Tata Safari, Harrier, Nexon EV Bandipur Edition: ಆನೆ ಲಾಂಛನ; ಅರಣ್ಯ ಹಸಿರು, ಕಪ್ಪು ಬಣ್ಣ ಬಳಕೆ

Tata Safari Bandipur Edition

ನವದೆಹಲಿ: ವನ ಹಾಗೂ ವನ್ಯಜೀವಿಗಳ ಪರಿಕಲ್ಪನೆಯಡಿ ಹೊಸ ಆವೃತ್ತಿಯ ಸಫಾರಿ ಕಾರನ್ನು ಬಿಡುಗಡೆ ಮಾಡುವ ಟಾಟಾ ಮೋಟಾರ್ಸ್‌ ಈ ಬಾರಿ ಕರ್ನಾಟಕದ ಬೃಹತ್ ವನ್ಯಜೀವಿ ಉದ್ಯಾನ ಬಂಡೀಪುರ ಹೆಸರಿನಲ್ಲಿ ಗಮನ ಸೆಳೆದಿದೆ. ಕೇವಲ ಸಫಾರಿ ಮಾತ್ರವಲ್ಲ, ಬದಲಿಗೆ ಹ್ಯಾರಿಯರ್‌ ಹಾಗೂ ನೆಕ್ಸಾನ್ ಇವಿ ಮಾದರಿಗೂ ಬಂಡೀಪುರದ ಸ್ಪರ್ಶ ನೀಡಲಾಗಿದೆ.

ದೆಹಲಿ ಗ್ರೇಟರ್ ನೊಯಿಡಾದಲ್ಲಿ ನಡೆಯುತ್ತಿರುವ ಆಟೊ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್‌ ಹೊಸ ಅವತಾರದಲ್ಲಿ ಟಾಟಾ ಮೋಟಾರ್ಸ್‌ ಅನ್ನು ಬಿಡುಗಡೆ ಮಾಡಿದೆ. ಕಾಜಿರಂಗ ಆವೃತ್ತಿಯ ನಂತರ ಇದೀಗ ಟಾಟಾ ಮೋಟಾರ್ಸ್ ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯಲ್ಲಿ ಸಫಾರಿಯ ನೂತನ ಆವೃತ್ತಿಯನ್ನು ಕರ್ನಾಟಕದ ‘ಬಂಡೀಪುರ’ ಹೆಸರಿನಲ್ಲಿ ಹೊರತಂದಿದೆ.

ಯುನೆಸ್ಕೊ ಮಾನ್ಯತೆ ಪಡೆದ ರಾಷ್ಟ್ರೀಯ ಉದ್ಯಾನಗಳಲ್ಲಿ ಅಸ್ಸಾಂನ ಕಾಜಿರಂಗ ಒಂದು. ಅಲ್ಲಿನ ಒಂದು ಕೊಂಬಿನ ಘೇಂಡಾಮೃಗದ ಚಿತ್ರವನ್ನು ತನ್ನ ಹಿಂದಿನ ಆವೃತ್ತಿಯ ಸಫಾರಿಯಲ್ಲಿ ಟಾಟಾ ಮುದ್ರಿಸಿತ್ತು. ಇದೀಗ ಬಂಡೀಪುರ ಆವೃತ್ತಿಯನ್ನು ಹೊರತಂದಿದ್ದು, ಆನೆಯ ಚಿತ್ರವನ್ನು ಕಾರಿನ ಅಲ್ಲಲ್ಲಿ ಮುದ್ರಿಸಿದೆ. ಬಂಡೀಪುರವು ಹುಲಿ, ಆನೆ ಹಾಗೂ ಇನ್ನಿತರ ಜೀವವೈವಿದ್ಯಗಳಿಗೆ ವಿಶ್ವದ ಮಾನ್ಯತೆ ಪಡೆದಿದೆ.

ಬಂಡೀಪುರ ಎಡಿಷನ್ ಸಫಾರಿಯು ಹೊಸ ಬಣ್ಣದಲ್ಲಿ ಲಭ್ಯ. ಕಪ್ಪು ಬಣ್ಣದ ಮೇಲ್ಚಾವಣಿ, ಒಳಾಂಗಣದಲ್ಲೂ ಹಲವು ಬದಲಾವಣೆಗಳನ್ನು ಕಂಪನಿ ಮಾಡಿದೆ. ಸಫಾರಿಯ ಹೊರಭಾಗದಲ್ಲಿ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಕಪ್ಪು ಅಲಾಯ್‌ ವೀಲ್‌, ಕಪ್ಪು ಬಣ್ಣದ ಒಆರ್‌ವಿಎಂ, ಬಂಡೀಪುರ ಆವೃತ್ತಿ ಎಂದು ಸಾರಲು ಹಲವೆಡೆ ಇದರ ಲಾಂಛನವನ್ನು ಬಳಸಲಾಗಿದೆ.

ಬಂಡೀಪುರ ಆವೃತ್ತಿಯ ಸಫಾರಿಯಲ್ಲಿ ಆನೆ ಮೈಬಣ್ಣವಾದ ಕಪ್ಪನ್ನು ಹೆಚ್ಚಾಗಿ ಬಳಕೆ ಮಾಡಲಾಗಿದೆ. ರೂಫ್‌ ಟಾಪ್‌ನಿಂದ ಹಿಡಿದು, ಕ್ಯಾಬಿನ್‌ನಲ್ಲಿ ಕಪ್ಪು ಒಳಗೊಂಡು ಎರಡು ಬಣ್ಣಗಳ ಡ್ಯಾಷ್‌ ಬೋರ್ಡ್‌ ಈ ಆವೃತ್ತಿಯಲ್ಲಿ ಲಭ್ಯ. ಸೀಟಿನ ಹೆಡ್‌ರೆಸ್ಟ್‌ನಲ್ಲಿ ಹೊಸ ಮಾದರಿಯ ಲಾಂಛನ ಬಳಸಲಾಗಿದೆ. ಇದರೊಂದಿಗೆ 12.3 ಇಂಚಿನ ಇನ್ಫೊಟೈನ್ಮೆಂಟ್‌ ಪರದೆ, ಮುಂಭಾಗದ ಆಸನಗಳು ವೆಂಟಿಲೇಟೆಡ್‌ ಹಾಗೂ ಪವರ್‌ ಮೋಡ್ ಇರುವಂಥದ್ದು, ಟೈಲ್‌ಗೇಟ್‌ ಕೂಡಾ ವಿದ್ಯುತ್ ಚಾಲಿತ, ಡುಯಲ್ ಟೋನ್ ಕ್ಲೈಮೆಟ್ ಕಂಟ್ರೋಲ್‌ ಎಸಿ, 360 ಡಿಗ್ರಿ ಕ್ಯಾಮೆರಾ ಮತ್ತು 2ನೇ ಹಂತರ ಎಡ್ಯಾಸ್‌ ಇದರಲ್ಲಿದೆ.

2 ಲೀಟರ್‌ ಸಾಮರ್ಥ್ಯದ ಡೀಸೆಲ್‌ ಎಂಜಿನ್ ಅನ್ನು ಇದು ಹೊಂದಿದೆ. 170 ಅಶ್ವಶಕ್ತಿ ಹಾಗೂ 350 ಎನ್‌ಎಂ ಟಾರ್ಕ್‌ ಅನ್ನು ಇದು ಉತ್ಪಾದಿಸಲಿದೆ. ಆರು ಗೇರ್‌ಗಳ ಮ್ಯಾನುಯಲ್ ಹಾಗೂ ಆಟೊ ಗೇರ್‌ಗಳು ಲಭ್ಯ. 

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