Sunday Foglight: ಬ್ಯಾಟರಿ ಚಾಲಿತ ವಾಹನಗಳು ಪೃಥ್ವಿಗೆ ವರವೋ..? ಶಾಪವೋ…?

ಮೈಕ್ರೊಸಾಫ್ಟ್‌ ಡಿಸೈನರ್‌ ಎಐ ಚಿತ್ರ

ಜಗತ್ತಿನಲ್ಲಿ ಒಟ್ಟು ಉತ್ಪಾದನೆಯಾಗುತ್ತಿರುವ ಇಂಗಾಲದ ಡೈಆಕ್ಸೈಡ್‌ ಪ್ರಮಾಣದಲ್ಲಿ ಶೇ 75ರಷ್ಟು ಪ್ರಮಾಣ ಏಷ್ಯಾದ ಆರ್ಥಿಕ ಪ್ರದೇಶಗಳ ರಸ್ತೆ ಸಾರಿಗೆಯ ಕೊಡುಗೆಯಾಗಿದೆ. ಏಷ್ಯಾದಿಂದ ಹೊರಸೂಸುವ ಒಟ್ಟು 79.5 ಕೋಟಿ ಟನ್‌ ಇಂಗಾಲದ ಡೈಆಕ್ಸೈಡ್‌ನಲ್ಲಿ ಭಾರತದ ಪ್ರಮಾಣ 29.1 ಕೋಟಿ ಟನ್. ಇದಕ್ಕೆ ಪೂರಕವಾಗಿ ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆಯೂ ವಿಸ್ತರಿಸುತ್ತಿದೆ. ಇದಕ್ಕೆ ನೀಡುತ್ತಿರುವ ಕಾರಣ, ಇಂಧನ ಬೆಲೆಯಲ್ಲಿ ಭಾರಿ ಏರಿಕೆ ಮತ್ತು ಸಾಂಪ್ರದಾಯಿಕ ದಹನಕಾರಿ ಎಂಜಿನ್‌ಗಳು ಹಸಿರುಮನೆ ಪರಿಣಾಮಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ ಎಂಬ ಕಥೆಯೂ ಒಳಗೊಂಡಿದೆ. ಬ್ಯಾಟರಿ ಉತ್ಪಾದನೆಯು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದು ಈಗ ಬಹುಚರ್ಚಿತ ವಿಷಯವಾಗಿದೆ. ಹಾಗಿದ್ದರೆ EVಗಳು ಪ್ರಕೃತಿ ಪೂರಕವೇ..?

ವಿದ್ಯುತ್ ಚಾಲಿತ ವಾಹನಗಳಲ್ಲಿ ಹಲವು ಬಗೆ. ಬ್ಯಾಟರಿ ವಾಹನಗಳು (EV), ಹೈಬ್ರೀಡ್ ಎಲೆಕ್ಟ್ರಿಕ್ ಹಾಗೂ ಇಂಧನ ಕೋಶ ಎಲೆಕ್ಟ್ರಿಕ್ ವಾಹನ (BEV) ಎಂಬುವು ಇವೆ. ಇಂಥ ವಾಹನಗಳಿಗೆ ಇತ್ತೀಚೆಗೆ ಭಾರತದಲ್ಲಿ ಭಾರೀ ಬೇಡಿಕೆ ಉಂಟಾಗಿದೆ. ಸರ್ಕಾರವೂ ಈ ಕ್ಷೇತ್ರದಲ್ಲಿ ಬೆಳವಣಿಗೆಯ ಗುರಿ ಹಾಕಿಕೊಂಡಿದೆ. 2030ರ ಹೊತ್ತಿಗೆ ವಿದ್ಯುತ್ ಚಾಲಿತ ಕಾರುಗಳ ಸಂಖ್ಯೆ ಶೇ 30ರಷ್ಟು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಖ್ಯೆ ಶೇ 80ರಷ್ಟು ಹೆಚ್ಚಳವಾಗುವ ಗುರಿಯನ್ನು ಭಾರತ ಹೊಂದಿದೆ. ಈ ದಶಕದ ಅಂತ್ಯದ ಹೊತ್ತಿಗೆ ಇವಿ ಕೈಗಾರಿಕೆಯು 100 ಶತಕೋಟಿ ಅಮೆರಿಕನ್ ಡಾಲರ್‌ ವಹಿವಾಟು ದಾಖಲಿಸಲಿದೆ ಎಂಬಿತ್ಯಾದಿ ಅಂಕಿಅಂಶಗಳನ್ನು ಸರ್ಕಾರ ನೀಡಿದೆ.

