ಇತ್ತೀಚೆಗೆ ಪುಣೆಯಲ್ಲಿ ನಡೆದ ಟಾಟಾ.ಇವಿ ಕಾರ್ಯಕ್ರಮದಲ್ಲಿ ಕಂಪನಿಯು ತನ್ನ ಬಹು ಬೇಡಿಕೆಯ ಟಾಟ ಹ್ಯಾರಿಯರ್ನ ಬ್ಯಾಟರಿ ಚಾಲಿತ ಆವೃತ್ತಿಯನ್ನು ಪರಿಚಯಿಸಿತು.
ಸದ್ಯ ಭಾರತದಲ್ಲಿ ಎಸ್ಯುವಿಗಳಿಗೆ ಭಾರೀ ಬೇಡಿಕೆ ಇದ್ದು, ಹಂತಹಂತವಾಗಿ ಈ ಮಾದರಿಯ ಹಲವು ಕಾರುಗಳು ಬ್ಯಾಟರಿ ಚಾಲಿತ ಕಾರುಗಳಾಗಿ ಪರಿವರ್ತನೆ ಹೊಂದಿವೆ. ಇದಕ್ಕೆ ಹೊಸ ಸೇರ್ಪಡೆ ಹ್ಯಾರಿಯರ್.
ಇವಿ ಮಾದರಿಯ ಹ್ಯಾರಿಯರ್ ಕಾರನ್ನು Acti.ev ಪ್ಲಾಟ್ಫಾರ್ಮ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆ ಮೂಲಕ ದಕ್ಷತೆ ಮತ್ತು ಚಾಲನಾ ಅನುಭೂತಿಯನ್ನು ಮತ್ತಷ್ಟು ಹಿತಕರವಾಗಿರುವಂತೆ ಅಭಿವೃದ್ಧಿಪಡಿಸಲಾಗಿದೆ. ವಿವಿಧ ಮಾದರಿಯ ಭೂಪ್ರದೇಶಗಳಲ್ಲೂ ಕಾರು ಸ್ಥಿರತೆಯನ್ನು ಕಾಪಾಡಿಕೊಂಡು, ನಿಯಂತ್ರಣ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ನೆರವಾಗುವಂತೆ ಆಲ್ ವೀಲ್ ಡ್ರೈವ್ ಹೊಸ ಹ್ಯಾರಿಯರ್ ಇವಿಯಲ್ಲಿದೆ.
ಹೆಚ್ಚುವರಿಯಾಗಿ, ಮಲ್ಟಿ-ಲಿಂಕ್ ರಿಯರ್ ಸಸ್ಪೆಂಷನ್ ಅನ್ನು ಸೇರಿಸಲಾಗಿದೆ. ಇದರಿಂದ ಪ್ರಯಾಣವು ಆರಾಮದಾಯಕವಾಗಿ ಮತ್ತು ಹೆಚ್ಚಿನ ಚಾಲನಾ ಅನುಭೂತಿ ನೀಡುವಂತೆ ವಿನ್ಯಾಸ ಮಾಡಲಾಗಿದೆ.
ಹ್ಯಾರಿಯರ್ನ ಇವಿ ಮಾದರಿ ಕಾರು ಪ್ರತಿ ಬಾರಿಯ ಸಂಪೂರ್ಣ ಚಾರ್ಜ್ಗೆ 500 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎಂದೆನ್ನಲಾಗಿದೆ. ಹ್ಯಾರಿಯರ್ನ ಇವಿ ಕ್ಲೋಸ್ಡ್ ಆಫ್ ಗ್ರಿಲ್, ಲಂಬವಾದ ಸ್ಲಾಟ್ಗಳೊಂದಿಗೆ ಹೊಸ ವಿನ್ಯಾಸದ ಬಂಪರ್ ಮತ್ತು ಆನಿಮೇಷನ್ಗಳನ್ನು ಹೊಂದಿರುವ ಡಿಆರ್ಎಲ್ ಎಲ್ಇಡಿ ಲೈಟ್ಗಳು ಇದರಲ್ಲಿ ಅಳವಡಿಸಲಾಗಿದೆ. ಹೆಡ್ಲ್ಯಾಂಪ್ಗಳಿಗೂ ಎಲ್ಇಡಿ ಬಲ್ಬ್ ಬಳಸಲಾಗಿದೆ.
ಒಳಭಾಗದಲ್ಲಿ 12.3 ಇಂಚುಗಳ ಟಚ್ಸ್ಕ್ರೀನ್ ಮಾದರಿಯ ಇನ್ಫೊಟೈನ್ಮೆಂಟ್ ವ್ಯವಸ್ಥೆ. ಇದಕ್ಕೆ ಆ್ಯಪಲ್ ಕಾರ್ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೊಗಳೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. 10.25 ಇಂಚುಗಳ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದೆ. ಪ್ಯಾನಾರೊಮಿಕ್ ಸನ್ರೂಫ್, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು, ಡುಯಲ್ ಝೋನ್ ಕ್ಲೈಮೆಟ್ ಕಂಟ್ರೋಲ್, ಜೆಬಿಎಲ್ ಕಂಪನಿಯ 10 ಸ್ಪೀಕರ್ಗಳನ್ನು ಅಳವಡಿಸಲಾಗಿದೆ. ಸಬ್ವೂಫರ್ ಹಾಗೂ ಆ್ಯಂಬಿಯಂಟ್ ಲೈಟಿಂಗ್ ನೀಡಲಾಗಿದೆ.
ಸುರಕ್ಷತೆಯ ದೃಷ್ಟಿಯಿಂದ ಹ್ಯಾರಿಯರ್ ಇವಿಯಲ್ಲಿ ಏಳು ಏರ್ಬ್ಯಾಗ್ಗಳನ್ನು ನೀಡಲಾಗಿದೆ. ಎಬಿಎಸ್ ಮತ್ತು ಇಬಿಡಿ, 360 ಡಿಗ್ರಿ ಕ್ಯಾಮೆರಾ, ಮುಂದೆ ಹಾಗೂ ಹಿಂದೆ ಪಾರ್ಕಿಂಗ್ ಸೆನ್ಸರ್ಗಳು, ಎಲೆಕ್ಟ್ರಾನಿಕ್ ಸ್ಟಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕಿಂಗ್ ಮತ್ತು ಆಟೊ ಹೋಲ್ಡ್ ಸೌಲಭ್ಯ ನೀಡಲಾಗಿದೆ.
ಇದರೊಂದಿಗೆ ಸುಧಾರಿತ ಚಾಲಕ ನೆರವಿನ ವ್ಯವಸ್ಥೆ (ಎಡಿಎಎಸ್), ಹೆಚ್ಚುವರಿ ಇವಿ ಸೌಲಭ್ಯಗಳಾದ ಸುಮ್ಮನ್ ಮೋಡ್, ವೆಹಿಕಲ್ ಟು ಲೋಡ್ ಹಾಗೂ ವೆಹಿಕಲ್ ಟು ಚಾರ್ಜ್ ಸೌಲಭ್ಯವೂ ಹ್ಯಾರಿಯರ್ನಲ್ಲಿ ಅಳವಡಿಸಲಾಗಿದೆ.
ಕಾರಿನ ಬೆಲೆ ಮತ್ತು ಅಧಿಕೃತವಾಗಿ ಗ್ರಾಹಕರಿಗೆ ಎಂದು ಲಭ್ಯ ಎಂಬ ಮಾಹಿತಿಯನ್ನು ಟಾಟಾ ಮೋಟರ್ಸ್ ನೀಡಿಲ್ಲ.