Sunday Foglight: ಪ್ರಮುಖ ಕಂಪನಿಗಳು EVಗಳಿಂದ ದೂರ ಸರಿಯುತ್ತಿವೆಯೇ…?

ಫೋರ್ಡ್‌, ಜನರಲ್ ಮೋಟಾರ್ಸ್‌, ಮರ್ಸಿಡೀಸ್ ಬೆಂಜ್, ಫೋಕ್ಸ್‌ವ್ಯಾಗನ್‌, ಜಾಗ್ವಾರ್ ಲ್ಯಾಂಡ್‌ರೋವರ್‌ ಮತ್ತು ಆಸ್ಟನ್ ಮಾರ್ಟಿನ್‌ ಸೇರಿದಂತೆ ವಿಲಾಸಿ ಕಾರು ತಯಾರಕರು ಎಲೆಕ್ಟ್ರಿಕಲ್ ವಾಹನ ತಯಾರಿಕೆಯಿಂದ ಹಿಂದೆ ಸರಿದಿದ್ದಾರೆ. ಇನ್ನೂ ಕೆಲವರು ಯೋಜನೆಯನ್ನೇ ವಿಳಂಬ ಮಾಡುತ್ತಿದ್ದಾರೆ.

ಹಾಗಿದ್ದರೆ ಮತ್ತೆ ಸಪ್ಲೈ ಚೈನ್ ಎಂಬ ಪೂರಕ ಸರಪಳಿ ತುಂಡಾಯಿತೇ? ಅಥವಾ ಬ್ಯಾಟರಿ ಪೂರೈಕೆ ನಿಂತಿತೇ? ಅಥವಾ ಲೀಥಿಯಂ ಪೂರೈಕೆಯನ್ನು ಚೀನಾ ಸ್ಥಗಿತಗೊಳಿಸಿತೇ ಎಂಬಿತ್ಯಾದಿ ಪ್ರಶ್ನೆಗಳು ಸ್ಮೃತಿ ಪಟಲದಲ್ಲಿ ಹಾದು ಹೋಗಬಹುದು.

ವಾಹನಗಳ ಮಾರಾಟದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದರೂ, ಬ್ಯಾಟರಿ ಚಾಲಿತ (ಇವಿ) ವಾಹನಗಳಿಗೆ ಬೇಡಿಕೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದು ವಾಸ್ತವ. ಇದರ ಬದಲಾಗಿ ಹೈಬ್ರಿಡ್‌ ಜೊತೆಗೆ ಗ್ಯಾಸ್ ಚಾಲಿತ ವಾಹನಗಳ ಶ್ರೇಣಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂಬುದು ಮತ್ತೊಂದು ಸತ್ಯಕ್ಕೆ ಹತ್ತಿರವಾದ ಸುದ್ದಿ.

ಆರಂಭದಲ್ಲಿ ಇವಿ ಮಾರುಕಟ್ಟೆ ಸಾಕಷ್ಟು ನಿರೀಕ್ಷೆ ಮತ್ತು ಪ್ರಚಾರದಿಂದ ವ್ಯಾಪಕವಾಗಿ ಎಲ್ಲೆಡೆ ಪ್ರಸಿದ್ಧಿ ಪಡೆದಿಯಿತು. ವಾಹನ ತಯಾರಕರೂ ಈ ಕ್ಷೇತ್ರದ ಕುರಿತು ಹಲವು ಭರವಸೆ ಹೊಂದಿದ್ದರು. ಆದರೆ ಈಗ ಇವಿಗಳಿಗೆ ಬೇಡಿಕೆ ನಿರೀಕ್ಷಿಸಿದಂತಿಲ್ಲ. ಹೀಗಾಗಿ ಜಗತ್ತಿನ ಪ್ರಮುಖ ಆಟೊ ಮೇಕರ್‌ಗಳು ಇವಿಗಳಿಂದ ವಿಮುಖರಾಗುವ ಚಿಂತನೆಯಲ್ಲಿದ್ದಾರೆ ಎಂದು ವರದಿಯಾಗಿದೆ.

