ಮುಂಬೈ: ವಿದ್ಯಾರ್ಥಿಗಳಿಗೆ ವಾಹನ ಉದ್ಯಮದ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿಸಲು ಮತ್ತು ಆ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಜವಾಹರ ನವೋದಯ ಶಾಲೆಗಳಲ್ಲಿ (ಜೆಎನ್‌ವಿ) ಆಟೊ ಲ್ಯಾಬ್‌ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ.
ನವೋದಯ ವಿದ್ಯಾಲಯಗಳ ಸಮಿತಿ ಸಹಭಾಗಿತ್ವದೊಡನೆ ಟಾಟಾ ಮೋಟರ್ಸ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಡಿ ಈ ಹೆಜ್ಜೆ ಇಟ್ಟಿದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರ ಪ‍್ರದೇಶ ಹಾಗೂ ಉತ್ತರಾಖಂಡದ ಆಯ್ದ ನವೋದಯ ಶಾಲೆಗಳಲ್ಲಿ ಈ ಆಟೊ ಲ್ಯಾಬ್‌ಗಳನ್ನು ತೆರೆಯಲಾಗುತ್ತಿದೆ ಎಂದು ಕಂಪನಿ ಸೋಮವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.
‘ಸದ್ಯ 25 ಶಾಲೆಗಳಲ್ಲಿ ಸುಸಜ್ಜಿತ ಆಟೊ ಲ್ಯಾಬ್‌ಗಳನ್ನು ನಿರ್ಮಿಸಲಾಗಿದೆ’ ಎಂದು ಟಾಟಾ ಮೋಟಾರ್ಸ್‌ನ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ವಿನೋದ್ ಕುಲಕರ್ಣಿ ತಿಳಿಸಿದ್ದಾರೆ.
ಭಾರತದ ಆಟೊಮೊಬೈಲ್ ಕ್ಷೇತ್ರಕ್ಕೆ ಪ್ರತಿಭಾವಂತ ಯುವಕರನ್ನು ಸೆಳೆಯುವ ಉದ್ದೇಶವನ್ನು ಇದರಲ್ಲಿ ಹೊಂದಲಾಗಿದೆ. ಸೆಕೆಂಡೆರಿ ಹಾಗೂ ಹೈಯರ್ ಸೆಕೆಂಡೆರಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಆಟೊ ಲ್ಯಾಬ್ ಸೌಲಭ್ಯ ಪಡೆದುಕೊಳ್ಳಲು ಯೋಜನೆ ರೂಪಿಸಲಾಗಿದೆ. ಆಟೊ ಲ್ಯಾಬ್‌ನಲ್ಲಿನ ಶಿಕ್ಷಣ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ನವೋದಯ ವಿದ್ಯಾಲಯಗಳ ಸಮಿತಿ ಹಾಗೂ ಟಾಟಾ ಮೋಟರ್ಸ್ ಜಂಟಿಯಾಗಿ ಪ್ರಮಾಣಪತ್ರ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳು ಟಾಟಾ ಮೋಟರ್ಸ್‌ನ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಬೇರೆ ಕಡೆಗೆ ಆಟೊಮೊಬೈಲ್ ಡಿಪ್ಲೊಮಾ ಓದಲು ನೇರವಾಗಿ ಸೇರಬಹುದು ಎಂದು ತಿಳಿಸಿದ್ದಾರೆ.