್ಯಾಬಿನ್ ಅನ್ನು ನೀಡಿದೆ, ಇದು ಸುಸ್ಥಿರ ಬಿದಿರಿನ ಫೈಬರ್ ಬಳಸಲಾಗಿದೆ. ಹಿತಕರ ಆಂಬಿಯೆಂಟ್ ಲೈಟಿಂಗ್ ನೊಂದಿಗೆ ಆಕರ್ಷಕ ಡ್ಯಾಶ್ ಬೋರ್ಡ್ ಒಳಗೊಂಡಿದೆ. ಒಳಭಾಗದಲ್ಲಿ 10 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, 8 ಇಂಚಿನ ಆಲ್-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆ್ಯಂಟಿ-ಪಿಂಚ್ ತಂತ್ರಜ್ಞಾನದೊಂದಿಗೆ ಸಿಂಗಲ್ ಪ್ಯಾನಲ್ ಸನ್ ರೂಫ್ ನೀಡಲಾಗಿದೆ. ಕ್ಯಾಬಿನ್ ಕೂಲ್ಡ್ ಗ್ಲೋವ್ ಬಾಕ್ಸ್, ಫ್ರಂಟ್ ವೆಂಟಿಲೇಟೆಡ್ ಸೀಟುಗಳು, ಟಚ್-ನಿಯಂತ್ರಿತ ಕ್ಲೈಮೇಟ್ ಸೆಟ್ಟಿಂಗ್‌ಗಳು, ಹಿಂದೆ ನೋಡಲು ರೇರ್‌ವ್ಯೂ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ ಮೂರು ಅಡ್ಜಸ್ಟ್ ಮಾಡಬಹುದಾದ ಹೆಡ್ ರೆಸ್ಟ್‌ಗಳನ್ನು ಹೊಂದಿರುವ ಆಸನಗಳನ್ನು ನೀಡಲಾಗಿದೆ. ಟೂ-ಸ್ಪೋಕ್ ಸ್ಟೀರಿಂಗ್ ವೀಲ್ ಹಿತಾನುಭವ ನೀಡಲಿದೆ. ಕ್ರೋಮ್-ಫಿನಿಶ್ಡ್ ರೋಲರ್ ನಿಯಂತ್ರಕ ಗುಂಡಿಗಳನ್ನು ನೀಡಲಾಗಿದೆ. ಮುಂಭಾಗದ ಎರಡೂ ಆಸನಗಳಿಗೆ 6 ವೇ ಎಲೆಕ್ಟ್ರಿಕ್ ಸೀಟ್ ಹೊಂದಿಸುವ ವ್ಯವಸ್ಥೆ ನೀಡಲಾಗಿದೆ.

ಡಿಕ್ಕಿಯಲ್ಲಿ ಪಾರ್ಸಲ್ ಟ್ರೇ, ತರಕಾರಿ ಅಥವಾ ದಿನಸಿ ತರಲು 3 ಕೆ.ಜಿ. ತೂಕವನ್ನು ಎತ್ತಿ ಹಿಡಿಯುವ ಎರಡು ಹುಕ್‌ಗಳನ್ನು ನೀಡಲಾಗಿದೆ. ಮುಂಭಾಗದ ಆಸನಗಳ ಹಿಂದ ಮೊಬೈಲ್ ಪಾಕೆಟ್ ನೀಡಲಾಗಿದೆ. 4 ಮೀಟರ್ ಒಳಗಿನ ಈ ಎಸ್‌ಯುವಿ ಕಿಲಾಕ್‌ನ ವೀಲ್ ಬೇಸ್ 2,566 mm ಇದೆ. ಹೀಗಾಗಿ ಡಿಕ್ಕಿಯಲ್ಲಿ 446 ಲೀಟರ್‌ನಷ್ಟು ಜಾಗ ನೀಡಲಾಗಿದೆ.
ದಿನನಿತ್ಯ ಕಾರು ಓಡಿಸುವವರಿಗೆ ಆರಾಮದಾಯಕ ಆಸನಗಳನ್ನು ಕಿಲಾಕ್‌ನಲ್ಲಿ ನೀಡಲಾಗಿದೆ. ಹೆಡ್‌ರೂಂ ಮತ್ತು ಲೆಗ್‌ರೂಂನಲ್ಲಿ ಹೆಚ್ಚಿನ ಸ್ಥಳಾವಕಾಶ ನೀಡಲಾಗಿದೆ. ಹೀಗಾಗಿ ಚಾಲಕ ಮತ್ತು ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದಾಗಿದೆ.