2023ರ ಪರಿಸ್ಥಿತಿಯನ್ನೇ ಪರಿಗಣಿಸಿದರೂ ಇವಿ ಮಾರುಕಟ್ಟೆ ಶೇ 55ರಷ್ಟಿತ್ತು. ಇದು ಆಶಾದಾಯಕವಲ್ಲ ಎಂಬುದು ಕಂಪನಿಗಳ ಅಂಬೋಣ. ಹೀಗಾಗಿ ಟೆಸ್ಲಾ ಕೂಡಾ ಇವಿ ತಯಾರಿಕೆಯನ್ನು ತುಸು ಮಟ್ಟಿಗೆ ತಗ್ಗಿಸಿದೆ. ಈ ವಿಷಯವನ್ನು ಸ್ವತಃ ಮಸ್ಕ್ ಅವರೇ ಕಳೆದ ವರ್ಷದ ಅಂತ್ಯದಲ್ಲಿ ಹೇಳಿದ್ದನ್ನು ಇಲ್ಲಿ ಗಮನಿಸಬಹುದು.

ಪೆಟ್ರೋಲ್ ಅಥವಾ ಡೀಸೆಲ್‌ ಚಾಲಿತ ವಾಹಕ್ಕೆ ಬ್ಯಾಟರಿ ಅಳವಡಿಸಿ ಹೈಬ್ರೀಡ್‌ ವಾಹನಗಳ ತಯಾರಿಕೆಯತ್ತ ವಾಹನ ತಯಾರಕರು ಈಗ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.

2021 ಹಾಗೂ 2022ರಲ್ಲಿ ಇವಿಗಳಿಗೆ ಮಾರುಕಟ್ಟೆ ತೆರೆಯಿತು. ಅಸಲಿಗೆ ಬೇಡಿಕೆಯೂ ಏರತೊಡಗಿತು. ಆದರೆ ಇದು ಬೆಳೆಯುತ್ತದೆ ಎಂಬ ನಮ್ಮ ನಿರೀಕ್ಷೆ ಮಾತ್ರ ಹುಸಿಯಾಯಿತು ಎಂದು ಫೋರ್ಡ್‌ ಇವಿ ಘಟಕದ ಸಿಇಒ ಮರಿನ್ ಅವರು ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.

ಫೋರ್ಡ್ ತನ್ನ ಉತ್ಪಾದನೆ ಮತ್ತು ಹೈಬ್ರಿಡ್ ಮಾದರಿಗಳ ಮಾರಾಟವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ಇದು ಸಂಪೂರ್ಣ ಎಲೆಕ್ಟ್ರಿಕ್ ಮಾದರಿಗಳನ್ನು ಅಪೇಕ್ಷಿಸದ ಚಾಲಕರಿಗೆ ಹೆಚ್ಚು ಇಷ್ಟವಾಗುತ್ತೆದೆ. ಕಾರ್ಬನ್ ಹೊರಸೂಸುವಿಕೆಗಾಗಿ ಕಂಪನಿಗಳು ಕಠಿಣವಾದ ಫೆಡರಲ್ ಮಾನದಂಡಗಳನ್ನು ಪೂರೈಸಲೂ ಅವರು ಸಹಾಯ ಮಾಡಬಹುದು.

ಮತ್ತೊಂದೆಡೆ ಜನರಲ್ ಮೋಟಾರ್ ಕಂಪನಿಯು ಸಂಪೂರ್ಣ ಇವಿ ಬದಲಾಗಿ, ಇಂಧನ ಚಾಲಿತ ವಾಹನಗಳಿಗೆ ಪ್ಲಗ್ ಇನ್ ಎಲೆಕ್ಟ್ರಿಕ್ ಹೈಬ್ರಿಡ್‌ ವಾಹನಗಳನ್ನು ಹೊರತರುವ ಚಿಂತನೆ ನಡೆಸಿದೆ. ಹಂಡೇ, ಕಿಯಾ, ಫೋಕ್ಸ್‌ವ್ಯಾಗನ್‌ ಕಂಪನಿಗಳೂ ಸಹ ಸಂಪೂರ್ಣ ಬ್ಯಾಟರಿ ಚಾಲಿತ ವಾಹನಗಳ ತಯಾರಿಕೆಯನ್ನು ಕೈಬಿಡುವತ್ತ ಯೋಜಿಸುತ್ತಿವೆ.

