ದೇಶದ ಮುಂಚೂಣಿಯ ಹಾಗೂ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ ಗುರುತಿಸಿಕೊಂಡಿದೆ. ಕಂಪನಿಯು ಶೀಘ್ರದಲ್ಲಿಯೇ ಆಕರ್ಷಕ ವೈಶಿಷ್ಟ್ಯ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ 4 ಹೊಚ್ಚ ಹೊಸ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲು ತಯಾರಿಯನ್ನು ನಡೆಸುತ್ತಿದೆ.
ಟಾಟಾ ಕರ್ವ್ (Tata Curvv) ಎಸ್‌ಯುವಿ
ಈ ಕಾರು ಹಲವು ಬಾರಿ ಪರೀಕ್ಷಾರ್ಥ ಸಂಚಾರವನ್ನು ನಡೆಸುವಾಗ ಕಂಡುಬಂದಿದೆ. ಇತ್ತೀಚೆಗೆ ಚಾರ್ಜಿಂಗ್ ಸ್ಟೇಷನ್ ನಿಂತಿದ್ದ ಕರ್ವ್ ಎಸ್‌ಯುವಿ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು. ನೂತನ ಕರ್ವ್, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿರಲಿದೆ ಎಂದು ತಿಳಿದುಬಂದಿದೆ. ಟಾಟಾ, ಕರ್ವ್ ಎಸ್‌ಯುವಿಯನ್ನು ಎಲೆಕ್ಟ್ರಿಕ್ ಮತ್ತು ಇಂಧನ ಚಾಲಿತ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ. ಕರ್ವ್ ಇವಿಯು ನೆಕ್ಸಾನ್ ಇವಿಯಂತೆ 30 ಕೆಡಬ್ಲ್ಯೂಹೆಚ್ ಮತ್ತು 40.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಭರ್ತಿ ಚಾರ್ಜ್ ನಲ್ಲಿ 325 – 465 ಕಿ.ಮೀ ಕ್ರಮಿಸಲಿದೆ ಎಂದು ಅಂದಾಜಿಸಲಾಗಿದೆ. ಇಂಧನ ಚಾಲಿತ ಕಾರು 1.2-ಲೀಟರ್ ಪೆಟ್ರೋಲ್ – 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.
ಟಾಟಾ ಪಂಚ್ (Tata Punch)
ಕೆಲ ತಿಂಗಳ ಹಿಂದೆಯಷ್ಟೇ ನವೀನ ವಿನ್ಯಾಸದೊಂದಿಗೆ ಪಂಚ್ ಇವಿ ಬಿಡುಗಡೆಯಾಗಿತ್ತು. ಬಹುತೇಕ ಈ ವರ್ಷವೇ ಇಂಧನ ಚಾಲಿತ ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಆವೃತ್ತಿಯು ಪರಿಚಯಗೊಳ್ಳುವ ನಿರೀಕ್ಷೆಯಿದೆ.
ನೂತನ ಪಂಚ್ ಕಾರು ಉತ್ತಮವಾದ ವಿನ್ಯಾಸವನ್ನು ಪಡೆದಿರಲಿದ್ದು, ಮುಂಭಾಗ ಆಕರ್ಷಕ ಹೆಡ್‌ಲ್ಯಾಂಪ್ಸ್, ಎಲ್ಇಡಿ ಡಿಆರ್‌ಎಲ್, ನವೀಕೃತ ಬಂಪರ್ ಅನ್ನು ಹೊಂದಿರಬಹುದು. ಒಳಭಾಗವು ಹೆಚ್ಚು ಅತ್ಯುತ್ತಮವಾಗಿರಲಿದೆ. ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿರಲಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.
ಟಾಟಾ ಮಾರಾಟಗೊಳಿಸುವ ಶಕ್ತಿಯುತ ಸಫಾರಿ (Safari) ಹಾಗೂ ಹ್ಯಾರಿಯರ್ (Harrier) ಎಸ್‌ಯುವಿಗಳು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿ ಲಭ್ಯವಿವೆ. ಮುಂಬರುವ ಕೆಲವೇ ತಿಂಗಳಲ್ಲಿ ಪೆಟ್ರೋಲ್ ಚಾಲಿತ ರೂಪಾಂತರಗಳನ್ನು ಸಹ ಕಂಪನಿಯು ಬಿಡುಗಡೆಗೊಳಿಸಬಹುದು. ಇವು 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಸಫಾರಿ ಎಸ್‌ಯುವಿ, ರೂ.16.19 ಲಕ್ಷದಿಂದ 27.34 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿರುವ ಈ ಕಾರು, 16.3 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ. ಟಾಟಾ ಹ್ಯಾರಿಯರ್ ರೂ.15.49 ಲಕ್ಷದಿಂದ ರೂ.26.44 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಜೊತೆಗೆ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.