ಮಾಲಿನ್ಯ ಕಡಿಮೆ ಮಾಡಬೇಕು ಎಂಬುದು ನಿರ್ವಿವಾದ. ಆದರೆ ಬ್ಯಾಟರಿ ಬಳಕೆಯು ಸುಸ್ಥಿರ ಎಂಬ ಅಂಶ ಮಾತ್ರ ಚರ್ಚಿತ ವಿಷಯ. ಒಂದು ವಿದ್ಯುತ್ ಚಾಲಿತ ವಾಹನವನ್ನು ಪರಿಗಣಿಸಿದರೆ ಅದರಲ್ಲಿ ಎರಡು ರೀತಿಯ ಪರಿಸರಕ್ಕೆ ಹೊರೆಯಾಗುವ ಪ್ರಮುಖ ಅಂಶಗಳಿವೆ. ಇಂಧನ ದಹಿಸುವ ಎಂಜಿನ್‌ಗೂ ಹಾಗೂ ವಿದ್ಯುತ್ ಚಾಲಿತ ವಾಹನಗಳಿಗೂ ಹೋಲಿಸುವುದೇ ಆದರೆ, ಅದರ ತಯಾರಿಕೆಯನ್ನು ಗಮನಿಸಿ, ಅಂಕಿ ಅಂಶಗಳನ್ನು ಪರಿಗಣಿಸಬೇಕೇ ಹೊರತು, ಅಂತಿಮ ಉತ್ಪನ್ನವನ್ನಲ್ಲ. ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ, ವಾಹನದ ಚಾಸೀಸ್ ನಿರ್ಮಾಣವಾಗುವುದು ಅಲುಮಿನಿಯಂ ಹಾಗೂ ಸ್ಟೀಲ್‌ ಬಳಕೆಯಿಂದ. ಇದು ಕಂಬಶ್ಚನ್ ಹಾಗೂ ಬ್ಯಾಟರಿ ಚಾಲಿತ ವಾಹನ ಎರಡಕ್ಕೂ ಸಾಮಾನ್ಯ. ಆದರೆ, ಬ್ಯಾಟರಿ ತಯಾರಿಕೆಯಿಂದ ಪರಿಸರದ ಮೇಲಾಗುವ ಬದಲಾವಣೆ ಇವೆಲ್ಲದಕ್ಕೂ ಮೀರಿದ್ದು.

ಬ್ಯಾಟರಿ ತಯಾರಿಕೆಯಿಂದ ಪರಿಸರದ ಮೇಲಾಗುವ ಪರಿಣಾಮಗಳು

ಯಾವುದೇ ಆಧುನಿಕ ಬ್ಯಾಟರಿಗಳನ್ನು ಲೀಥಿಯಂ, ಕೊಬಾಲ್ಟ್ ಹಾಗೂ ನಿಕ್ಕಲ್‌ನಿಂದ ತಯಾರಿಸಲಾಗುತ್ತದೆ. ಆದರೆ ಭಾರತದಲ್ಲಿ ಲೀಥಿಯಂ ನಿಕ್ಷೇಪಗಳು ವಿರಳಾತಿವಿರಳ. ಹೀಗಾಗಿ ಲೀಥಿಯಂ ಅಯಾನ್ ಅನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ರಾಸಾಯನಿಕ ಗಣಿಗಾರಿಕೆಯೂ ದುಬಾರಿ. ಪರಿಸರಕ್ಕೆ ಮಾರಕವೂ ಹೌದು. ಅಷ್ಟು ಮಾತ್ರವಲ್ಲ, ಇವುಗಳ ಗಣಿಗಾರಿಕೆ ಸಂದರ್ಭದಲ್ಲೂ ಹಾನಿಕಾರಕ ರಾಸಾಯನಿಕಗಳು ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ, 2016ರಲ್ಲಿ ಟಿಬೆಟ್‌ನ ಲಿಖ್ವಿ ನದಿಯಲ್ಲಿ ಸಾವಿರಾರು ಮೀನುಗಳ ಸತ್ತು ತೇಲುತ್ತಿದ್ದವು. ಈ ಕುರಿತ ಅಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಗಾಂಝಿಝೂ ರೊಂಗಾ ಲೀಥಿಯಂ ಗಣಿಗಾರಿಕಾ ಕಂಪನಿಯ ಅವೈಜ್ಞಾನಿಕ ಹಾಗೂ ಸುರಕ್ಷತೆ ಇಲ್ಲದ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿರು. ಈ ಗಣಿಕೆಗಾರಿಕೆಯಿಂದ ಹಾನಿಕಾರಕ ರಾಸಾನಿಕ ಬಿಡುಡಗೆಯಾಗುತ್ತಿರುವುದರ ಜತೆಗೆ, ಸುತ್ತಲಿನ ಪರಿಸರವೂ ನಾಶವಾಗುತ್ತಿದೆ ಎಂದು ಆರೋಪಿಸಿದ್ದರು. 

