ಸ್ಕೋಡಾ ಕಾರು ತಯಾರಿಕಾ ಕಂಪನಿಯು 4 ಮೀಟರ್ ಒಳಗಿನ ಕಾಂಪ್ಯಾಕ್ಟ್ ಎಸ್‌ಯುವಿ ಪರಿಚಯಿಸಲು ಸಿದ್ಧತೆ ಆರಂಭಿಸಿದೆ. ತನ್ನ ಎಲ್ಲಾ ಕಾರುಗಳ ಹೆಸರನ್ನು ‘ಕ’ ಅಕ್ಷರದಿಂದಲೇ ಪ್ರಾರಂಭಿಸುತ್ತಿರುವ ಸ್ಕೋಡಾ ಈ ಬಾರಿ ಏನು ಹೆಸರನ್ನು ಇಡಲಾಗಿದೆ ಎಂಬ ಕುತೂಹಲ ಇದ್ದೇ ಇದೆ.
ಇದಕ್ಕೆ ತೆರೆ ಎಳೆಯುವ ಸಲುವಾಗಿಯೇ ಆಗಸ್ಟ್ 21ರಂದು ಸ್ಕೋಡಾ ಈ ಕಾರಿನ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಈ ಕಾರಿಗೆ ಹೆಸರು ಸೂಚಿಸುವಂತೆ ಹಾಗೂ ಆಯ್ಕೆಯಾದ ಹೆಸರಿಗೆ ಬಹುಮಾನ ನೀಡುವುದಾಗಿಯೂ ಸ್ಕೋಡಾ ತನ್ನ ಅಧಿಕೃತ ಅಂತರ್ಜಾಲ ಪುಟದಲ್ಲಿ ಹೇಳಿತ್ತು. ಅದರಂತೆಯೇ ಕ್ವಿಕ್, ಕ್ಯಾಮಾಕ್, ಕಿಲಾಕ್, ಕರೀಕ್, ಕ್ಯೋರಾಕ್, ಕಾಸ್ಮಿಕ್, ಕಯಾಕ್, ಕೈಕ್, ಕ್ಲಿಕ್, ಕರ್ಮಿಕ್ ಎಂಬ ಹೆಸರುಗಳು ಅಂತಿಮಗೊಂಡಿವೆ ಎಂದೆನ್ನಲಾಗಿದೆ.
ಸ್ಕೋಡಾ ಈ ನೂತನ ಕಾರು ಎಂಕ್ಯೂಬಿ ಎಒ–ಇನ್ ಪ್ಲಾಟ್‌ಫಾರ್ಮ್ ಆಧಾರಿತ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ. ಕುಷಾಕ್ ಹಾಗೂ ಸ್ಲಾವಿಯಾದಿಂದ ಪ್ರೇರಣೆ ಪಡೆದಿದೆ. ಈವರೆಗೂ ಬಿಡುಗಡೆಯಾಗಿರುವ ಕಾರಿನ ಅಲ್ಪ ಪ್ರಮಾಣದ ನೋಟದಲ್ಲಿ, ಸ್ಕೋಡಾ ಸಿಗ್ನೇಚರ್ ಗ್ರಿಲ್ ಹಾಗೂ ಲೋಗೊ, ಎಲ್‌ಇಡಿ ಡಿಆರ್‌ಎಲ್ ಇರುವುದನ್ನು ಕಾಣಬಹುದು. ಎಲ್ ಆಕಾರದ ಎಲ್‌ಇಡಿ ಹಿಂಬದಿಯ ದೀಪಗಳನ್ನೂ ನೋಡಬಹುದು.
ಈ ಕಾರು 1.0 ಲೀಟರ್ 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಸದ್ಯ ಇರುವ ಎಂಜಿನ್‌ಗಳ ಆಧಾರದಲ್ಲಿ ಹೇಳುವುದಾದರೆ ಇದು 113 ಬಿಎಚ್‌ಪಿ ಹಾಗೂ 178 ನ್ಯೂಟನ್ ಮೀಟರ್ ಶಕ್ತಿಯನ್ನು ಉತ್ಪಾದಿಸುವ ಶಕ್ತಿ ಹೊಂದಿದೆ. 6 ಸ್ಪೀಡ್ ಮ್ಯಾನುಯಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಸಾಧ್ಯತೆ ಹೆಚ್ಚು. ಸ್ಕೋಡಾ ಪ್ರಿಯರ ಈ ಎಲ್ಲಾ ಕುತೂಹಲಗಳಿಗೂ ಆ. 21ರಂದು ತೆರೆ ಬೀಳಲಿದೆ.