‘ಸಮತೋಲಿತ ವಿಧಾನವೇ ಉತ್ತಮ ಮಾರ್ಗ ಎಂದು ನಾನು ಭಾವಿಸುತ್ತೇನೆ,” ಎಂದು ಅಮೆರಿಕದ ಸಿಇಒ ಪ್ಯಾಬ್ಲೊ ಡಿ ಸಿ ಕಳೆದ ತಿಂಗಳು CNBC ಗೆ ತಿಳಿಸಿದ್ದು ಕೂಡಾ ಈ ವಾದಕ್ಕೆ ಪುಷ್ಟಿ ನೀಡಿದೆ.

ಟೆಸ್ಲಾದ ಆರಂಭಿಕ ಯಶಸ್ಸನ್ನು ಎಲ್ಲರೂ ಅನುಕರಿಸಲು ಬಯಸುತ್ತಿದ್ದಾರೆ ಎನ್ನುವುದು ಸತ್ಯ. ಆದರೆ ಇವರೆಲ್ಲರೂ ತಮ್ಮ ಇವಿ ಯೋಜನೆಗಳನ್ನು ಕನಿಷ್ಠ 8 ವರ್ಷಗಳಿಗೆ ಮುಂದೂಡಿರುವುದು ಕುತೂಹಲ ಮೂಡಿಸಿದೆ.

ಹೀಗೇ ಇದನ್ನು ಸೂಕ್ಷ್ಮವಾಗಿ ನೋಡಿದರೆ, ಆಲ್ಫಾ ರೋಮಿಯೊ 2027ರ ವೇಳೆಗೆ ಆಲ್ ಎಲೆಕ್ಟ್ರಿಕ್‌ ವಾಹನ ಹೊರತರುವುದಾಗಿ ಹೇಳಿದೆ. ಜಾಗ್ವಾರ್ ಲ್ಯಾಂಡ್‌ರೋವರ್‌ ಮತ್ತು ಜನರಲ್ ಮೋಟಾರ್ಸ್‌ ಕಂಪನಿಗಳು 2035ರ ಹೊತ್ತಿಗೆ, ಕ್ಯಾಡಿಲಾಕ್‌ 2030ರ ಹೊತ್ತಿಗೆ ಸಂಪೂರ್ಣ ಇವಿ ಕಾರುಗಳನ್ನು ಉತ್ಪಾದಿಸುವುದಾಗಿ ಹೇಳಿದೆ. ಹೀಗೆ ಹೊಂಡಾ ಕೂಡಾ 2040ರ ಹೊತ್ತಿಗೆ ಬ್ಯಾಟರಿ ಚಾಲಿತ ವಾಹನ ಮತ್ತು ಇಂಧನ ಕೋಶ ಹೊಂದಿರುವ ಕಾರನ್ನು ಪ್ರತ್ಯೇಕವಾಗಿ ಮಾರುಕಟ್ಟೆಗೆ ತರುವುದಾಗಿ ಹೇಳಿದೆ. ಲೋಟಸ್ ಹಾಗೂ ಬೆಂಟ್ಲೆ ಕೂಡಾ ಇದೇ ಅವಧಿಯಲ್ಲಿ ಇವಿಗಳನ್ನು ತರುವುದಾಗಿ ಹೇಳಿವೆ.

ಆದರೆ ಈ ಗುರಿ ವಿಳಂಬಕ್ಕೆ ಇವುಗಳು ಕಾರಣಗಳನ್ನು ಅಧಿಕೃತವಾಗಿ ತಿಳಿಸಿಲ್ಲವಾದರೂ, ದೊಡ್ಡ ದೊಡ್ಡ ಕಾರು ತಯಾರಿಕಾ ಕಂಪನಿಗಳು ಈ ಕ್ಷೇತ್ರದಲ್ಲಿ ವಿಳಂಬ ಧೋರಣೆಯನ್ನಂತೂ ಅನುಸರಿಸುತ್ತಿವೆ.

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