ಈ ಗಣಿಕೆಗಾರಿಕೆಗೆ ಲಿಖ್ವಿ ನದಿ ಮಾತ್ರವಲ್ಲ, ಜಿನ್ ನದಿಯೂ ಮಲಿನಗೊಂಡಿತ್ತು. ಈ ರಾಸಾನಿಕಗಳು ಸಿಕ್ಕ ನಂತರ, ಬ್ಯಾಟರಿ ಉತ್ಪಾದನೆಗೂ ಹೆಚ್ಚಿನ ವಿದ್ಯುತ್ ಬೇಡುವ ಕ್ರಿಯೆಯಾಗಿದೆ. ಹೀಗಾಗಿ ವಿದ್ಯುತ್ ಚಾಲಿತ ವಾಹನಗಳಿಂದ ಇಂಗಾಲ ಹೊರಸೂಸುವಿಕೆ ಪ್ರಕ್ರಿಯೆ ಹೆಚ್ಚೇ ಹೊರತು, ಕಡಿಮೆಯಂತೂ ಅಲ್ಲ. ಇವಿ ಹಾಗೂ ಕಂಬಶ್ಚನ್ ಎಂಜಿನ್‌ ಎರಡನ್ನೂ ಹೋಲಿಸಿದರೆ, ವಾತಾವರಣಕ್ಕೆ ಇಂಗಾಲಯದ ಹೊರಸೂಸುವಿಕೆಯು, EV ವಾಹನಗಳ ತಯಾರಿಕೆಯಿಂದ ಶೇ 46ರಷ್ಟು ಹೆಚ್ಚು. ಆದರೆ ಕಂಬಶ್ಚನ್ ಎಂಜಿನ್‌ ಪ್ರಮಾಣ ಶೇ 26 ಮಾತ್ರ ಎಂದು 2021ರಲ್ಲಿ ನಡೆದ ಅಧ್ಯಯನ ವರದಿ ಹೇಳಿದೆ. 

ಉದಾಹರಣೆಗೆ… ಒಂದು ಇವಿ ಕಾರು ತಯಾರಾಗಲು 4 ಟನ್‌ನಷ್ಟು ಇಂಗಾಲದ ಡೈಆಕ್ಸೈಡ್‌ ವಾತಾವರಣಕ್ಕೆ ಬಿಡುಗಡೆ ಆಗುತ್ತದೆ. ನಂತರ ಈ ವಾಹನ ಕನಿಷ್ಠ 8 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದರೂ, ವಾರ್ಷಿಕ 0.5 ಟನ್‌ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಆಗುತ್ತದೆ.

ಹಾಗೆಯೇ ಒಂದು ಟನ್‌ ಲೀಥಿಯಂ (100 ಕಾರುಗಳಿಗೆ ಅಗತ್ಯ) ಉತ್ಪಾದಿಸಲು 2 ದಶಲಕ್ಷ ಟನ್‌ ನೀರು ಬೇಕು. ಹೀಗಾಗಿ ಇವಿ ಕಾರುಗಳ ಬ್ಯಾಟಿ ತಯಾರಿಕೆ ಪ್ರಕ್ರಿಯೆಗೆ ಅತಿ ಹೆಚ್ಚು ನೀರು ಬೇಕು. ಇದರಿಂದಾಗಿಯೇ ದಕ್ಷಿಣ ಅಮೆರಿಕಾದ ಲೀಥಿಯಂ ತ್ರಿಭುಜ ಎಂದೇ ಕರೆಯಲಾಗುವ ಚಿಲಿ, ಅರ್ಜೆಂಟಿನಾ ಹಾಗೂ ಬೊಲಿವಿಯಾದಲ್ಲಿ ಅತಿ ಹೆಚ್ಚು ಲೀಥಿಯಂ ಸಿಗುತ್ತಿದೆಯಾದರೂ, ಹೆಚ್ಚಿನ ಪ್ರಮಾಣದ ನೀರೂ ಖರ್ಚಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಅಲ್ಲಿನ ಜನ ಈ ಲೀಥಿಯಂ ಗಣಿಗಾರಿಕೆ ವಿರುದ್ಧ ತೀವ್ರವಾಗಿ ಧ್ವನಿ ಎತ್ತಲಾರಂಭಿಸಿದ್ದಾರೆ.

ಹಾಗೆಂದ ಮಾತ್ರಿಕ್ಕೆ ಇದು ಲೀಥಿಯಂಗೆ ಮಾತ್ರ ಸೀಮಿತವಲ್ಲ. ನಿಕ್ಕಲ್ ಹಾಗೂ ಕೊಬಾಲ್ಟ್‌ ಪಡೆಯಲೂ ಇಷ್ಟೇ ಪ್ರಮಾಣದಲ್ಲಿ ಪರಿಸರ ನಾಶ ಅನುಭವಿಸಲೇಬೇಕು. ಕ್ಯೂಬಾದ ಉಪಗ್ರಹ ನಕ್ಷೆ ಗಮನಿಸಿದರೆ 10 ಎಕರೆ ಕರಾವಳಿ ಪ್ರದೇಶದಲ್ಲಿ 570 ಹೆಕ್ಟೇರ್ ಪ್ರದೇಶ ಜಾಗ ಮಲಿನಗೊಂಡಿದೆ. ಇದೇ ಸಮಸ್ಯೆಯಿಂದ ಫಿಲಿಪಿನ್ಸ್‌ ಕೂಡಾ ನಿಕ್ಕಲ್ ಹಾಗೂ ಕೊಬಾಲ್ಟ್‌ ನಿಕ್ಷೇಪಗಳಿರುವ 23 ಗಣಿಗಳಿಗೆ ಬೀಗ ಹಾಕಿದೆ.

ಇಂಥ ಬಹಳಷ್ಟು ನೈಜ ಘಟನೆಗಳು ಜಗತ್ತಿನಾದ್ಯಂತ ನಡೆದ ಉದಾಹರಣೆಗಳಿವೆ. ಇದು ಕೇವಲ EVಗಳಿಂದಲೇ ಎಂದೇನೂ ಇಲ್ಲ. ಈ ರಾಸಾಯನಿಕ ಬಳಸುವ ಯಾವುದೇ ಬ್ಯಾಟರಿ ತಯಾರಿಕೆಯಲ್ಲೂ ಪರಿಸರ ನಾಶ ಇದ್ದೇ ಇದೆ. ಮರಬಳಕೆಯ ಬ್ಯಾಟರಿಗಳು ಒಂದಷ್ಟು ರಿಯಾಯಿತಿ ನೀಡುತ್ತವೆಯಾದರೂ, ಅವುಗಳೂ ಪರಿಸರಕ್ಕೆ ಮಾರಕ ಎಂಬ ಅಂಶವನ್ನು ನಾವು ಪರಿಗಣಿಸಲೇಬೇಕು. ಇಂಥ ಉದಾಹರಣೆಯಾಗಿ ಜಪಾನ್‌ ನಿಸ್ಸಾನ್‌ ತನ್ನ ಕಾರ್ಖಾನೆಗಳಲ್ಲಿ ಸಮಾನು ಸರಂಜಮು ಸಾಗಿಸುವ ಗಾಡಿಗಳಿಗೆ ಇಂಥ ಮರು ಬಳಕೆಯ ಬ್ಯಾಟರಿಗಳನ್ನು ಬಳಸುತ್ತಿರುವ ಕುರಿತು ಸುದ್ದಿಯಾಗಿದೆ. ಇದೇ ರೀತಿ ಫೋಕ್ಸ್‌ವ್ಯಾಗನ್‌ ಹಾಗೂ ರಿನೊ ಕಂಪನಿಗಳು ಬ್ಯಾಟರಿಗಳ ಮರುಬಳಕೆಯ ಘಟಕಗಳನ್ನೇ ಸ್ಥಾಪಿಸಿವೆ.

ಆದರೆ ಇಡೀ ಜಗತ್ತಿನಲ್ಲಿ ಹೀಗೆ ಮರುಬಳಕೆಯಾಗುತ್ತಿರುವ ಬ್ಯಾಟರಿಗಳ ಪ್ರಮಾಣ ಶೇ 5 ಮಾತ್ರ. ಇಷ್ಟು ಸಣ್ಣ ಪ್ರಮಾಣಕ್ಕೆ ಕಾರಣವಿಷ್ಟೇ… ಈ ಪ್ರಕ್ರಿಯೆ ದುಬಾರಿ. ಹೀಗಾಗಿ ಬಹಳಷ್ಟು ಬ್ಯಾಟರಿಗಳನ್ನು ಬಿಸಾಡಲಾಗುತ್ತಿದೆ. ಅದು ಪ್ರಕೃತಿಗೆ ಇನ್ನಷ್ಟು ಮಾರಕವಾಗಿ ಪರಿಣಮಿಸಿದೆ.

ಬ್ಯಾಟರಿ ಮರುಪೂರ್ಣವೂ ಪರಿಸರಕ್ಕೆ ಮಾರಕ

ಈವರೆಗೂ ಬ್ಯಾಟರಿಗಳ ತಯಾರಿಕೆಯಿಂದ ಪರಿಸರಕ್ಕೆ ಆಗುತ್ತಿರುವ ಮಾರಕವನ್ನು ಅರಿತೆವು. ಆದರೆ, ಬ್ಯಾಟರಿ ಬಳಕೆಯೂ ಪರಿಸರ ವಿನಾಶಕ್ಕೆ ಕಾರಣ ಎಂಬುದೂ ಅಷ್ಟೇ ಸತ್ಯ. ಅದರಲ್ಲೂ ಭಾರತದಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ, ಮುಖ್ಯ ಇಂಧನ ಮೂಲವೇ ವಿದ್ಯುಚ್ಛಕ್ತಿ. ಹೀಗೆ ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್‌ ಮಾಡುವುದೂ ಪರಿಸರಕ್ಕೆ ಮಾರಕವಾಗಿದೆ.

2021ರಲ್ಲಿ ಇಂಧನ ಇಲಾಖೆಯ ಮಾಹಿತಿ ಅನ್ವಯ, ಭಾರತವು ಉಷ್ಣ ವಿದ್ಯುತ್ ಘಟಕಗಳ ಮೂಲಕ ಪಡೆಯುತ್ತಿರುವ ವಿದ್ಯುತ್ ಪ್ರಮಾಣ ಶೇ 61ರಷ್ಟು. ಇಲ್ಲಿ ಮುಖ್ಯವಾಗಿ ದಹನ ಕ್ರಿಯೆಗೆ ಬಳಸುವುದು ಕಲ್ಲಿದ್ದಲ್ಲು. ಇದರಿಂದ ಪರಿಸರ ಮಾಲಿನ್ಯ ಪ್ರಮಾಣ ಶೇ 60ರಷ್ಟು. ಇದರೊಂದಿಗೆ ಕಲ್ಲಿದ್ದಲ್ಲು ಸಾಗಾಣಿಕೆಗೆ ಬಳಸುವ ಡೀಸೆಲ್‌ ಕೂಡಾ ಮಾಲಿನ್ಯಕ್ಕೆ ಮತ್ತೊಂದು ಕೊಡುಗೆ. ಸದ್ಯ ಭಾರತವು ಕಲ್ಲಿದ್ದಲ್ಲು ರಫ್ತು ಮಾಡುವ ಜಗತ್ತಿನ 2ನೇ ಅತಿ ದೊಡ್ಡ ರಾಷ್ಟ್ರ. ಕಲ್ಲಿದ್ದಲ್ಲು ಗಣಿಕಗಾರಿಕೆಯಿಂದ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ, ಅರಣ್ಯ ನಾಶ, ಜಲಚರಗಳ ನಾಶ ಇಂಥ ಇನ್ನೂ ಅನೇಕ ಪರಿಸರಕ್ಕೆ ಮಾರಕವಾದ ಅಂಶಗಳು ಸೇರಿವೆ. ಭಾರತದಲ್ಲಿ ಮರುಬಳಕೆಯ ಇಂಧನ ಮೂಲಗಳ ಪ್ರಮಾಣ ಶೇ 21 ಮಾತ್ರ ಎಂಬುದು ಮಾಲಿನ್ಯ ಪ್ರಮಾಣವನ್ನು ಊಹಿಸಲು ನೆರವಾಗಲಿದೆ.

ಭಾರತದಲ್ಲಿ EVಗಳ ಉತ್ತೇಜನ ಎರಡು ರೀತಿಯಲ್ಲಿ ನಡೆಯುತ್ತಿದೆ. ಗ್ರಾಹಕರ ಬೇಡಿಕೆಯನ್ನು ಈಡೇರಿಸುವುದು ಹಾಗೂ ತಯಾರಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು. ಇದಕ್ಕಾಗಿ 2020ರಲ್ಲಿ ಭಾರತ ಸರ್ಕಾರವು ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್‌ ಯೋಜನೆಯನ್ನು ಜಾರಿಗೆ ತಂದಿತು. ಆ ಮೂಲಕ ಬೆಲೆ ತಗ್ಗಿಸುವ ಮೂಲಕ ಬ್ಯಾಟರಿ ಚಾಲಿತ ವಾಹನಗಳನ್ನು ಹೊಂದುವವರ ಸಂಖ್ಯೆ ಹೆಚ್ಚಿಸುವುದು, ತೆರಿಗೆ ತಗ್ಗಿಸುವುದು ಹಾಗೂ ಚಾರ್ಜಿಂಗ್ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಳ ಮಾಡುವುದು ಸೇರಿತ್ತು. ಇದರೊಂದಿಗೆ ಈ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ಹಾಗೂ ಸ್ಥಳೀಯ ತಯಾರಕರನ್ನು ಉತ್ತೇಜಿಸುವ ಉದ್ದೇಶವೂ ಹೊಂದಲಾಗಿತ್ತು. ಇದಕ್ಕಾಗಿ ಸ್ಥಳೀಯ ತಯಾರಕರಿಗೆ ತೆರಿಗೆ ರಿಯಾಯಿತಿಯ ಕೊಡುಗೆಯನ್ನೂ ನೀಡಲಾಗಿತ್ತು. ಆದರೆ ಇವೆಲ್ಲವೂ ಲೀಥಿಯಂ ಲಭ್ಯತೆಯನ್ನು ಅವಲಂಬಿಸಿದೆ ಎಂಬುದು ವಾಸ್ತವ.

ಇತ್ತೀಚಿನ ಮಾಹಿತಿ ಪ್ರಕಾರ ಭಾರತದಲ್ಲಿ ಲೀಥಿಯಂ ಪ್ರತಿ ಟನ್‌ ದರ ಶೇ 80ರಷ್ಟು ಹೆಚ್ಚಾಗಿದೆ. ರಷ್ಯಾ– ಉಕ್ರೇನ್ ನಡುವಿನ ಯುದ್ಧವೂ ಇದರ ಬೆಲೆ ಏರಿಕೆಗೆ ಮತ್ತೊಂದು ಕಾರಣ. ಏಕೆಂದರೆ ಜಗತ್ತಿಗೆ ಶೇ 20ರಷ್ಟು ನಿಕ್ಕಲ್ ಪೂರೈಕೆ ರಷ್ಯಾದಿಂದಲೇ ಆಗುತ್ತಿದೆ.

ಈ ಎಲ್ಲವನ್ನೂ ಪರಿಗಣಿಸಿದರೆ, ಬ್ಯಾಟರಿ ಚಾಲಿತ ವಾಹನ ಚಲನೆ ಸಂದರ್ಭದಲ್ಲಿ ಹೊಗೆಯುಗುಳದ ಮತ್ತು ಶಬ್ದ ಮಾಡದ ಕಾರಣ ಪರಿಸರ ಸ್ನೇಹಿ ಎಂಬುದು ಎಷ್ಟು ನಿಜವೋ, ಇದರ ತಯಾರಿಕೆಯಲ್ಲಿ ಅದಕ್ಕಿಂತಲೂ ಹೆಚ್ಚಿನ ಪರಿಸರ ನಾಶ ಆಗುತ್ತಿದೆ ಎಂಬುದರ ಕುರಿತು ಈಗ ಹಲವರು ಧ್ವನಿ ಎತ್ತಲಾರಂಭಿಸಿದ್ದಾರೆ. ಬ್ಯಾಟರಿ ಚಾಲಿತ ವಾಹನವೂ ಪರಿಸರಕ್ಕೆ ಪೂರಕವಲ್ಲ ಎಂದಾದರೆ, ಪರ್ಯಾಯ ಇಂಧನ ಹುಡುಕಾಟದಲ್ಲಿ ವಾಹನ ಕ್ಷೇತ್ರ ನಿರಂತರ ಹುಡುಕಾಟ ನಡೆಸುತ್ತಲೇ ಇದೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